ಬಾಗಲಕೋಟೆ: ನಟರಾಜ ಸಂಗೀತ ವಿದ್ಯಾಲಯ, ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನ.19ರಂದು ಸಂಜೆ 6 ಗಂಟೆಗೆ ಇಲ್ಲಿನ ನವನಗರದ ಕಲಾಭವನದಲ್ಲಿ “ಬಾಗಲಕೋಟೆ ರಾಷ್ಟ್ರೀಯ ಸಂಗೀತೋತ್ಸವʼ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ಕಲಾವಿದರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ(Sangeethotsava) ಮತ್ತು ಅನೋಖೆ ತಬಲಾ ವಾದಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಬಾಗಲಕೋಟೆ ಚರಂತಿಮಠದ ಶ್ರೀ ಮ.ನಿ.ಪ್ರ. ಪ್ರಭುಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಅಧ್ಯಕ್ಷತೆ ಹಾಗೂ ಹಿರಿಯ ತಬಲಾ ವಾದಕ ಪಂ.ಆರ್.ಎಚ್.ಮೋರೆ ಗೌರವಾಧ್ಯಕ್ಷತೆ ವಹಿಸಲಿದ್ದಾರೆ.
ಇದನ್ನೂ ಓದಿ | ಥಾಣೆಯಲ್ಲಿ ನ.19ಕ್ಕೆ ಸಪ್ತಕ-ಸಂಗೀತ, ಮುಂಬಯಿಯಲ್ಲಿ ನ.20ಕ್ಕೆ ಸ್ವರ-ಧಾರಾ ಕಾರ್ಯಕ್ರಮ
ಅತಿಥಿಗಳಾಗಿ ಮಾಜಿ ಶಾಸಕ ಎಚ್.ವೈ.ಮೇಟಿ, ಯುವ ಮುಖಂಡ ಮಲ್ಲಿಕಾರ್ಜುನ ಸಿ. ಚರಂತಿಮಠ, ಖ್ಯಾತ ಉದ್ಯಮಿ ಪವನ ಸೀಮಿಕೇರಿ, ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಧಾರವಾಡದ ಖ್ಯಾತ ಸಾಂಸ್ಕೃತಿಕ ಸಂಘಟಕ ನಿಜಗುಣ ರಾಜಗುರು, ಹೈಕೋರ್ಟ್ ಖ್ಯಾತ ನ್ಯಾಯವಾದಿ ಉದಯ ದೇಸಾಯಿ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ
ಕಾರ್ಯಕ್ರಮದಲ್ಲಿ ಧಾರವಾಡದ ಖ್ಯಾತ ಹಿರಿಯ ತಬಲಾ ವಾದಕ ಪಂಡಿತ್ ರಘುನಾಥ ನಾಕೋಡ ಅವರಿಗೆ ‘ಅನೋಖೆ ತಬಲಾ ವಾದಕ ಪ್ರಶಸ್ತಿ 2022’ ಪ್ರದಾನ ಮಾಡಲಾಗುತ್ತದೆ. ಧಾರವಾಡದ ಖ್ಯಾತ ಗಾಯಕ, ಕಾಳಿದಾಸ ಸಮ್ಮಾನ್ ಪುರಸ್ಕೃತ, ಪದ್ಮಶ್ರೀ ಪಂಡಿತ್ ಎಂ.ವೆಂಕಟೇಶಕುಮಾರ, ಬಾಗಲಕೋಟೆಯ ಖ್ಯಾತ ಗಾಯಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2022 ಪುರಸ್ಕೃತ ಪಂಡಿತ್ ಅನಂತ ಕುಲಕರ್ಣಿ, ವಿಪ್ರಶ್ರೀ ಪ್ರಶಸ್ತಿ 2022 ಪುರಸ್ಕೃತ ಸುರೇಂದ್ರ ಕುಲಕರ್ಣಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ.
ಅಹೋರಾತ್ರಿ ಸಂಗೀತ ಕಾರ್ಯಕ್ರಮ
ನಟರಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಮೂಹ ಗಾಯನ, ತಬಲಾವಾದನ ನಡೆಯಲಿದೆ. ಧಾರವಾಡದ ಗಾಯಕಿ ಐಶ್ವರ್ಯ ದೇಸಾಯಿ, ಮಂಗಳೂರಿನ ಸಿತಾರ್ ವಾದಕ ಅಂಕುಶ ನಾಯಕ, ದಿಲ್ಲಿಯ ಸಂತೂರ್ ವಾದಕ ಡಾ. ಬಿಪುಲ್ ರೇ, ಧಾರವಾಡದ ಗಾಯಕ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ, ತಬಲಾ ವಾದಕ ಪಂ.ರಘುನಾಥ ನಾಕೋಡ, ತಬಲಾ ವಾದಕ ರವಿಕಿರಣ ನಾಕೋಡ, ಗಾಯಕ ಡಾ.ವಿಜಯ ಕುಮಾರ ಪಾಟೀಲ, ಮುಂಬಯಿಯ ರೋಣು ಮುಜುಮ್ದಾರ, ವಯೋಲಿನ್ ವಾದಕ ವಿದ್ವಾನ್ ಮೈಸೂರು ಮಂಜುನಾಥ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಹಕಲಾವಿದರಾದ ತಬಲಾ ವಾದಕ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ, ಕೇಶವ್ ಜೋಶಿ, ಧಾರವಾಡದ ಡಾ.ರವಿಕಿರಣ್, ಬೆಂಗಳೂರಿನ ಮೃದಂಗ ವಾದಕರಾದ ವಿದ್ವಾನ್ ಅನಿರುದ್ಧ ಭಟ್, ಹಾರ್ಮೋನಿಯಂ ವಾದಕರಾದ ಮಂಗಳೂರಿನ ನರೇಂದ್ರ ಎಲ್.ನಾಯಕ, ಬೆಂಗಳೂರು ಸತೀಶ ಕೊಳ್ಳಿ ಕಾರ್ಯಕ್ರಮದಲ್ಲಿ ಇರಲಿದ್ದಾರೆ.
ಅನೋಕೆ ತಬಲವಾದಕ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಸೂರಜ ಪುರಂದರೆ(2015), ಬೆಂಗಳೂರಿನ ಪಂಡಿತ ಗೋವಿಂದರಾವ ಗರಗ(2016), ಪಂಡಿತ ರವೀಂದ್ರ ಯಾವಗಲ್(2017), ಉಡುಪಿಯ ಪಂಡಿತ ಸತ್ಯವಿಜಯ ಭಟ್(2018), ಬೆಂಗಳೂರಿನ ಪಂಡಿತ ರಾಜಗೋಪಾಲ ಕಲ್ಲೂರಕರ (2019), ಮುಂಬೈ ಪಂಡಿತ ಸದಾನಂದ ನಾಯಂಪಲ್ಲಿ (2020) ಉಪಸ್ಥಿತರಿರುವರು.
ಗದಗದ ಕುಮಾರಿ ಮಂಜರಿ ಹೊಂಬಾಳಿ, ಹುಬ್ಬಳ್ಳಿಯ ಸುಶೀಲೇಂದ್ರ ಕುಂದರಗಿ, ಬೆಂಗಳೂರಿನ ರೇಖಾ ನಾಯ್ಕರ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಇದನ್ನೂ ಓದಿ | Statue | ನ.17ರಂದು ಕಸಾಪ ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ