ಬಾಗಲಕೋಟೆ : ಬಾಗಲಕೋಟೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ರಾಜು ನಾಯ್ಕ ವಿರುದ್ಧ ಸಂಗೀತಾ ಶಿಕ್ಕೇರಿ ಆರೋಪ ಮಾಡಿದ್ದಾರೆ. ವಿನಾಯಕ ನಗರದಲ್ಲಿನ ಸಂಗೀತಾ ಅವರ ಮನೆಯ ಕಂಪೌಂಡ್ ಧ್ವಂಸ ಮಾಡಿದ್ದು, ಶಾಸಕರ ಕುಮ್ಮಕ್ಕಿನಿಂದ ಮನೆಗೆ ನುಗ್ಗಿ, ಮನೆ ಖಾಲಿ ಮಾಡುವಂತೆ ಆವಾಜ್ ಕೂಡ ಹಾಕಿದ್ದಾರೆ. ಜೆಸಿಬಿ ಮೂಲಕ ಮನೆ ಮುಂದಿನ ಗೋಡೆ ಧ್ವಂಸ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸಂಗೀತಾ ದೊಡ್ಡಪ್ಪ ಹನುಮಂತಪ್ಪ ಅವರಿಂದ ರಾಜು ನಾಯ್ಕ ಮನೆ ಖರೀದಿಸಿದ್ದರು. ಮನೆ ಹನುಮಂತಪ್ಪ ಶಿಕ್ಕೇರಿ ಎಂಬವರ ಹೆಸರಿನಲ್ಲಿದ್ದು, ಆ ಮನೆಯ ಮೇಳೆ ನಮ್ಮ ಹಕ್ಕಿದೆ. ಆಸ್ತಿ ಪಾಲು ಮಾಡುವಂತೆ ಸಂಗೀತಾ ಕುಟುಂಬ ಕೋರ್ಟ್‌ಗೆ ದಾವೆ ಹೂಡಿದ್ದಾರೆ. ವ್ಯಾಜ್ಯ ಕೋರ್ಟ್‌ನಲ್ಲಿರುವಾಗಲೇ ರಾಜು ನಾಯ್ಕ ಮನೆ ಖರೀದಿಸಿದ್ದು, ಮನೆ ಖಾಲಿ ಮಾಡುವಂತೆ ಜೆಸಿಬಿ ಮೂಲಕ ಕಂಪೌಂಡ್ ಕೆಡವಿ, ಮನೆಗೆ ಕಲ್ಲು ಎಸೆದು ದಬ್ಬಾಳಿಕೆ ಮಾಡಿದ್ದಾರೆ. 40 ವರ್ಷಗಳಿಂದ ಇದೇ ಮನೆಯಲ್ಲೇ ವಾಸವಿದ್ದು, ಮನೆ ಖಾಲಿ ಮಾಡಿಸಲು ಗೂಂಡಾಗಳನ್ನ ಬಿಟ್ಟು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಸಂಗೀತಾ ಕುಟುಂಬ ಆರೋಪಿಸಿದೆ.
ವಕೀಲರೊಂದಿಗೆ ಸುದ್ದಿಗೋಷ್ಟಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘದಿಂದ ಹೋರಾಟ ನಡೆಸುವ ಎಚ್ಚರಿಕೆಯನ್ನೂ ವಕೀಲ, ಆಪ್ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರು ನೀಡಿದ್ದರು. ಮನೆ ಖರೀದಿ ಮಾಡಿದ್ದರೂ ಅದನ್ನೂ ಕಾನೂನು ರೀತಿಯಲ್ಲಿ ಬಗಹರಿಸಿಕೊಳ್ಳಬೇಕಿತ್ತು. ಸಂಗೀತಾ ಕುಟುಂಬಕ್ಕೆ ಅನ್ಯಾಯ ಆಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಹೆಣ್ಣು ಮಕ್ಕಳಿದ್ದ ಮನೆ ಕಂಪೌಂಡ್ ಒಡೆಸಿರುವುದು ತಪ್ಪು. ರಾತ್ರಿ ಕರೆಂಟ್ ಕಟ್ ಮಾಡಿಸಿದ್ದು, ಶೌಚಾಲಯ ದ್ವಂಸ, ನೀರಿನ ಸೌಲಭ್ಯ ಕಡಿತ ಮಾಡಿಸಿದ್ದು ಅಧಿಕಾರ ದುರ್ಬಳಕೆ ಆಗಿದೆ. ಆದ್ದರಿಂದ ವಕೀಲರ ಸಂಘದಿಂದ ಕಾನೂನು ರೀತಿ ಹೋರಾಟವನ್ನು ಮಾಡುತ್ತೇವೆ ಎಂದು ರಮೇಶ್ ಬದ್ನೂರು ಎಚ್ಚರಿಕೆ ನೀಡಿದರು.
ರಾಜು ನಾಯ್ಕರ್ ಸ್ಪಷ್ಟನೆ
ಈ ಕುರಿತು ರಮೇಶ್ ನಾಯ್ಕರ್ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರ ಮೇಲೂ ದೌರ್ಜನ್ಯ ಮಾಡಿಲ್ಲ ಮತ್ತು ನಾನು ಖರೀದಿ ಮಾಡಿದ ಮನೆ ದಾಖಲಾತಿ ನನ್ ಬಳಿ ಇವೆ. ಮನೆ ಮಾಲಿಕ ಹನಮಂತಪ್ಪ ಶಿಕ್ಕೇರಿಯಿಂದ ಮನೆ ಮಾರಾಟ ಆಗಿದ್ದು, 7 ತಿಂಗಳ ಹಿಂದೆ ಆ ಮನೆ ಕೊಂಡು ಕೊಂಡಿದ್ದೇನೆ. ವಕೀಲೆ ಸಂಗೀತಾ ಶಿಕ್ಕೇರಿ ಅವರನ್ನ ಈಗಲೇ ನೋಡಿದ್ದು, ಮನೆ ಖರೀದಿ ವೇಳೆ ಸಂಗೀತಾ ಕುಟುಂಬದವರ ಹೆಸರನ್ನೂ ಎಲ್ಲಿಯೂ ನೋಡಿಲ್ಲ. ಅವರವರ ದಾಯಾದಿಗಳ ನಡುವಿನ ಜಗಳಕ್ಕೂ ನಮಗೂ ಸಂಬಂಧವಿಲ್ಲ. ನ್ಯಾಯಾಲಯಕ್ಕೆ ನಾನು ದಾಖಲಾತಿಗಳನ್ನು ಹಾಜರು ಪಡಿಸುತ್ತೇನೆ ಎಂದು ಹೇಳಿದ್ದಾರೆ.