ಕಂಪ್ಲಿ: ರಾಜಕೀಯದ ಬಗ್ಗೆ ಯಾವುದೇ ಗಂಧ-ಗಾಳಿ ಗೊತ್ತಿಲ್ಲದ ರವಿ ಎಂಬ ನೂತನ ಶಾಸಕ (MLA) ಆಪರೇಷನ್ ಕಮಲದ ಕುರಿತಾಗಿ ಬಿಜೆಪಿ (BJP) ವಿರುದ್ಧ ಟೀಕೆ ಮಾಡುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬಿಜೆಪಿ ಪಕ್ಷಕ್ಕಿಲ್ಲ. ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಇದೇ ಸರ್ಕಾರ 5 ವರ್ಷಗಳ ಕಾಲ ಪೂರ್ಣ ಅವಧಿಯಲ್ಲಿ ಆಡಳಿತ ನಿರ್ವಹಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ರಾಜ್ಯದ ಉಪ ಮುಖ್ಯಮಂತ್ರಿಯಾದ ಡಿ.ಕೆ. ಶಿವಕುಮಾರ್ ಅವರು ತಮ್ಮ ಬಳಿ ಇರುವ ಬೇನಾಮಿ ಅಕ್ರಮ ಆಸ್ತಿಯನ್ನು ಸಕ್ರಮಗೊಳಿಸುವ ದುರುದ್ದೇಶದಿಂದ ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ಕುತಂತ್ರ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸುವ ಸರ್ಕಾರವಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Onion Price: ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಗಗನಕ್ಕೇರಿದ್ದೇಕೆ?
ಒಂದು ಬಾರಿ ವಿಭಜನೆಯಾದ ಜಿಲ್ಲೆಗಳು ಮತ್ತೆ ಸೇರ್ಪಡೆಗೊಂಡಿರುವ ಯಾವುದೇ ಇತಿಹಾಸವಿಲ್ಲ. ಆದರೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳನ್ನು ಮತ್ತೆ ಒಂದು ಮಾಡುತ್ತೇನೆಂದು ಸಚಿವ ಬಿ. ನಾಗೇಂದ್ರ ಅವರು ಹೇಳಿಕೆ ನೀಡುತ್ತಿರುವುದು ರಾಜಕೀಯವಾಗಿ ಮಾತನಾಡಬೇಕೆಂದು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಸದ್ಯಕ್ಕಿಲ್ಲ. ಹೈಕಮಾಂಡ್ ಮಾರ್ಗದರ್ಶನದಂತೆ ರಾಜ್ಯದಾದ್ಯಂತ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗೆ ಶ್ರಮವಹಿಸುತ್ತೇನೆ ಎಂದರು.
ಇದನ್ನೂ ಓದಿ: Fire Accident : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ; ಸುಟ್ಟು ಕರಕಲಾದ ಎಸಿ ಬಸ್‌ಗಳು
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಮುಖಂಡರಾದ ಪಿ. ಬ್ರಹ್ಮಯ್ಯ, ಜಿ. ಸುಧಾಕರ್, ಬಿ. ಸಿದ್ದಪ್ಪ, ಬಿ. ನಾರಾಯಣಪ್ಪ, ಪುರುಷೋತ್ತಮ, ವೆಂಕಟೇಶ್ ಭರಮಕ್ಕನವರ್, ಶಾಂತಲಾ, ರಾಮಾಂಜಿನಿ, ಕೊಡಿದಲ ರಾಜು ಸೇರಿದಂತೆ ಇತರರಿದ್ದರು.