Site icon Vistara News

ಮೇ 9ಕ್ಕೆ ದೇಶದಾದ್ಯಂತ ಕಾಂಗ್ರೆಸ್ ವಿರುದ್ಧ ಬಜರಂಗಿಗಳ ಪ್ರತಿಭಟನೆ; ಹನುಮಾನ್ ಚಾಲೀಸಾ ಪಠಣ

Bajrang Dal to hold nationwide protest Against Congress

#image_title

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ನಿಮಿತ್ತ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪ ಮಾಡಿದ್ದು ಈಗ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ರಾಷ್ಟ್ರಾದ್ಯಂತ ಕಿಡಿ ಹಚ್ಚಿಸಿದೆ. ಕಾಂಗ್ರೆಸ್​ನ ಈ ಪ್ರಣಾಳಿಕೆ ವಿರೋಧಿಸಿ ಮೇ 9ರಂದು ಇಡೀ ದೇಶದಾದ್ಯಂತ ಬಜರಂಗ ದಳ (Bajrang Dal) ಮತ್ತು ವಿಶ್ವ ಹಿಂದು ಪರಿಷದ್​ ಸಂಘಟನೆಗಳು ಹನುಮಾನ್ ಚಾಲೀಸ್ ಪಠಣ ಹಮ್ಮಿಕೊಂಡಿವೆ. ಮೂಲಕ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಿವೆ.

ಈ ಬಗ್ಗೆ ವಿಡಿಯೊ ಸಂದೇಶ ಹರಿಬಿಟ್ಟ ವಿಶ್ವ ಹಿಂದು ಪರಿಷದ್​ ನಾಯಕ ಮಿಲಿಂದ್​ ಪರಾಂಡೆ ‘ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್​ಗಢ ಸೇರಿ ಹಲವು ಕಡೆಗಳಲ್ಲಿ ಕಾಂಗ್ರೆಸ್ ನಾಯಕರು ಬಜರಂಗದಳ ನಿಷೇಧಿಸುವ ಬಗ್ಗೆ ಮಾತಾಡುತ್ತಿದ್ದಾರೆ. ಬಜರಂಗದಳವನ್ನು ದೇಶವಿರೋಧಿ, ನಿಷೇಧಿತ ಪಿಎಫ್​ಐ ಜತೆ ಹೋಲಿಕೆ ಮಾಡುತ್ತಿದ್ದಾರೆ. ಅಂಥವರಿಗೆಲ್ಲ ಹಿಂದು ಸಮುದಾಯ ಒಂದು ಪಾಠ ಕಲಿಸದೆ ಬಿಡುವುದಿಲ್ಲ’ ಎಂದಿದ್ದಾರೆ. ‘ಬಜರಂಗದಳದವರು ದೇಶದಲ್ಲಿ ಏನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಕಾಣಿಸುತ್ತಿಲ್ಲವೇ? ನಮ್ಮ ಸಂಘಟನೆಯವರು ಮಾಡುತ್ತಿರುವ ಗೋರಕ್ಷಣೆ, ರಕ್ತದಾನ, ಹೆಣ್ಣುಮಕ್ಕಳ ರಕ್ಷಣೆ, ಮತಾಂತರ ತಡೆ, ಮಠ, ಮಂದಿರ ಮತ್ತು ಧರ್ಮ ರಕ್ಷಣೆ ಕಾರ್ಯಗಳು ಇವರ ಕಣ್ಣಿಗೆ ಬೀಳುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka election 2023: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಪ್ರಸ್ತಾಪವೇ ಇಲ್ಲ ಎಂದ ಕಮಲ್‌ ನಾಥ್

ಕಾಂಗ್ರೆಸ್​ನವರು ತಮ್ಮ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪ ಮಾಡುತ್ತಿದ್ದಂತೆ ಕಾವು ಮಿತಿಮೀರಿದೆ. ಬಿಜೆಪಿ ಅದನ್ನೇ ಅಸ್ತ್ರವನ್ನಾಗಿಸಿಕೊಂಡಿದೆ. ಅದರಲ್ಲೂ, ಬಜರಂಗದಳದವರಿಗೆ ಹನುಮಾನ್ ಚಾಲೀಸಾ ಏನು ಗೊತ್ತು ಎಂದು ಕಾಂಗ್ರೆಸ್​ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರಶ್ನೆ ಮಾಡಿದ್ದನ್ನೇ ಆ ಸಂಘಟನೆಯವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್​​ನ ಪ್ರಣಾಳಿಕೆ, ಸುರ್ಜೇವಾಲಾ ಹೇಳಿಕೆಯನ್ನು ವಿರೋಧಿಸಿ ಕರ್ನಾಟಕದ ಹಲವು ಮಂದಿರಗಳಲ್ಲಿ ಮೇ 4ರಂದು ಸಂಜೆ 7ಗಂಟೆಗೆ ಹನುಮಾನ್ ಚಾಲೀಸಾ ಪಠಣ ಹಮ್ಮಿಕೊಂಡಿದ್ದರು. ಮೇ 9ರಂದು ಅದನ್ನು ದೇಶವ್ಯಾಪಿ ನಡೆಸಲು ನಿರ್ಧರಿಸಿದ್ದಾರೆ.

Exit mobile version