ಬೆಂಗಳೂರು: ಇದೇ ಜುಲೈ ೧೦ರಂದು ಆಚರಿಸಲಾಗುವ ಬಕ್ರೀದ್ (Bakrid 2022) ಹಬ್ಬಕ್ಕೆ ಸಡಗರದಿಂದ ಸಿದ್ಧತೆಗಳು ನಡೆಯುತ್ತಿವೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕುರಿಗಳನ್ನು ಬಲಿ ನೀಡುವ ಮೂಲಕ ಮುಸ್ಲಿಮರು ಬಕ್ರೀದ್ ಆಚರಿಸುತ್ತಾರೆ. ರಾಜ್ಯ ಸರ್ಕಾರ ಈಗ ಈ ಹಬ್ಬದ ಆಚರಣೆಗೆ ಕೆಲವು ಷರತ್ತುಬದ್ಧ ನಿಯಮಗಳನ್ನು ಜಾರಿಗೆ ತಂದಿದೆ.
ಪ್ರಾಣಿ ಬಲಿ ಸೇರಿದಂತೆ ಹಲವು ನಿರ್ಬಂಧಗಳನ್ನು ಸರ್ಕಾರ ಹೇರಿದ್ದು, ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗದಂತೆ ತಡೆಯಲು ಮುಂದಾಗಿದೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನ: ದಾಖಲೆ ಇದ್ದರೂ ಒಪ್ಪದ ಬಿಬಿಎಂಪಿ, ದ್ವಂದ್ವ ಮುಂದುವರಿಕೆ
ಷರತ್ತುಗಳು ಏನೇನು?
- ಯಾವುದೇ ವಯಸ್ಸಿನ ಆಕಳು, ದನ, ಕರುಗಳನ್ನು, ಜಾನುವಾರುಗಳನ್ನು ಬಲಿ ಕೊಡುವಂತಿಲ್ಲ.
- ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಮಾತ್ರ ಬಲಿ ಕೊಡಬೇಕು. ಅಂತೆಯೇ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವಂತಿಲ್ಲ.
- ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಾಗ ಜಾರಿಯಲ್ಲಿರುವ ಕೋವಿಡ್ ನಿಯಮ ಪಾಲನೆ ಅತ್ಯಗತ್ಯ.
- ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು.
ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಪ್ರಾಣಿ ಬಲಿ ತಡೆ ಕಾಯ್ದೆ 6ರನ್ವಯ ಆರು ತಿಂಗಳು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಲ್ಲದೆ, ಐಪಿಸಿ ಸೆಕ್ಷನ್ ಅಡಿ ಐದು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ಸೂಚಿಸಿದೆ.
ಇದನ್ನೂ ಓದಿ | ಎಲ್ಲೆಂದರಲ್ಲಿ ಚಾಪೆ ಹಾಸಿ ನಮಾಜ್ ಮಾಡುವಂತಿಲ್ಲ ಎಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್!