ಬಾಗಲಕೋಟೆ: ಸ್ನೇಹ ಸಮ್ಮಿಲನ ಮುಗಿಸಿ ಸಂತೋಷದಿಂದ ಮನೆಗೆ ಹಿಂದಿರುಗುತ್ತಿದ್ದ ಶಾಲಾ ಮಕ್ಕಳಿಗೆ ಟ್ರಾಕ್ಟರ್ ಒಂದು ಯಮನಾಗಿ ಬಂದೆರಗಿದೆ. ಸ್ಕೂಲ್ ಬಸ್ ಹಾಗೂ ಟ್ರಾಕ್ಟರ್ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಸ್ಕೂಲ್ ಬಸ್ಸಿನಲ್ಲಿದ್ದ ನಾಲ್ವರು ಶಾಲಾ ಮಕ್ಕಳ ದುರ್ಮರಣ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಸಮೀಪದ ಈ ಘೋರ ದುರಂತ ನಡೆದಿದೆ. ಡಿಕ್ಕಿ ಹೊಡೆದ ಸ್ಥಳದಲ್ಲೇ ಓರ್ವ ವಿದ್ಯಾರ್ಥಿ ಅಸು ನೀಗಿದ್ದು, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ.
ಶ್ವೇತಾ ಪಾಟೀಲ್ (11), ಗೋವಿಂದ ಸದಾಶಿವ ಜಂಬಗಿ (11), ಬಸವರಾಜ ಸದಾಶಿವ ಕೊಟಗಿ (15), ಸಾಗರ ಗುರುಲಿಂಗ ಕಡಕೋಳ (16) ಮೃತರಾದ ದುರ್ದೈವಿಗಳು. ಸುಮಾರು ಎಂಟಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಲಗೂರು ಕಡೆಯಿಂದ ಕವಟಗಿ ಗ್ರಾಮಕ್ಕೆ ಬಸ್ ತೆರಳುತ್ತಿತ್ತು. ಆಲಗೂರು ಗ್ರಾಮದ ವರ್ಧಮಾನ ಮಹಾವೀರ ಖಾಸಗಿ ಶಾಲೆಯ ಬಸ್. ಇದಾಗಿದ್ದು, ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮುಗಿಸಿ ವಿದ್ಯಾರ್ಥಿಗಳು ಮನೆ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಟ್ರಾಕ್ಟರ್ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿಯಾಗಿದೆ.
ಸ್ಥಳಕ್ಕೆ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳು ದಾಖಲಾದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಂಪೋ ಪಲ್ಟಿ, ಮಹಿಳೆ ಸಾವು
ಶಿವಮೊಗ್ಗ : ಸೀಮಂತಕ್ಕೆ ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾಗಿ 19 ಜನರಿಗೆ ಗಂಭೀರ ಗಾಯಗಳಾಗಿವೆ. ಸ್ಥಳದಲ್ಲೇ ಓರ್ವ ಮಹಿಳೆ ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಸಮೀಪದ ಚಿನ್ನಿಕಟ್ಟೆ ಬಳಿ ಘಟನೆ ನಡೆದಿದೆ.
ಶಿವಮೊಗ್ಗದಿಂದ ಶಿಕಾರಿಪುರ ತಾಲೂಕಿನ ಕೊಡಮಗ್ಗಿ ಗ್ರಾಮಕ್ಕೆ ಸೀಮಂತಕ್ಕೆಂದು ತೆರಳುತ್ತಿದ್ದ 20 ಜನರಿದ್ದ ಟೆಂಪೋ ವಾಹನ ಪಲ್ಟಿಯಾಗಿದೆ. ಗಾಯಗೊಂಡವರಿಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.
ಶಿವಮೊಗ್ಗ : ಪಾರ್ಕ್‌ನಲ್ಲಿದ್ದ ಸಿಮೆಂಟ್ ಜಿಂಕೆ ಮೇಲೆ ಆನಂದವಾಗಿ ಆಟವಾಡುತ್ತಾ ಕುಳಿತಿದ್ದ ಮಗುವಿಗೆ ಆ ಜಿಂಕೆಯೇ ಮೃತ್ಯವಾಗಿ ಪರಿಣಮಿಸಿದೆ.
ಸಮೀಕ್ಷಾ (6) ಮೃತ ದುರ್ದೈವಿ ಮಗು. ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಭಾನುವಾರವಾದ್ದರಿಂದ ಪೋಷಕರ ಜೊತೆಗೆ ಆಟವಾಡಲು ಮಗು ಸಮೀಕ್ಷಾ ಉದ್ಯಾನವನಕ್ಕೆ ತೆರಳಿತ್ತು. ಪಾರ್ಕಿನ ಸಿಮೆಂಟ್ ಜಿಂಕೆ ಮೇಲೆ ಕುಳಿತು ಆಟವಾಡುತ್ತಿದ್ದ ಮಗು, ಸಿಮೆಂಟ್ ಜಿಂಕೆ ಮುರಿದು ಬಿದ್ದ ಪರಿಣಾಮ ಗಾಯವಾಗಿ ಮೃತಪಟ್ಟಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Attempt To Murder : ಸಾಲ ವಾಪಸ್ ಕೊಡುವುದಾಗಿ ಹೇಳಿ ಕಾರು ಚಾಲಕನ ತಲೆ ಸೀಳಿದ ಸ್ನೇಹಿತರು