Site icon Vistara News

ಒಮ್ಮೆ ACB, ಮತ್ತೊಮ್ಮೆ ಲೋಕಾಯುಕ್ತ: ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಲು 30 ಸಿಮ್‌ ಕಾರ್ಡ್‌ !

BAGALKOTE POLICE

ಬಾಗಲಕೋಟೆ: ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಎಸಿಬಿ ಅಧಿಕಾರಿಗಳನ್ನು ಇಲ್ಲಿನ ನವನಗರದ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದ ಮುರುಗೇಶ ಕುಂಬಾರ, ಹಾಸನ ಜಿಲ್ಲೆಯ ಮುಗುಳಿ ಗ್ರಾಮದ ರಜನಿಕಾಂತ್ ಬಂಧಿತರು. ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ಕಳೆದ ಕೆಲ ವರ್ಷಗಳಿಂದ ರಾಜ್ಯದ ದೊಡ್ಡ ದೊಡ್ಡ ಅಧಿಕಾರಗಳ ನಿದ್ದೆಗೆಡಿಸಿದ್ದವರು. ಒಂದೇ ಫೋನ್ ಕಾಲ್ ಮಾಡಿ, ಅಧಿಕಾರಿಗಳಲ್ಲಿ ಆತಂಕ ಹುಟ್ಟಿಸುತ್ತಿದ್ದರು.

ಇದನ್ನೂ ಓದಿ | ಕಾರ್ಮಿಕರ ಹೆಸರು ಬಳಸಿಕೊಂಡು ಕೋಟಿ ಕೋಟಿ ಕೊಳ್ಳೆ..!

ನಾವು ಎಸಿಬಿಯವರು, ನಾವು ಲೊಕಾಯುಕ್ತನವರು ಎಂದು ಕರೆ ಮಾಡುತ್ತಿದ್ದರು. ನಿಮ್ಮ ಮೇಲೆ ಭ್ರಷ್ಟಾಚಾರ ಆರೋಪ ಇದೆ ಎಂದು ಬೆದರಿಕೆಯೊಡ್ಡಿ, ಕೇಳಿದಷ್ಟು ಹಣ ಕೊಟ್ಟರೆ ನಿಮ್ಮ ಮೇಲಿನ ದಾಳಿ ತಪ್ಪಿಸುತ್ತೇವೆ ಎಂದು ಅಧಿಕಾರಗಳಿಂದ ಹಣ ಪಡೆಯುತ್ತಿದ್ದರು.

ಎಸಿಬಿ, ಲೋಕಾಯುಕ್ತ ಎಂದು ಹೇಳಿಕೊಂಡು ಕರೆ ಮಾಡುತ್ತಿದ್ದ ವಂಚಕರ ವಿರುದ್ಧ ರಾಜ್ಯಾದ್ಯಂತ 59 ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಈ ದುಷ್ಕೃತ್ಯಗಳಿಗಾಗಿ 30ಕ್ಕೂ ಹೆಚ್ಚು ಸಿಮ್‌ ಬಳಸಿದ್ದಾರೆ. ಏಪ್ರಿಲ್ 29ರಂದು ಬಾಗಲಕೋಟೆ ಸಣ್ಣ ನೀರಾವರಿ ಇಲಾಖೆಯ ಎಇಇ, ಅಧಿಕಾರಿ ಈಶ್ವರ ಕರಬಗಟ್ಟಿ ಎಂಬುವವರಿಗೆ ಆರೋಪಿಗಳು ಕರೆ ಮಾಡಿ ಬೆದರಿಕೆ ಒಡ್ಡಿದ್ದರು. ಈ ಅಧಿಕಾರಿಗಳು ಏಪ್ರಿಲ್ 30ರಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಲಂಚ ಪಡೆದು ಭಯದಲ್ಲಿದ್ದ ಅಧಿಕಾರಿಗಳು ಈ ನಕಲಿ ಎಸಿಬಿಯವರಿಗೆ ಲಂಚ ಕೊಟ್ಟಿದ್ದರು. ಇದೀಗ ಇಬ್ಬರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಬಾಗಲಕೋಟೆ ನವನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ನವನಗರದ ಸಿಇಎನ್ ಠಾಣೆಯ ಸಿಪಿಐ ವಿಜಯ್ ಮುರುಗುಂಡಿ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಾಸನದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ | ಬಿಸ್ಕೆಟ್‌ ಬಿಜಿನೆಸ್ ಮಾಡ್ತೇನೆ ಅಂತ ಅಕ್ಕಪಕ್ಕದವರಿಗೇ ಬಿಸ್ಕೆಟ್‌ ತಿನ್ನಿಸಿದ!

Exit mobile version