Site icon Vistara News

ಲಿಂಗಾಯತ ಧರ್ಮ ನಾವು ರಾಜಕೀಯಕ್ಕೆ ಬಳಸುವುದಿಲ್ಲ: ಎಂ.ಬಿ.ಪಾಟೀಲ್

ಬಾಗಲಕೋಟೆ : ಲಿಂಗಾಯತ ಸ್ವತಂತ್ರ ಧರ್ಮ ನಮ್ಮ ಅಸ್ಮಿತೆ. ನಾವು ಇದನ್ನು ರಾಜಕೀಯವಾಗಿ ಬಳಸುವುದಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬಸವ ಜಯಂತಿ ಹಿನ್ನೆಲೆಯಲ್ಲಿ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ವಿಶ್ವಜ್ಯೋತಿ ಬಸವೇಶ್ವರರ ಐಕ್ಯಮಂಟಪಕ್ಕೆ ಭೇಟಿ ನೀಡಿದ ಸಂದರ್ಭ ಅವರು ಹೀಗೆ ಹೇಳಿದರು. ಈ ಬಾರಿ ಎಲ್ಲ ಸ್ವಾಮೀಜಿಗಳು, ನಾಯಕರು ಚುನಾವಣೆಯ ಬಳಿಕ ಕುಳಿತು ಚರ್ಚೆ ಮಾಡುತ್ತೇವೆ. ಕಳೆದ ಬಾರಿ ಚುನಾವಣೆ ವೇಳೆ ಅನೇಕ ಗೊಂದಲ ಸೃಷ್ಟಿ ಮಾಡಿದರು. ಈ ಬಾರಿ ನಾವು ಯಾವುದೇ ಗೊಂದಲಕ್ಕೆ ಬೀಳುವುದಿಲ್ಲ. ಈ ಬಗ್ಗೆ ನಾನು ಯಾವುದೇ ಹೇಳಿಕೆ ಕೊಡುವುದಿಲ್ಲ ಎಂದರು.

ಈ ಸಂದರ್ಭ ಅವರು ಬಸವೇಶ್ವರರಿಗೆ ಗೌರವ ಸಲ್ಲಿಸಿದರು. ಕೆಲ ಹೊತ್ತು ಐಕ್ಯಮಂಟಪದಲ್ಲಿ ಕುಳಿತು ವಚನ ಪಠಿಸಿದರು. ಬಳಿಕ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ಆಶೀರ್ವಾದ ಪಡೆದರು. ಎಂ.ಬಿ.ಪಾಟಿಲ್ ತಲೆಗೆ ಹೂ ಹಾಕಿ ಶ್ರೀಗಳು ಆಶೀರ್ವದಿಸಿದರು.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಬಿಜೆಪಿ ಎಲ್ಲ ಕಡೆ ತತ್ತರಿಸಿದೆ. ಮೂವರನ್ನು ಮುಖ್ಯಮಂತ್ರಿ ಮಾಡಿದರೂ ಅಷ್ಟೇ, 10 ಮಂದಿಯನ್ನು ಬದಲಿಸಿದರೂ ಅಷ್ಟೇ. ಅವರ ಪರಿಸ್ಥಿತಿ ಬದಲಾಗುವುದಿಲ್ಲ ಎಂದರು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪ್ರಾಮಾಣಿಕರು ಕಣ್ಣೀರು ಹಾಕುತ್ತಿದ್ದಾರೆ. ಕೆಲವರು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆಯಾಗುತ್ತಿದೆ. ಬಹಳಷ್ಟು ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉದ್ಯೋಗ ಪಡೆದಿದ್ದಾರೆ. ಒಂದು ವೇಳೆ ಮರು ಪರೀಕ್ಷೆ ಆದರೆ ಕಷ್ಟವಾಗುತ್ತದೆ. ಸರ್ಕಾರವೇ ತಜ್ಞರ ಸಮಿತಿ ನೇಮಿಸಿ, ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದರು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪ್ರಭಾವಿ ಸಚಿವರ ಸಹೋದರ ಹಾಗೂ ಅಧಿಕಾರಿಗಳ ಪಾತ್ರ ಇರುವ ಕುರಿತು ಪ್ರಸ್ತಾಪಿಸಿದರು.

ಸರ್ಕಾರ ಹೈಕೋರ್ಟ್ ಸಿಟಿಂಗ್ ಜಡ್ಜ್ ಉಸ್ತುವಾರಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪಿಎಸ್‌ಐ ಹಗರಣ, ಇನ್ನಿತರ ಹಗರಣಗಳನ್ನು ಮುಚ್ಚಿ ಹಾಕೋಕೆ ಆಗಲ್ಲ. ನಾನು ಪ್ರಭಾವಿ ಸಚಿವರಾಗಲಿ, ಅವರ ಸಹೋದರರಾಗಲಿ ತಪ್ಪಿತಸ್ಥರು ಅಂತ ಹೇಳೋದಿಲ್ಲ. ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಅಂದರೆ ತಡವಾಗುತ್ತೆ. ಸಿಟಿಂಗ್ ಜಡ್ಜ್‌ಗಳಿಂದಲೇ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಧಾರವಾಡದಲ್ಲಿ ಬೃಹತ್ ಮೆರವಣಿಗೆ : ಬಸವ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಮೆರವಣಿಗೆ ನಡೆಯಿತು. ನಗರದ ಉಳವಿ ಬಸಪ್ಪ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಗೆ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಅಮೃತ ದೇಸಾಯಿ, ಡಿಸಿ ನಿತೇಶ ಪಾಟೀಲ್ ಭಾಗವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಎತ್ತುಗಳ ಜೋಡಿ, ವಾದ್ಯ ಮೇಳದ ರಂಗಿನೊಂದಿಗೆ ಮೆರವಣಿಗೆ ಕಳೆಕಟ್ಟಿತು.

ಇದನ್ನೂ ಓದಿ | PSI Scam | ಒಬ್ಬ ಮಂತ್ರಿ ಭ್ರಷ್ಟಾಚಾರ ಮಾಡಿದರೆ ಸರ್ಕಾರವನ್ನೇ ವಜಾ ಮಾಡ್ತೀರ?: ಮರುಪರೀಕ್ಷೆಗೆ ಅಭ್ಯರ್ಥಿಗಳ ವಿರೋಧ

Exit mobile version