ಬಾಗಲಕೋಟೆ: ಊರಲ್ಲಿ ಜಾತ್ರೆ ಅಂದರೆ ಅದೇನೋ ಸಂಭ್ರಮ ಸಂತಸ ಮನೆ ಮಾಡಿರುತ್ತೆ. ದೂರಾದೂರಿನಲ್ಲಿರುವ ಸಂಬಂಧಿಕರನ್ನು ಆಹ್ವಾನಿಸಿ, ಅವರೊಟ್ಟಿಗೆ ಭೂರಿ ಭೋಜನ ಸವಿಯುವುದು ವಾಡಿಕೆ.. ಆದರೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ಹಬ್ಬದ ವಾತಾವರಣವೇ ಇಲ್ಲ. ಇದಕ್ಕೆಲ್ಲ ಕಾರಣವಾಗಿರುವುದು (Water crisis) ನೀರಿನ ಸಮಸ್ಯೆ.
ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಭೀಕರ ಬರ ಕಾಡುತ್ತಿದೆ. ಸರಿಯಾಗಿ ಮಳೆಯಾಗದೇ ಇರುವುದರಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ. ನೀರಿನ ತೀವ್ರ ಅಭಾವ ಎದುರಾಗಿದ್ದು, ಊರ ಜಾತ್ರೆಗೂ ಅದರ ಪ್ರಭಾವ ಬೀರಿದೆ.
ಇದನ್ನೂ ಓದಿ:Water crisis: ಬೆಂಗಳೂರಲ್ಲಿ ನೀರಿನ ಬರ; ಶೌಚ ಮಾಡಲು ಮಾಲ್‌ಗೆ ಹೋಗುತ್ತಿದ್ದಾರೆ ಫ್ಲ್ಯಾಟ್ ಮಾಲೀಕರು!
ಬೇಸಿಗೆ ಆರಂಭದಲ್ಲೇ ಭೀಕರ ಬರಗಾಲ ಆವರಿಸಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ. ಲೋಕಾಪುರದ ಗ್ರಾಮಸ್ಥರು ನೀರಿನ ಅಭಾವದಿಂದ ತತ್ತರಿಸಿದ್ದಾರೆ. ಇದೀಗ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಲೋಕೇಶ್ವರ ಜಾತ್ರೆಯ ಸಂಭ್ರಮವು ಕಳೆಗುಂದಿದೆ. ನೀರಿನ ಸಮಸ್ಯೆಯಿಂದ ಜಾತ್ರೆಗೆ ಸಂಬಂಧಿಕರಿಗೆ, ಸ್ನೇಹಿತರಿಗೆ ಆಹ್ವಾನ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಪ್ರತಿ ವರ್ಷ ಶಿವರಾತ್ರಿ ಮರುದಿನ ಲೋಕಾಪುರ ಗ್ರಾಮದಲ್ಲಿ ಪ್ರಸಿದ್ಧ ಲೋಕೇಶ್ವರ ಜಾತ್ರೆ ಹಾಗೂ ರಥೋತ್ಸವ ನಡೆಯುತ್ತದೆ. ಆದರೆ ಈ ಬಾರಿ ಲೋಕೇಶ್ವರ ಜಾತ್ರೆಯಂದು ಗ್ರಾಮಸ್ಥರು ಸಂಬಂಧಿಕರನ್ನು ಆಹ್ವಾನಿಸದೇ ಹಿಂದೆ ಸರಿದಿದ್ದಾರೆ. ನಮಗೆ ನೀರು ಸಾಲುತ್ತಿಲ್ಲ, ಜಾತ್ರೆ ಎಂದು ಮನೆ ಮನೆಗೆ ನಾಲ್ಕು ಜನ ಬಂದರೆ ನೀರಿಗೆ ಏನು ಮಾಡೋಣ? ಬಂದವರಿಗೆ ಬಿಡಿ, ಇದ್ದವರಿಗೆ ನೀರು ಬೇಕಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಇದೆ. ಹೀಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಯಿಸಲಾಗುತ್ತಿದೆ. ಸಂಬಂಧಿಕರು ಬಂದರೆ ಜಾಗದ ಸಮಸ್ಯೆ ಹೇಗೋ ಬಗೆಹರಿಸಬಹುದು. ಆದರೆ ಕುಡಿಯೋಕೆ, ಸ್ನಾನಕ್ಕೆ ನೀರಿಲ್ಲ ಅಂದರೆ ಏನು ಮಾಡೋದು?ಎಂದು ಲೋಕಾಪುರ ಗ್ರಾಮಸ್ಥರು ಗೋಳಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ