Site icon Vistara News

Mann ki Baat 2022 | ಅಮೃತ ಸರೋವರ ಯೋಜನೆಗೆ ಬಾಗಲಕೋಟೆಯ ಬಿಳೆಕೆರೂರ್ ಗ್ರಾಮಸ್ಥರ ಸಾಥ್, ಮೋದಿ ಶ್ಲಾಘನೆ

Mann ki Baat 2022

ನವ ದೆಹಲಿ: ಕೇಂದ್ರ ಸರಕಾರದ ‘ಅಮೃತ ಸರೋವರ’ ಯೋಜನೆಯ ಕ್ರಾಂತಿಕಾರಕ ಯಶಸ್ಸಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ (Mann ki Baat 2022) ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದು, ಈ ಯೋಜನೆಗೆ ಬಾಗಲಕೋಟ ಜಿಲ್ಲೆಯ ಬಿಳೆಕೆರೂರ್ ಗ್ರಾಮಸ್ಥರು ಸಾಥ್ ನೀಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಮೃತ ಸರೋವರ ಯೋಜನೆ ಗ್ರಾಮಸ್ಥರು ಮತ್ತು ಕೃಷಿಕರಿಗೆ ಬಹಳ ಉಪಯುಕ್ತವಾಗಿದೆ. ಕರ್ನಾಟಕದ ಬಾಗಲಕೋಟ ಜಿಲ್ಲೆಯ ಬಿಳೆಕೆರೂರ್ ಗ್ರಾಮದ ಜನ ಹಲವು ವರ್ಷಗಳಿಂದ ಜಲ ಪ್ರವಾಹದಿಂದ ತತ್ತರಿಸುತ್ತಿದ್ದರು. ಅವರ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿತ್ತು. ಆದರೆ ಈಗ ಅಲ್ಲಿಯ ಜನ ಅಮೃತ ಸರೋವರ ಯೋಜನೆಯಡಿ, ತಮಗೆ ಹಾನಿ ಮಾಡುತ್ತಿದ್ದ ನೀರಿನ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಅಲ್ಲಲ್ಲಿ ಶೇಖರಗೊಳ್ಳುತ್ತಿದ್ದ ನೀರನ್ನು ಒಂದೇ ಕಡೆ ಹರಿದು ಸಂಗ್ರಹವಾಗುವಂತೆ ಮಾಡಿದ್ದಾರೆ. ಈ ಉಪಕ್ರಮ ಅಲ್ಲಿಯ ಗ್ರಾಮಸ್ಥರ ಬದುಕಿನ ಗತಿಯನ್ನೇ ಬದಲಿಸಿದೆ ಎಂದು ಮೋದಿ ಹೇಳಿದರು.

ಅಮೃತ ಸರೋವರ ಯೋಜನೆಯಿಂದಾಗಿ, ನೀರು ವ್ಯರ್ಥವಾಗಿ ಎಲ್ಲೆಂದರಲ್ಲಿ ಹರಿದು ಹೋಗಿ ಬೆಳೆ ಹಾನಿ, ಆಸ್ತಿಪಾಸ್ತಿ ಹಾನಿ ಆಗುವುದು ತಪ್ಪಿದೆ. ಗ್ರಾಮಗಳಲ್ಲಿ ಅಂತರ್ ಜಲ ಮಟ್ಟ ಏರಿದೆ. ಸುತ್ತಮುತ್ತ ಹಸಿರು ಆವರಿಸಿದೆ. ಹೀಗೆ ಸಂಗ್ರಹವಾದ ನೀರಿನಿಂದಾಗಿ ಬರ ದೂರವಾಗಿದೆ. ಸಾಕು ಪ್ರಾಣಿಗಳಿಗೂ ಕುಡಿಯಲೂ ನೀರು ಲಭ್ಯವಾಗುತ್ತಿದೆ. ಕೃಷಿ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದು ಮೋದಿ ವಿವರಿಸಿದರು.

ಗ್ರಾಮೀಣ ಭಾರತಕ್ಕೆ ಅತ್ಯಂತ ಉಪಯುಕ್ತವಾಗಿರುವ ಅಮೃತ ಸರೋವರ ಯೋಜನೆಗೆ ಯುವ ಜನ ಕೈ ಜೋಡಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಏನಿದು ಅಮೃತ ಸರೋವರ ಯೋಜನೆ?
ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದರೊಂದಿಗೆ ಶಾಶ್ವತ ಹಾಗೂ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಜಾರಿಗೆ ತಂದಿರುವ ಹೊಸ ಯೋಜನೆ ಇದು.

ಜಲಮೂಲಗಳನ್ನು ರಕ್ಷಿಸುವ, ಅಭಿವೃದ್ಧಿಪಡಿಸುವ “ಅಮೃತ ಸರೋವರʼʼ ಎಂಬ ಈ ಯೋಜನೆ ಮೂಲಕ ದೇಶದ ಪ್ರತಿ ಜಿಲ್ಲೆಯ 75 ಕೆರೆಗಳ ನಿರ್ಮಾಣ, ಇರುವ ಕೆರೆಗಳ ಅಭಿವೃದ್ಧಿ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 2022ರ ಏಪ್ರಿಲ್‌ 24 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆ ಉದ್ಘಾಟಿಸಿದ್ದರು.

ಇದನ್ನೂ ಓದಿ | Mann ki Baat 2022 | ಕೋಲಾರದ ಬೃಹತ್‌ ರಾಷ್ಟ್ರಧ್ವಜ; ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ

Exit mobile version