Site icon Vistara News

ಹಳ್ಳಿ ಮಕ್ಕಳ ಜತೆ ಮಗುವಂತಾದ ಸುಧಾಮೂರ್ತಿ

ಬಾಗಲಕೋಟೆ : ಸದಾ ನಗುಮೊಗದಿಂದಲೇ ಇರುವ ಹಾಗೂ ತಾವು ಎಷ್ಟು ದೊಡ್ಡ ಶ್ರೀಮಂತರು ಎಂಬ ಹಮ್ಮು ಬಿಮ್ಮು ಇಲ್ಲದೆ ಜನರೊಂದಿಗೆ ಬೆರೆಯುವ ಹಾಗೂ ಜನಸೇವೆಯಲ್ಲಿ ತೊಡಗುವ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಮತ್ತೊಮ್ಮೆ ತಮ್ಮ ಸರಳತೆ ಮೆರೆದರು.

ಪ್ರತಿಷ್ಠಾನದ ಕಾರ್ಯಗಳಷ್ಟೆ ಅಲ್ಲದೆ ಈಗಾಗಲೆ ಸುಧಾ ಮೂರ್ತಿ ಅವರು ಸಾಕಷ್ಟು ಪುಸ್ತಕಗಳನ್ನೂ ಬರೆದಿದ್ದಾರೆ. How I Taught My Grandmother to Read, Grandma’s Bag of Stories ಮುಂತಾದ ಇಂಗ್ಲಿಷ್‌ ಪುಸ್ತಕಗಳು ದೇಶಾದ್ಯಂತ ಪ್ರಸಿದ್ಧವಾಗಿವೆ. ಮಕ್ಕಳಿಗಾಗಿ ನನ್ನ ಮೆಚ್ಚಿನ ಕತೆಗಳು ಜತೆಗೆ ಏರಿಳಿತದ ದಾರಿಯಲ್ಲಿ, ಮಹಾಶ್ವೇತೆ, ಸಾಮಾನ್ಯರಲ್ಲಿ ಅಸಾಮಾನ್ಯರು, ಸಾಫ್ಟ್‌ ಮನ ಮುಂತಾದ ಕನ್ನಡದ ಪುಸ್ತಕಗಳು ಮಕ್ಕಳು ಹಾಗೂ ಯುವಜನರಲ್ಲಿ ಜನಪ್ರಿಯತೆ ಕಂಡಿವೆ. ಅವರು ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಜೀವನದ ಕುರಿತು ಮಾತನಾಡಿದ ವಿಚಾರಗಳು ಆಗಿಂದಾಗ್ಗೆ ಪ್ರಸಾರವಾಗುತ್ತಲೇ ಯುವಕರನ್ನು ಪ್ರೇರೇಪಿಸುತ್ತಿರುತ್ತವೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಪ್ರಸಿದ್ಧ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಸುಧಾಮೂರ್ತಿ ಬುಧವಾರ ಆಗಮಿಸಿದರು. ಸಾಮಾನ್ಯರಂತೆ ದೇವಿ ದರ್ಶನ , ಪೂಜಾ ಕಾರ್ಯ ಮುಗಿಸಿ ದೇಗುಲ ಸುತ್ತ ಪ್ರದಕ್ಕ್ಷಿಣೆ ಹಾಕುತ್ತಿದ್ದರು. ಈ ವೇಳೆ ಯಾರೂ ಅಷ್ಟಾಗಿ ಗಮನಿಸಿರಲಿಲ್ಲ.
ಇದೇ ಸಮಯಕ್ಕೆ ದೇಗುಲಕ್ಕೆ ಆಗಮಿಸಿದ ಸಿಂಧಗಿ ಭಾಗದ ವಿದ್ಯಾರ್ಥಿ , ವಿದ್ಯಾರ್ಥಿನಿಯರು ಅವರ ಜತೆಗಿದ್ದ ಶಿಕ್ಷಕರು ಹಾಗೂ ಸ್ನೇಹಿತರಿಗೆ ತಿಳಿಸಿದ್ದಾರೆ. ಹತ್ತಿರ ತೆರಳಿದ ಮಕ್ಕಳನ್ನು ಸುಧಾಮೂರ್ತಿ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ದೇಗುಲ ಆವರಣದಲ್ಲಿ ಕುಳಿತು, ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ. ಫೋಟೊ ತೆಗೆಸಿಕೊಳ್ಳಲು ಮುಂದಾದ ಮಕ್ಕಳ ಜೊತೆ ಸುಧಾಮೂರ್ತಿ ಅವರು ನಗುಮೊಗದ ಪೋಸ್‌ ಕೊಟ್ಟಿದ್ದಾರೆ.

ಮೂಲತಃ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನವರೇ ಆದ ಸುಧಾ ಮೂರ್ತಿ, ಇಷ್ಟು ವರ್ಷ ಸಾಫ್ಟ್‌ವೇರ್‌ ಪ್ರಪಂಚ, ಇಂಗ್ಲಿಷ್‌ ಮಾತನಾಡುವವರ ನಡುವೆ ಬೆರೆತರೂ ಭಾಷಾ ಸೊಗಡನ್ನು ಬಿಟ್ಟುಕೊಟ್ಟಿಲ್ಲ. ಈ ಹಿಂದೆ ಊರಿನ ಸಂತೆಯಲ್ಲಿ ಸಾಮಾನ್ಯರಂತೆ ತರಕಾರಿಗಳನ್ನು ಖರೀದಿ ಮಾಡಿದ್ದು, ದೇವರ ಸೇವೆಯಲ್ಲಿ ತರಕಾರಿ ಹೆಚ್ಚಿದ್ದು ಕೂಡ ಸುದ್ದಿಯಾಗಿದ್ದವು. ಸರಳತೆಯ ಜತೆಗೆ, ದೇಶ ವಿದೇಶಗಳಲ್ಲಿ ಎಲ್ಲಿಯೇ ತೆರಳಿದರೂ ಅಪ್ಪಟ ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ ಮೆಚ್ಚುಗೆ ಗಳಿಸುತ್ತಾರೆ ಸುಧಾ ಮೂರ್ತಿ.

ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 705 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

Exit mobile version