ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಘರ್ಷಣೆಗಳ ಬಳಿಕ ಭದ್ರಾವತಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿ ಸೆಕ್ಷನ್ ೧೪೪ ಕೂಡಾ ಜಾರಿಯಲ್ಲಿದೆ. ಇದರ ನಡುವೆಯೇ ಬಜರಂಗ ದಳದ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ.
ಬಜರಂಗ ದಳದಲ್ಲಿ ಸಕ್ರಿಯನಾಗಿರುವ ಸುನಿಲ್ ಮೇಲೆ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಎಂಬಾತ ಹಲ್ಲೆ ಮಾಡಿದ್ದಾನೆ. ಸುನಿಲ್ನ ಮೂಗಿನ ಮೂಳೆ ಮುರಿದಿದ್ದು, ಹೀಗಾಗಿ ಆರೋಪಿ ತನ್ನ ಹೆಸರಿಗೆ ತಕ್ಕಂತೆ ಡಿಚ್ಚಿ ಹೊಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭದ್ರಾವತಿಯ ನೆಹರು ಬಡವಾಣೆಯಲ್ಲಿ ಘಟನೆ ನಡೆದಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗಾಯಾಳುವನ್ನು ಭದ್ರಾವತಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಗಾಯಾಳುವಿನಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಈ ಘಟನೆಗೂ ಶಿವಮೊಗ್ಗ ಘರ್ಷಣೆಗೂ ಸಂಬಂಧವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಇದು ಕೈಯಲ್ಲಿ ಹಲ್ಲೆ ಮಾಡಿರುವುದರಿಂದ ವೈಯಕ್ತಿಕ ಮಟ್ಟದ ಜಗಳ ಇರಬಹುದು ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.
ಇದನ್ನೂ ಓದಿ| ತುಮಕೂರಿನಲ್ಲೂ ಫ್ಲೆಕ್ಸ್ ವಿವಾದ: ವೀರ ಸಾವರ್ಕರ್ ಚಿತ್ರವಿರುವ ಬ್ಯಾನರ್ ಹರಿದ ಕಿಡಿಗೇಡಿಗಳು