ಬಾಗಲಕೋಟೆ: ಬಾಗಲಕೋಟೆ ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಸುರಿದ ಮಳೆಗೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಬೆಳೆ ನಾಶವಾಗಿದೆ. ನಿರಂತರ ಮಳೆ ಅವಾಂತರ ದಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಾಗಲಕೋಟೆ ನಗರದ ಹೊರವಲಯದಲ್ಲಿರುವ ರೈತ ಎ.ಎಸ್. ದೊಡ್ಡಮನಿ ಅವರ ಜಮೀನಿನಲ್ಲಿ ಬೆಳೆದ ದ್ರಾಕ್ಷಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಟಾವಿಗೆ ಬಂದಿದ್ದ 8 ಎಕರೆ ದ್ರಾಕ್ಷಿ, 14 ಎಕರೆ ದಾಳಿಂಬೆ ನಾಶವಾಗಿ ಸುಮಾರು ₹50 ರಿಂದ ₹60 ಲಕ್ಷ ನಷ್ಟವಾಗಿದೆ.
ಇದನ್ನೂ ಓದಿ | Explainer: ಮೂರೇ ವರ್ಷದಲ್ಲಿ ಲಂಕೆಯನ್ನು ರಾಜಪಕ್ಸ ಕುಟುಂಬ ಮುಳುಗಿಸಿದ್ದು ಹೇಗೆ?
ಇವರು ದ್ರಾಕ್ಷಿ ಬೆಳೆಯಲು ಸುಮಾರು ₹20 ಲಕ್ಷ ಖರ್ಚು ಮಾಡಿದ್ದರು. ನಿರಂತರ ಮಳೆಯಿಂದಾಗಿ ದಾಳಿಂಬೆ ರೋಗಕ್ಕೆ ತುತ್ತಾಗಿದೆ. ದೊಡ್ಡಮನಿ ಕಳೆದ ಎರಡು ವರ್ಷದಿಂದಲೂ ದ್ರಾಕ್ಷಿ ಬೆಳೆಯಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಕೊರೋನಾ ಲಾಕ್‌ಡೌನ್ ವೇಳೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ದ್ರಾಕ್ಷಿ ಬೆಳೆ ಫಸಲಿಗೆ ಬಂದಿದ್ದರೆ ಇಷ್ಟೊತ್ತಿಗೆ ಚಾಟ್ನಿ (ಕಟಾವ್) ಮಾಡಿ ಮುಗಿಸಬೇಕಿತ್ತು. ಎರಡು ವರ್ಷ ಲಾಕ್‌ಡೌನ್‌ನಿಂದ ದ್ರಾಕ್ಷಿ ಚಾಟ್ನಿ ಮಾಡುವ ಕಾರ್ಯ ವಿಳಂಬವಾಗಿದೆ.
ಈ ವರ್ಷ ಬೆಳೆ ತಡವಾಗಿ ಬಂದಿದ್ದು, ಈಗ ಮಳೆಗೆ ಸಿಲುಕಿ ನಷ್ಟ ಅನುಭವಿಸುವಂತಾಗಿದೆ. ಇನ್ನು ಇವರ ಹದಿನಾರು ಎಕರೆ ದಾಳಿಂಬೆ ಬೆಳೆ ಕೂಡ ದುಂಡಾಣು ಅಂಡಮಾರಿ ರೋಗಕ್ಕೆ ಬಲಿಯಾಗಿದ್ದು,ಅದರಿಂದಲೂ ನಯಾಪೈಸೆ ಲಾಭ ಸಿಕ್ಕಿಲ್ಲ. ಇದೇ ರೀತಿ ಸುತ್ತಮುತ್ತಲಿನ ಅನೇಕ ರೈತರು ಬೆಳೆ ಹಾನಿ ನಷ್ಟ ಅನುಭವಿಸಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ, ದ್ರಾಕ್ಷಿ ಸೀಜನ್ ಮುಗಿದಿದೆ. ಎಲ್ಲೂ ಹಾನಿಯಾದ ಬಗ್ಗೆ ವರದಿ ಬಂದಿಲ್ಲ. ಬಾಳೆ, ವೀಳ್ಯದೆಲೆ ಸೇರಿ 58 ಎಕರೆ ಮಾತ್ರ ಹಾನಿಯಾದ ವರದಿ ಇದೆ ಎಂದಿದ್ದಾರೆ
ದ್ರಾಕ್ಷಿ ಎಲ್ಲೂ ಹಾನಿಯಾಗಿಲ್ಲ ಎಂಬ ವರದಿ ಇದೆ. ದ್ರಾಕ್ಷಿ ಹಾನಿಯಾಗಿರುವುದು ಖಚಿತವಾದರೆ ಸ್ಥಳಕ್ಕೆ ಭೇಟಿ ನೀಡಿ, ಎಸ್‌ಡಿಆರ್‌ಎಫ್ ಅಥವಾ ಎನ್‌ಡಿಆರ್‌ಎಫ್ ವ್ಯಾಪ್ತಿಗೆ ಬರುವುದಾದರೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಬಹುದು ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.
ಇದನ್ನೂ ಓದಿ| ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ