Site icon Vistara News

ಬಿಜೆಪಿ ನಾಯಕನ ಹೆಸರು ಹೇಳುತ್ತಿದ್ದಂತೆ ಸಚಿವರು ಫೋನ್‌ ಕಟ್‌ ಮಾಡಿದರು: ವಕೀಲೆ ಸಂಗೀತಾ ಶಿಕ್ಕೇರಿ ಆರೋಪ

Sangeeta Shikkeri Dharani

ಬಾಗಲಕೋಟೆ: ಮೂಲ‌ಸೌಲಭ್ಯಗಳನ್ನು ಒದಗಿಬೇಕೆಂದು ಮಾನವ ಹಕ್ಕುಗಳ ಆಯೋಗದಿಂದ ಆದೇಶವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಆದ್ದರಿಂದ ಶಾಸಕರ‌ ಮನೆಯ ಮುಂದೆ ಧರಣಿ‌ ನಡೆಸುತ್ತೇನೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಹೇಳಿದ್ದಾರೆ. ಇದೇವೇಳೆ, ತಮಗೆ ಸಾಂತ್ವನ ಹೇಳಲು ಕರೆ ಮಾಡಿದ್ದ ಸಚಿವ ವಿ. ಸುನಿಲ್‌ಕುಮಾರ್‌, ಬಿಜೆಪಿ ನಾಯಕನ ಹೆಸರನ್ನು ಹೇಳುತ್ತಿದ್ದಂತೆ ಫೋನ್‌ ಕಟ್‌ ಮಾಡಿದರು ಎಂದು ಆರೋಪಿಸಿದ್ದಾರೆ.

ನವನಗರದ ಜಿಲ್ಲಾಸ್ಪತ್ರೆಯಲ್ಲಿ ಹೇಳಿಕೆ ನೀಡಿರುವ ಸಂಗೀತಾ, ಕಳೆದ‌ ಹದಿಮೂರು ದಿನಗಳಿಂದ ನೀರು ಹಾಗೂ ವಿದ್ಯುತ್ ಸಂಪರ್ಕ‌ ಕಡಿತಗೊಳಿಸಲಾಗಿದೆ. ಸಂಪರ್ಕ ಕಲ್ಪಿಸಲು ಈಗಾಗಲೇ ಆಗ್ರಹಿಸಿದ್ದೆವು. ಇನ್ನೂ ಸಂಪರ್ಕ‌ ಕಲ್ಪಿಸಿಲ್ಲ. ಹಲ್ಲೆಗೆ ಪ್ರಚೋದನೆ ನೀಡಿರುವ ಆರೋಪಿಗಳನ್ನೂ ಬಂಧಿಸಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಶಾಸಕರ ಮನೆಗೆ ತೆರಳಿ ನ್ಯಾಯ ಸಿಗುವವರೆಗೂ ಧರಣಿ ನಡೆಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | ವಕೀಲೆ ಸಂಗೀತಾ ಶಿಕ್ಕೇರಿ ಮೇಲಿನ ಹಲ್ಲೆ  ಪ್ರಕರಣಕ್ಕೆ ಹೊಸ ಟ್ವಿಸ್ಟ್‌!

ಸಚಿವ ಸುನೀಲ್‌ ಕುಮಾರ್‌ ನನಗೆ ಕರೆ ಮಾಡಿ, ವಿದ್ಯುತ್‌ ಸಂಪರ್ಕ ಕೊಡುವುದಾಗಿ ಹೇಳಿದ್ದರು. ನನ್ನ ಮನೆ ಖರೀದಿ ಬಗ್ಗೆ ಹೇಳಿಕೊಂಡಿದ್ದೆ. ಬಿಜೆಪಿ‌ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಹೆಸರು ಹೇಳುತ್ತಿದ್ದಂತೆ ಫೋನ್ ಕಟ್‌ ಮಾಡಿದ್ದರು. ನನಗೆ ಅನ್ಯಾಯವಾಗಿದ್ದರೂ ಶಾಸಕ ಡಾ. ವೀರಣ್ಣ ಚರಂತಿಮಠ ನ್ಯಾಯ ಒದಗಿಸುತ್ತಿಲ್ಲ. ಅವರ ಸೂಚನೆ ಇರಲಾರದೇ ಬಾಗಲಕೋಟೆಯಲ್ಲಿ ಏನೂ ನಡೆಯುವುದಿಲ್ಲ.

ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿಯವರೂ ಫೋನ್ ಮಾಡಿದ್ದರು. ಧರಣಿ ಎಲ್ಲಾ ಮಾಡಬೇಡ ಸರಿ ಮಾಡೋಣ ಎಂದು ಹೇಳಿದರು. ಆದರೂ ಏನು ಪ್ರಯೋಜನವಾಗಲಿಲ್ಲ ಎಂದು ಜಿಲ್ಲಾಸ್ಪತ್ರೆಯಲ್ಲಿ ವಾಯವ್ಯ ಪಧವಿಧರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಹಾಗೂ ಕೆಲವು ನಾಯಕರ ಮುಂದೆ ವಕೀಲೆ ಸಂಗೀತಾ ಶಿಕ್ಕೇರಿ ದುಃಖ ತೋಡಿಕೊಂಡರು.

ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನೆರೆಮನೆಯ ಮಹಾಂತೇಶ್‌ ಚೊಳಚಗುಡ್ಡ ಭೀಕರವಾಗಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಬಾಗಲಕೋಟೆ ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿದ್ದವು. ಹಲವು ಮಹಿಳಾ ಸಂಘಟನೆಗಳು ಜಿಲ್ಲಾ ವಕೀಲರ ಸಂಘವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ | ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ: ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ

Exit mobile version