ಬಾಗಲಕೋಟೆ: ಜ್ಞಾನವೆಂಬುದು ಯಾರಪ್ಪನ ಸ್ವತ್ತು ಅಲ್ಲ. ಸಾಧನೆಗೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ. ಸಾಧಿಸುವ ಛಲವೊಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವ ಭಾಗ್ಯಶ್ರೀ ಮಾದರ ಅವರೇ ಸಾಕ್ಷಿ.. ಬಾಗಲಕೋಟೆಯ (Bagalkot News) ಗಂಗೂರ ಗ್ರಾಮದ ಭಾಗ್ಯಶ್ರೀ ಮಾದರ ಅವರು ಬಡ ಕುಟುಂಬದವರು. ತಂದೆ, ತಾಯಿ ಕೂಲಿ ಮಾಡಿ ಮಕ್ಕಳನ್ನು ಓದಿಸಿದ್ದರು. ಕನ್ನಡ ಮೀಡಿಯಂ ಸ್ಟೂಡೆಂಟ್ ಆದ ಭಾಗ್ಯಶ್ರೀ 2023ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ ಆಗಿದ್ದಾರೆ.
ತಂದೆಯ ಹಠವೇ ಸಾಧನೆಗೆ ಪ್ರೇರಣೆ
ನ್ಯಾಯಾಧೀಶೆಯಾಗುವ ನನ್ನ ಕನಸನ್ನು ನನಸಾಗಿಸಿಕೊಂಡಿದ್ದೇನೆ. ತಂದೆಯ ಹಠವೇ ನನ್ನ ಈ ಸಾಧನೆಗೆ ಪ್ರೇರಣೆ ಆಯಿತು. ತಂದೆ-ತಾಯಿಯ ತ್ಯಾಗದಿಂದಲೇ ನ್ಯಾಯಾಧೀಶೆಯಾಗಲು ಕಾರಣವಾಯಿತು ಎಂದು ಭಾಗ್ಯಶ್ರೀ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಎಲ್ಎಲ್ಬಿ ಪದವಿಯನ್ನು ನಂದಿಮಠ ಕಾಲೇಜಿನಲ್ಲಿ ಪಡೆದ ಭಾಗ್ಯಶ್ರೀಗೆ ತಾವು ಸೋತಾಗ, ತಾಳ್ಮೆ ಕಳೆದುಕೊಂಡ ಮಹಾಭಾರತ, ಭಗವದ್ಗೀತೆಯೇ ಸ್ಫೂರ್ತಿ ಆಗಿದೆ ಅಂತೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ರೀತಿಯಲ್ಲಿ ಕರ್ತವ್ಯದಲ್ಲಿ ನಿರತಳಾಗಬೇಕೆಂದು ಆಸೆ ಹೊಂದಿದ್ದಾರೆ. ಮುಂದಿನ ದಿನದಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗುವ ಗುರಿಯೂ ಇದ್ದು, ಇದಕ್ಕಾಗಿ ತಯಾರಿ ನಡೆಸುವುದಾಗಿ ತಿಳಿಸಿದ್ದಾರೆ.
ಕೂಲಿ ಮಾಡಿ ಮಗಳ ಕನಸು ನನಸು
ಭಾಗ್ಯಶ್ರೀ ತಂದೆ ದುರ್ಗಪ್ಪ, ತಾಯಿ ಯಮನವ್ವ ಬಡವರು. ಕೂಲಿನಾಲಿ ಮಾಡುವ ಈ ದಂಪತಿ ಇಬ್ಬರೂ ಅನಕ್ಷರಸ್ಥರಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ದುರ್ಗಪ್ಪ, ಯಮನವ್ವ ದಂಪತಿಯ ಏಳು ಮಕ್ಕಳ ಪೈಕಿ ಭಾಗ್ಯಶ್ರೀ 5ನೇಯವರು. 2018ರಲ್ಲಿ ಕಾನೂನು ಪದವಿ ಪಡೆದಿರುವ ಭಾಗ್ಯಶ್ರೀ, ಹುನಗುಂದ ಕೋರ್ಟ್ನಲ್ಲಿ 2018-20ರವರೆಗೆ ಎರಡು ವರ್ಷಗಳ ಕಾಲ ವಕೀಲ ವೃತ್ತಿ ಆರಂಭಿಸಿದ್ದರು.
ಇದನ್ನೂ ಓದಿ: Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ
ಎರಡು ಬಾರಿ ಫೇಲ್ ಆಗಿದ್ದ ಭಾಗ್ಯಶ್ರೀ
2021-22ರವರೆಗೆ ಹೈಕೋರ್ಟ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಶುರು ಮಾಡಿದ್ದ ಭಾಗ್ಯಶ್ರೀ, ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆ ನಿರ್ವಹಣೆಯನ್ನೂ ಮಾಡುತ್ತಿದ್ದರು. ಕೆಲಸದ ಜತೆ ಜತೆಗೆ ನ್ಯಾಯಧೀಶೆ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು.
2021ರಲ್ಲಿ ಮೊದಲ ಬಾರಿ ಪರೀಕ್ಷೆ ಬರೆದಾಗ ಪಾಸ್ ಆಗಿದ್ದ ಭಾಗ್ಯಶ್ರೀ ಮೌಖಿಕ ಸಂದರ್ಶನದಲ್ಲಿ ಆಯ್ಕೆ ಆಗಿರಲಿಲ್ಲ. ಆದರೂ ಪ್ರಯತ್ನ ಬಿಡದೇ 2022ರಲ್ಲಿ ಮತ್ತೊಮ್ಮೆ ಎಲ್ಲ ಪರೀಕ್ಷೆಗಳನ್ನೂ ಪಾಸ್ ಮಾಡಿದ್ದರು. ಆದರೆ ಮತ್ತೆ ಮೌಖಿಕ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸದೇ ಅವಕಾಶವನ್ನು ಕಳೆದುಕೊಂಡಿದ್ದರು. ಇದರಿಂದ ಬೇಸರಗೊಂಡ ಭಾಗ್ಯಶ್ರೀ ತಾವು ಹೋಗುತ್ತಿದ್ದ ವಕೀಲಿ ವೃತ್ತಿಯನ್ನು ಬಿಟ್ಟು, ಮೂರನೇ ಬಾರಿಗೆ ಮಾಡಿದ ಪ್ರಯತ್ನದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ