ಬಳ್ಳಾರಿ: ಮುಂಬರುವ ಜೂನ್ 7ರಿಂದ 13 ರವರೆಗೆ ಥೈಲ್ಯಾಂಡ್ (Thailand)ನಲ್ಲಿ ನಡೆಯಲಿರುವ ಏಶಿಯನ್ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್ (Cyclist) ಪಾಯಲ್ ಖುಷಿಲಾಲ್ ಚವ್ಹಾಣ್ ಅವರು ಬಳ್ಳಾರಿ ನಗರ ನೂತನ ಶಾಸಕ ನಾರಾ ಭರತ್ ರೆಡ್ಡಿಯವರ ನೆರವನ್ನು ನೆನೆದು ಸಂತಸ ವ್ಯಕ್ತಪಡಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಏಷಿಯನ್ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಇದೇ ತಿಂಗಳ ಕೊನೆಯ ವಾರದಲ್ಲಿ ಭಾರತದಿಂದ ಅವರ ತಂಡ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಕ್ಲಿಸ್ಟ್ ಪಾಯಲ್ ಚವ್ಹಾಣ್, ಬಳ್ಳಾರಿ ನಗರದ ನೂತನ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲವನ್ನು ನೆನೆದಿದ್ದಾರೆ.
ಇದನ್ನೂ ಓದಿ: Karnataka Cabinet : ದಿಲ್ಲಿಯಲ್ಲಿ ಸಂಪುಟ ರಚನೆಗೆ ಕಸರತ್ತು; ಈ ಬಾರಿ ಅವಕಾಶ ಪಡೆಯುವ ಹೊಸಬರೆಷ್ಟು?
ಅಂದಾಜು 8 ಲಕ್ಷ ರೂ. ಮೌಲ್ಯದ ಸೈಕಲ್ ಉಡುಗೊರೆ
ಕಳೆದ ಎರಡು ವರ್ಷಗಳ ಹಿಂದೆ ತಾವು ಸೈಕ್ಲಿಂಗ್ ಪ್ರಾಕ್ಟೀಸ್ ಮಾಡಲು ದುಬಾರಿ ವೆಚ್ಚದ ಅತ್ಯಾಧುನಿಕ ಸೈಕಲ್ ಅಗತ್ಯವಿದ್ದು, ಅಂತಹ ಕ್ರೀಡಾ ಸೈಕಲ್ ಅನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮವೊಂದು ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿದಾಗ, ನಾರಾ ಭರತ್ ರೆಡ್ಡಿ ಅವರು ತಮ್ಮ ನೇತೃತ್ವದ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ತಮಗೆ ಅಂದಾಜು 8 ಲಕ್ಷ ರೂ. ಮೌಲ್ಯದ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ತದನಂತರ ಈ ಸೈಕಲ್ ಮೂಲಕ ಪ್ರಾಕ್ಟೀಸ್ ಮಾಡಿ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಾಧ್ಯವಾಯಿತು. ಈಗ ಥೈಲ್ಯಾಂಡ್ ದೇಶಕ್ಕೆ ನಾನು ಸ್ಪರ್ಧೆಯಲ್ಲಿ ಭಾಗಿಯಾಗುವುದರ ಹಿಂದೆ ನಾರಾ ಭರತ್ ರೆಡ್ಡಿ ಅವರು ಅಂದು ಅತ್ಯಾಧುನಿಕ ಸ್ಪೋರ್ಟ್ಸ್ ಸೈಕಲ್ ಅನ್ನು ಕೊಡಿಸಿದ್ದೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಈ ಸಾಧನೆಗೆ ನಾರಾ ಭರತ್ ರೆಡ್ಡಿ ಅವರ ಸಹಾಯವೇ ಕಾರಣ ಎಂದಿದ್ದಾರೆ.
ಇದನ್ನೂ ಓದಿ: Actor Jaggesh: ಸದ್ದಿಲ್ಲದೇ ಒಟಿಟಿಗೆ ಬಂತು ʻರಾಘವೇಂದ್ರ ಸ್ಟೋರ್ಸ್ʼ ಸಿನಿಮಾ!
ನಾರಾ ಭರತ್ ರೆಡ್ಡಿ ಹರ್ಷ
ಸದ್ಯ ಬೆಂಗಳೂರಿನಲ್ಲಿರುವ ಶಾಸಕ ನಾರಾ ಭರತ್ ರೆಡ್ಡಿ ಅವರು, ಥೈಲ್ಯಾಂಡ್‌ನಲ್ಲಿ ನಡೆಯುವ ಅಂತರ್‌ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಪಾಯಲ್ ಅವರು ಆಯ್ಕೆಯಾಗಿರುವ ವಿಷಯ ತಿಳಿದು ಹರ್ಷ ವ್ಯಕ್ತಪಡಿಸಿದ್ದಾರೆ. ಪಾಯಲ್ ಅವರು ಇದೇ ರೀತಿ ಇನ್ನೂ ದೊಡ್ಡ ದೊಡ್ಡ ಸ್ಪರ್ಧೆಗಳಲ್ಲಿ ಭಾಗಿಯಾಗಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ. ನಮ್ಮ ಇಂದಿನ ಯುವಜನರಿಗೆ ಪಾಯಲ್ ಮಾದರಿ ಎಂದು ಅಭಿಪ್ರಾಯಪಟ್ಟಿದ್ದಾರೆ.