Site icon Vistara News

Bathinda Firing: ಪಂಜಾಬ್‌ ಸೇನಾ ನೆಲೆ ಮೇಲೆ ದಾಳಿ; ಬಾಗಲಕೋಟೆ ಯೋಧ ಸಂತೋಷ್‌ ನಾಗರಾಳ ಹುತಾತ್ಮ

Bagalkot Soldier Martyred

Bagalkot Soldier Martyred

ಚಂಡೀಗಢ/ಬಾಗಲಕೋಟೆ:‌ ಪಂಜಾಬ್‌ನ ಬಟಿಂಡಾ (Bathinda Firing) ಸೇನಾ ನೆಲೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ದೇಶದ ನಾಲ್ವರು ಯೋಧರು ಹುತಾತ್ಮರಾಗಿದ್ದು, ಇವರಲ್ಲಿ ಕರ್ನಾಟಕದ ಸಂತೋಷ್‌ ಮಲ್ಲಪ್ಪ ನಾಗರಾಳ (24) ಅವರೂ ಸೇರಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಇನಾಮಹನಮನೇರಿ ಗ್ರಾಮದ ಸಂತೋಷ್‌ ಮಲ್ಲಪ್ಪ ನಾಗರಾಳ ಅವರು ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸಂತೋಷ್‌ ಮಲ್ಲಪ್ಪ ನಾಗರಾಳ (24), ಸಾಗರ್‌ ಬನ್ನೆ (25), ಕಮಲೇಶ್‌ ಆರ್‌. (24) ಹಾಗೂ ಯೋಗೇಶ್‌ ಕುಮಾರ್‌ (24) ಎಂದು ಗುರುತಿಸಲಾಗಿದೆ. ಇವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಪಾರ್ಥಿವ ಶರೀರಗಳ ರವಾನೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸಂತೋಷ್‌ ಮಲ್ಲಪ್ಪ ನಾಗರಾಳ ಅವರು 19ನೇ ವಯಸ್ಸಿಗೆ ಸೇನೆ ಸೇರಿದ್ದು, ಕಳೆದ ನಾಲ್ಕು ವರ್ಷದಿಂದ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ಹುತಾತ್ಮನಾದ ಕಾರಣ ಅವರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Firing at military station : ಪಂಜಾಬ್‌ ಸೇನಾ ನೆಲೆ ಪ್ರವೇಶಕ್ಕೆ ಉಗ್ರರ ಯತ್ನ: ನಾಲ್ವರನ್ನು ಹೊಡೆದುರುಳಿಸಿದ ಸೇನೆ

ಪಂಜಾಬ್​​ನ ಬಟಿಂಡಾ ಸೇನಾ ನೆಲೆಯಲ್ಲಿ ಬುಧವಾರ ಬೆಳಗ್ಗೆ ನಡೆದ ಫೈರಿಂಗ್​​ನಲ್ಲಿ ಮೃತಪಟ್ಟ ನಾಲ್ವರೂ ಸೇನಾ ಯೋಧರೇ ಎಂದು ಭಾರತೀಯ ಸೇನೆ ನೈಋತ್ಯ ಕಮಾಂಡ್​​ ಹೇಳಿಕೆ ಬಿಡುಗಡೆ ಮಾಡಿದೆ. ಬೆಳಗ್ಗೆ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರು ಉಗ್ರರು ಎಂದು ಮೊದಲು ವರದಿಯಾಗಿತ್ತು. ಸೇನಾ ನೆಲೆಗೆ ಭಯೋತ್ಪಾದಕರು ನುಗ್ಗಿದ್ದರು. ಹೀಗಾಗಿ ಸೇನಾ ಸಿಬ್ಬಂದಿ ಅವರ ಮೇಲೆ ಫೈರಿಂಗ್​ ನಡೆಸಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅಪ್ಡೇಟ್ ಮಾಹಿತಿ ಬಂದಿದ್ದು, ಮೃತಪಟ್ಟವರು ಉಗ್ರರಲ್ಲ, ಸೇನಾ ಯೋಧರೇ ಎನ್ನಲಾಗಿದೆ.

ಬಟಿಂಡಾ ಸೇನಾ ನೆಲೆಯ ಸುತ್ತ ಭದ್ರತಾ ಸಿಬ್ಬಂದಿಯು ಸುತ್ತುವರಿದಿದ್ದು, ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಆದಾಗ್ಯೂ, ಘಟನೆಯ ಸ್ಥಳದಲ್ಲಿ ಇನ್ಸಾಸ್‌ ರೈಫಲ್‌, ಮ್ಯಾಗಜಿನ್‌ಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದುವರೆಗೆ ನಡೆದ ಶೋಧದ ವೇಳೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Exit mobile version