Site icon Vistara News

Balipa Narayana Bhagavata : ಆ ಮಹಾನ್‌ ಭಾಗವತರ ಊರಿಗೆ ʻಬಲಿಪʼ ಎಂಬ ಹೆಸರು ಬಂದಿದ್ದು ಹೇಗೆ?

Balipa narayana Bhagavata

#image_title

ಬೆಂಗಳೂರು: ಯಕ್ಷಗಾನ ಲೋಕದಲ್ಲಿ ದಂತ ಕಥೆಯಂತೆ ಬದುಕಿ ಯಕ್ಷ ಪ್ರೇಮಿಗಳ ಮನದಾಗಸದಲ್ಲಿ ಧ್ರುವ ನಕ್ಷತ್ರವಾಗಿ ಸ್ಥಾಪನೆಯಾಗಿದ್ದಾರೆ ಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತರು (Balipa Narayana Bhagavata).

ʻಬಲಿಪʼ ಎನ್ನುವ ಒಂದು ಪುಟ್ಟ ಊರಿನ ಹೆಸರನ್ನು ಜಗತ್ತಿನಾದ್ಯಂತ ಪಸರಿಸಿದ, ಯಕ್ಷಗಾನದಲ್ಲಿ ಅದೊಂದು ಶ್ರೀಮಂತ ಪರಂಪರೆಯನ್ನು ಸೃಷ್ಟಿಸಿದವರು ಬಲಿಪ ನಾರಾಯಣ ಭಾಗವತರಾದಿಯಾಗಿ ಕುಟುಂಬದ ಎಲ್ಲ ಕಲಾವಿದರು. ಹಾಗಿದ್ದರೆ ಇಂದು ಜಗತ್ತಿನೆಲ್ಲೆಡೆ ಎಲ್ಲೆಲ್ಲ ಯಕ್ಷ ಪ್ರೇಮಿಗಳಿದ್ದಾರೋ ಅಲ್ಲೆಲ್ಲ ಜನಜನಿತವಾಗಿರುವ ಬಲಿಪ ಎಂಬ ಊರಿಗೆ ಆ ಹೆಸರು ಬಂದಿದ್ದು ಹೇಗೆ? ಖ್ಯಾತ ಯಕ್ಷ ಸಂಘಟಕ ಮೂಡುಬಿದಿರೆಯ ಯಕ್ಷ ಸಂಗಮದ ಎಂ. ಶಾಂತರಾಮ ಕುಡ್ವರು ವಿವರಿಸುತ್ತಾರೆ.

ಬಲಿಪ ಎಂಬ ಹೆಸರು ಹೇಗೆ ಬಂತು?

ʻಬಲಿಪʼ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಬಲಿಪರೇ ನನ್ನಲ್ಲಿ ಹೇಳಿದ ಸ್ವಾರಸ್ಯಕರ ಕಥೆಯೊಂದು ಹೀಗಿದೆ.
ʻಅಂಗರಾಜೆ ಮನೆತನʼದವರಾದ ಬಲಿಪರ ಹಿರಿಯರ ಮನೆ ಪಡ್ರೆಯಲ್ಲಿದೆ. ಅಲ್ಲೇ ಸನಿಹದಲ್ಲಿ ಸಾಲೆತ್ತಡ್ಕ ಎಂಬಲ್ಲಿ ʻಬಲಿಪರ ಜಾಲುʼ ಎಂಬಲ್ಲಿ ಬಲಿಪರ ಹಿರಿಯ ಪೀಳಿಗೆಯವರು ವಾಸವಾಗಿದ್ದರು. ಈ ಕಾರಣಕ್ಕೆ ʻಬಲಿಪʼ ಎಂಬ ಹೆಸರು ಬಂದಿರಬಹುದು.

ಇನ್ನೊಂದು ಕಥೆಯ ಪ್ರಕಾರ, ಬಲಿಪರ ಹಿರಿಯರೊಬ್ಬರು ಆ ಕಾಲದಲ್ಲಿ ತೀರ್ವೆ ಕಟ್ಟಲು ಮಡಿಕೇರಿಗೆ ಹೋಗುತ್ತಿದ್ದರು. ಅ ಕಾಲದಲ್ಲಿ ಮಡಿಕೇರಿಯಲ್ಲಿಯೇ ತೀರ್ವೆ ಕಟ್ಟಬೇಕಾಗಿತ್ತು. ಅಂದೆಲ್ಲಾ ಬಸ್ಸು, ವಾಹನಗಳು ವಿರಳವಾದ ಕಾರಣ ನಡೆದೇ ಹೋಗುವುದು.

ಒಂದು ಸಲ , ಆ ಹಿರಿಯರು ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿ ವೇಳೆ ʻಅಡ್ಡ ಬಲಿಪʼವನ್ನು (ಹೆಬ್ಬುಲಿ ) ಕೊಂದರಂತೆ. ಅದನ್ನು ಕೊಂಡೊಯ್ದು ಅಲ್ಲಿನ ರಾಜರಿಗೆ ತೋರಿಸಿದರಂತೆ. ಅದರಿಂದ ಸಂತೋಷಗೊಂಡ ರಾಜ, ಅವರ ಸಾಹಸಕ್ಕೆ ಮೆಚ್ಚಿ, ನಿಮ್ಮ ಜಾಗೆಗೆ ಇಂದಿನಿಂದ ತೀರ್ವೆ ನೀಡಬೇಕಾಗಿಲ್ಲ ಎಂದರಂತೆ. ಆ ಪ್ರಕಾರ ಪಡ್ರೆಯ ಬಾರ್ಮೊಗ ಎಂಬ ಜಾಗೆಗೆ ಇಂದಿಗೂ ತೀರ್ವೆಯಿಲ್ಲ . ಬಲಿಪನನ್ನು ಕೊಂದ ಕಾರಣಕ್ಕೆ ʻಬಲಿಪʼ ಎಂಬ ಬಿರುದು ಅವರ ಮನೆತನಕ್ಕೆ ಬಂತು ಎಂಬ ಕಥೆಯೂ ಪ್ರಚಲಿತದಲ್ಲಿದೆ.

ಬಲಿಪ ಮನೆತನಕ್ಕೆ ಅಂಥಹುದೊಂದು ಕೀರ್ತೀ ಕಲಶವಿದೆ. ಈ ಕಥೆಗಳೆಲ್ಲವನ್ನೂ ಒತ್ತಟ್ಟಿಗಿಟ್ಟರೂ, ಬಲಿಪ ಮನೆತನ ಎನ್ನುವುದು ತನ್ನ ಶಕ್ತಿಯಿಂದ, ಪರಿಶ್ರಮದಿಂದ ಮತ್ತು ಅಪಾರವಾದ ಶ್ರದ್ಧೆಯಿಂದ ಯಕ್ಷಗಾನ ಲೋಕದಲ್ಲಿ ಯಾರೂ ನಿರ್ಮಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಅದು ಹುಲಿ ಹೆಜ್ಜೆಯೂ ಹೌದು.

ಇದನ್ನೂ ಓದಿ : Balipa Narayana Bhagavata : ಬಲಿಪ ಪರಂಪರೆಯ ಬಲಿಷ್ಠ ಕೊಂಡಿ, ಯಕ್ಷ ಲೋಕದ ದಂತ ಕಥೆ ಬಲಿಪ ನಾರಾಯಣ ಭಾಗವತರು

Exit mobile version