ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದರ ಜತೆಗೆ, ಎಷ್ಟು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವ ಕುರಿತು ಚಿಂತನೆ ನಡೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶಿವಕುಮಾರ್, ನಾನು ಒಂದೇ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿಯೇ ಒಂದೇ ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಈ ಮೂಲಕ, ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಾಧ್ಯ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ತಾವು ಒಂದೇ ಕಡೆ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಸಹ ಹೇಳಿದ್ದಾರಾದರೂ ಎರಡು ಕಡೆ ಸ್ಪರ್ಧೆ ಮಾಡುವಂತೆ ಅವರ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ.
ನೀರಾವರಿಗೆ ಅನುದಾನ ಕುರಿತು ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೂ ಸೇರಿ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಇದರಲ್ಲಿ ಭೂಸ್ವಾಧೀನ ವೆಚ್ಚವೇ ಹೆಚ್ಚಾಗಿದೆ ಎಂದರು.
ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಎನ್ನುವುದನ್ನು ಸ್ವತಃ ಅಮಿತ್ ಶಾ ಅವರೇ ಹೇಳಿದ್ದಾರೆ ಎಂದ ಡಿ.ಕೆ. ಶಿವಕುಮಾರ್, ಈ ಚುನಾವಣೆಯು ಮೋದಿ ಹಾಗೂ ತಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದಿದ್ದಾರೆ. ಈ ರಾಜ್ಯವನ್ನು ನಡೆಸುತ್ತಿರುವವರು ವಿಫಲವಾಗಿದ್ದಾರೆ ಎನ್ನುವುದಕ್ಕಾಗಿಯೇ ಅವರು ಪ್ರಧಾನಿ ಹೆಸರನ್ನು ಹೇಳುತ್ತಿದ್ದಾರೆ ಎಂದರು.
ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಇದನ್ನು ಗೊಂದಲದ ಗೂಡಾಗಿಸಿದ್ದಾರೆ. ತುಪ್ಪವನ್ನು ಮೂಗಿಗೆ ಸವರಿದ್ದಾರೆ, ಅದನ್ನು ತಿನ್ನುವುದಕ್ಕೆ ಆಗುತ್ತಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಒಕ್ಕಲಿಗೂ ಇದನ್ನು ತಿರಸ್ಕರಿಸಿದ್ದಾರೆ. ಒಂದು ಕಡೆ ಕೊಟ್ಟಂತೆ ಮಾಡಿ ಅವರೇ ಕೋರ್ಟ್‌ನಲ್ಲಿ ಅರ್ಜಿ ಹಾಕಿಸಿದ್ದಾರೆ. 10% EWS ಮೀಸಲಾತಿಯನ್ನು ಯಾರೂ ಮುಟ್ಟಲು ಆಗುವುದಿಲ್ಲ. ಆಗದೇ ಇರುವ ವಿಚಾರವನ್ನು ಮುಂದಿಟ್ಟಿದ್ದಾರೆ.
ಎಸ್‌ಸಿಎಸ್‌ಟಿ ಮೀಸಲಾತಿ ವಿಚಾರದಲ್ಲೂ ಕೇಂದ್ರ ಸಂಪುಟದಲ್ಲಿ ಅನುಮೋದನೆ ನೀಡಿ ಸಂವಿಧಾನದ ಒಂಭತ್ತನೇ ಅನುಚ್ಛೇದದಲ್ಲಿ ಸೇರಿಸಬಹುದಾಗಿತ್ತು. ಅದನ್ನೂ ಮಾಡಲಿಲ್ಲ. ಇವರು ಘೋಷಣೆ ಮಾಡಿದ ಯಾವುದನ್ನೂ ಈಡೇರಿಸುವುದಿಲ್ಲ ಎಂದರು.
ಇದನ್ನೂ ಓದಿ | Karnataka Election : ನಾನು ಎರಡು ಕಡೆ ಸ್ಪರ್ಧೆ ಮಾಡಲ್ಲ, ಒಂದೇ ಕಡೆ ನಿಲ್ಲೋದು: ಸಿದ್ದರಾಮಯ್ಯ ಸ್ಪಷ್ಟನೆ