ಕಾರವಾರ: ಯುವಕನೊಬ್ಬ ತನ್ನ ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಘಟನೆ ಭಟ್ಕಳ ಪಟ್ಟಣದ ಹನುಮಾನ್ ನಗರದಲ್ಲಿ ನಡೆದಿದೆ.
ಈತ ಹನುಮಂತ ನಗರದ ಬೇಕರಿಯೊಂದರಲ್ಲಿ ಉದ್ಯೋಗಿಯಾಗಿರುವ ಈಶ್ವರ ನಾಯ್ಕ(24) ಬೆಳಗ್ಗೆ 10 ಗಂಟೆಗೂ ಮುನ್ನವೇ ಬೇಕರಿಯ ಮತ್ತೊಬ್ಬ ನೌಕರನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸ್ವಲ್ಪ ಸಮಯದ ನಂತರ ಬೇಕರಿಗೆ ಬರುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಬೆಳಗ್ಗೆ 10 ಗಂಟೆಗೆ ಬೇಕರಿ ಸಹೋದ್ಯೋಗಿ ಯುವಕನಿಗೆ ಮತ್ತೆ ಕರೆ ಮಾಡಿದಾಗ ಯಾರೂ ಪ್ರತಿಕ್ರಿಯಿಸಿಲ್ಲ. ಆದರೆ ಅಷ್ಟರಲ್ಲಾಗಲೇ ಯುವಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಮನೆಯವರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ಈಶ್ವರ ಅವರಿಗೆ ಇಬ್ಬರು ಸಹೋದರಿಯರಿದ್ದು ಇಬ್ಬರಲ್ಲಿ ಅಕ್ಕನಿಗೆ ಮದುವೆಯಾಗಿದೆ. ತಂದೆ-ತಾಯಿ ಹಾಗೂ ತಂಗಿಯೊಂದಿಗೆ ಯುವಕ ಮನೆಯಲ್ಲಿ ವಾಸವಿದ್ದು, ಈ ಘಟನೆ ವೇಳೆ ಯಾರೂ ಇರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮೃತನ ಮಾವ ಮಾದೇವ ನಾಯ್ಕ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡ ಎ.ಎಸ್.ಐ ಗೋಪಾಲ್ ನಾಯಕ ತನಿಖೆ ಕೈಗೊಂಡಿದ್ದಾರೆ.
ಮಹಿಳೆ ಶವ ಬಾವಿಯಲ್ಲಿ ಪತ್ತೆ, ವರದಕ್ಷಿಣೆಗಾಗಿ ಕೊಲೆ ಮಾಡಿ ಬಾವಿಗೆ ತಳ್ಳಿದ ಆರೋಪ
ಚಾಮರಾಜನಗರ: ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ಕೆಲವೇ ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಇದರ ಹಿಂದೆ ಹಲವು ಅನುಮಾನಗಳು (Suspicious death) ವ್ಯಕ್ತವಾಗಿವೆ.
ಮೂಡ್ನಾಕೂಡು ಗ್ರಾಮದ ಮಹೇಶ್ ಎಂಬವರ ಪತ್ನಿ ಶಾಲಿನಿ (22) ಮೃತರು. ಶಾಲಿನಿ ಅವರ ಮೃತದೇಹ ಶನಿವಾರ ಬೆಳಗ್ಗೆ ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.
ಕೆಲವೇ ವರ್ಷದ ಹಿಂದೆ ಮದುವೆಯಾಗಿರುವ ಶಾಲಿನಿಯನ್ನು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂದು ಮೃತ ಶಾಲಿನಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ತಪ್ಪಿತಸ್ಥರ ಬಂಧನ ಆಗುವವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಭೇಟಿ ನೀಡಿದ್ದಾರೆ. ಅವರು ಕುಟುಂಬದವರ ಮನವೊಲಿಸಿದರೂ ಒಪ್ಪುತ್ತಿಲ್ಲ. ಶಾಲಿನಿ ತಂದೆ ಶಾಂತಪ್ಪ ಮತ್ತು ಚಿಕ್ಕಮ್ಮ ಚಿನ್ನಮ್ಮ ಅವರು ಮೊದಲು ತಪ್ಪಿತಸ್ಥರನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ.