Site icon Vistara News

Ballari News: ಚರಂಡಿ ಸ್ವಚ್ಛ ಮಾಡಿ ಎಂದಿದ್ದೇ ತಪ್ಪಾ?; ಕರ್ತವ್ಯಕ್ಕೆ ಅಡ್ಡಿ ಎಂದು ದೂರುದಾರನ ಮೇಲೆಯೇ ದೂರು!

Grama Panchayat ballari

#image_title

ಶಶಿಧರ ಮೇಟಿ, ಬಳ್ಳಾರಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬ ಜನ ಸಾಮಾನ್ಯನಿಗೂ ಇದೆ. ಆದರೆ, ಇಂತಹ ಹಕ್ಕು ಪ್ರಯೋಗಿಸಿದರೆ ಕರ್ತವ್ಯಕ್ಕೆ ಅಡ್ಡಿ ಪ್ರಯೋಗಿಸಿದ್ದಾರೆಂಬ ಪ್ರತ್ಯಾಸ್ತ್ರ ಪ್ರಯೋಗವಾಗುತ್ತದೆ ಎಂಬ ಆರೋಪಗಳು ಇವೆ. ಕಳೆದ ಮೂರು ವರ್ಷಗಳಿಂದ (Ballari News) ಬಾಗೇವಾಡಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಲ್ಲಿನ ಸಾರ್ವಜನಿಕ ಕುಟುಂಬದ ಮಧ್ಯೆ ಆರೋಪ ಮತ್ತು ಪ್ರತ್ಯಾರೋಪ ನಡೆಯುತ್ತಿದೆ.

೨೦೨೦ರಲ್ಲಿ ಚರಂಡಿ ಸ್ವಚ್ಛತೆಗೆ ಬಾಗೇವಾಡಿ ಗ್ರಾಮದ ಪವನ್‌ ಕುಮಾರ್ ಮನವಿ ಮಾಡಿದಾಗ, ಗ್ರಾಪಂನಲ್ಲಿ ಹಣವಿಲ್ಲ ಎಂದು ಉತ್ತರಿಸಿದ್ದಾರೆ, ಇದುವೇ ಸಂಘರ್ಷಕ್ಕೆ ಕಾರಣವಾಗಿದೆ. ಹಣವಿಲ್ಲವೆಂಬ ಉತ್ತರಕ್ಕೆ ಬೇಸರಗೊಂಡ ಪವನ್‌ ಕುಮಾರ್ ಮಾಹಿತಿ ಹಕ್ಕಿನಲ್ಲಿ ಗ್ರಾಪಂಗೆ ಬಿಡುಗಡೆ ಅನುದಾನ, ಬಳಕೆಯಾದ ಅನುದಾನ ಮತ್ತು ಕಾಮಗಾರಿಯ ಮಾಹಿತಿಯನ್ನು ಪಡೆಯಲು ಮುಂದಾಗಿದ್ದಾರೆ, ಆದರೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಅರ್ಜಿದಾರ ಪವನ್‌ ಕುಮಾರ್ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ | Karnataka Election: ಬಾಗೇಪಲ್ಲಿಯಲ್ಲಿ ಅನಿತಾ ಕುಮಾರಸ್ವಾಮಿಯನ್ನು ಸ್ಪರ್ಧೆಗಿಳಿಸಲು ನನಗೇನು ಹುಚ್ಚೇ ಎಂದ ಎಚ್‌ಡಿಕೆ

ದೂರುದಾರರ ವಿರುದ್ಧವೇ ದೂರು ದಾಖಲು!

ಗ್ರಾಮ ಪಂಚಾಯಿತಿಗೆ ವಸ್ತುಗಳ ಖರೀದಿ, ಸಿಮೆಂಟ್ ಪೈಪ್ ಕಾಮಗಾರಿ, ಒಂದೇ ಕಾಮಗಾರಿಗೆ ಎರಡು ಬಿಲ್, ಒಳಚರಂಡಿ ಕಾಮಗಾರಿ, ಕೆಲವೊಂದು ವಸ್ತುಗಳ ಖರೀದಿ, ಹೀಗೆ ಕೆಲವೊಂದು ವಿಚಾರದಲ್ಲಿ ನಿಯಮ ಪಾಲನೆ ಮಾಡಿಲ್ಲ, ಅಕ್ರಮವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಕೂಡಲೇ ಪಿಡಿಒ ಅವರನ್ನು ಅಮಾನತು ಮಾಡಿ, ತನಿಖೆ ಮಾಡಬೇಕೆಂದು ದೂರು ನೀಡಿದ್ದಾರೆ. ಇಂತಹ ಬೆಳವಣಿಗೆ ಮಧ್ಯೆಯೇ ಪಿಡಿಒ ಸುಜಾತ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಸಿರುಗುಪ್ಪ ಠಾಣೆಯಲ್ಲಿ ದೂರುದಾರ ಪವನ್‌ ಕುಮಾರ್ ಮತ್ತು ಅವರ ತಂದೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಆರೋಪಿಸಿರುವ ವಿಷಯ ಸುಳ್ಳು!

ಪಿಡಿಒ ನೀಡಿರುವ ಪ್ರತಿಯೊಂದು ದೂರಿನ ವಿಷಯಕ್ಕೆ ದೂರುದಾರ ಪವನ್‌ ಕುಮಾರ್ ಮತ್ತು ಅವರ ತಂದೆ ಸಿದ್ದಯ್ಯಸ್ವಾಮಿ ಅವರು ಸ್ಪಷ್ಟನೆ ನೀಡಿ, ಮೇಲಾಧಿಕಾರಿಗಳಿಗೆ ಪತ್ರ ಬರೆದು, ಅವರು ದೂರಿನಲ್ಲಿ ನೀಡಿರುವ ಅಂಶವು ಸತ್ಯಕ್ಕೆ ದೂರವಾಗಿದೆ. ನಮ್ಮ ಸಮಸ್ಯೆಯ ಬಗ್ಗೆ ಕೇಳಿದರೆ ಅನಗತ್ಯವಾಗಿ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ | Project K Movie : ಎರಡು ಭಾಗಗಳಾಗಿ ಬರಲಿದೆ ಪ್ರಭಾಸ್‌ – ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್‌ ಕೆ?

ಇಲಾಖೆಯ ಕದ ತಟ್ಟಿದ ದೂರು

ಪಿಡಿಒ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಿದ ತಾಪಂ ಸಮಿತಿ ವರದಿ ಮತ್ತು ಜಿಪಂನ ತನಿಖಾ ಸಂಸ್ಥೆಯ ವರದಿಯಲ್ಲಿ ಪಿಡಿಒ ವಿರುದ್ಧ ಆರೋಪಕ್ಕೆ ಕ್ಲೀನ್‌ ಚಿಟ್ ನೀಡಿತ್ತು. ಆದರೆ ದೂರುದಾರ ಇದನ್ನು ಪ್ರಶ್ನಿಸಿ ಏಕಪಕ್ಷೀಯವಾಗಿ ವರದಿ ನೀಡಿದ್ದಾರೆಂದು ಗ್ರಾಮೀಣ ಮತ್ತು ಪಂಚಾಯತ್ ರಾಜ್ಯ ಇಲಾಖೆಗೆ ದೂರು ನೀಡಿದ್ದಾರೆ. ಇನ್ನು ಜಿಪಂ ಸಮಿತಿಯು ತನಿಖೆಗೆ ಬಂದಾಗ ನನಗೆ ಮಾಹಿತಿ ನೀಡಿಲ್ಲ, ತನಿಖೆ ಮಾಡಿದ ಮೇಲೆ ಸಂಜೆ ನಮಗೆ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿ, ಜಿಪಂ ಸಿಇಒಗೆ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಿಸಲ್ಲ ಎನ್ನುತ್ತಿದ್ದಾರೆ ದೂರುದಾರರು.

ಸಿದ್ದಯ್ಯಸ್ವಾಮಿ ಹೇಳಿಕೆ

ನಾವು ದೂರು ಕೊಟ್ಟ ಮೇಲೆ ತನಿಖಾ ತಂಡವನ್ನು ತಾಪಂನಿಂದ ಬರುತ್ತದೆ, ತಮ್ಮ ದೂರಿನಲ್ಲಿ ತಿಳಿಸಿರುವ ವಿಚಾರದ ಮೇಲೆ ತನಿಖೆ ಮಾಡಿಲ್ಲ, ತನಿಖಾ ವರದಿ ಯಾವ ರೀತಿ ನಡೆಸಿದ್ದಾರೆಂದು ನಮ್ಮ ಆಕ್ಷೇಪಣೆಯಲ್ಲಿ ಸಲ್ಲಿಸಿದ್ದೇವೆ, ಜಿಪಂನಿಂದ ತನಿಖಾ ತಂಡವನ್ನು ನೇಮಕ ಮಾಡುತ್ತಾರೆ, ಆದರೆ ತನಿಖಾ ತಂಡವು ನಮಗೆ ನೋಟಿಸ್ ನೀಡದೆ ತಾವೇ ತನಿಖೆ ನಡೆಸಿ, ತನಿಖೆ ಮುಗಿಸಿದ ಮೇಲೆ ಸಂಜೆ ನಮಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಜಿಪಂ ಸಿಇಒಗೆ ದೂರು ನೀಡಿದ್ದೇನೆ. ಆದರೆ ತನಿಖಾ ವರದಿಯಲ್ಲಿ ದೂರುದಾರ ಹಾಜರಾಗಿದ್ದಾರೆಂದು ನಮೂದಿಸಿದ್ದಾರೆ ಎಂದು ದೂರುದಾರ ಪವನ್‌ ಕುಮಾರ್ ತಂದೆ ಸಿದ್ದಯ್ಯಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: JDS Politics : ಸಿಂಧಗಿಯಿಂದ ಮಾಜಿ ಸೈನಿಕ ಶಿವಾನಂದ ಸೋಮಜ್ಯಾಳ ಪತ್ನಿ ವಿಶಾಲಾಕ್ಷಿ ಕಣಕ್ಕೆ: ಎಚ್‌.ಡಿ. ಕುಮಾರಸ್ವಾಮಿ ಘೋಷಣೆ

ಉಪ ಕಾರ್ಯದರ್ಶಿ ಹೇಳಿಕೆ
ಸಿರುಗುಪ್ಪ ತಾಲೂಕು ಬಾಗೇವಾಡಿಯಿಂದ ಗ್ರಾಪಂನ ಪಿಡಿಒ ವಿರುದ್ಧ ಗ್ರಾಮದ ಪವನ್‌ ಕುಮಾರ್ ಎನ್ನುವವರು ದೂರು ಕೊಟ್ಟಿದ್ದರು. ಈ ಬಗ್ಗೆ ತಾಪಂನಿಂದ ವರದಿ ಕೇಳಲಾಗಿತ್ತು. ವರದಿಯಲ್ಲಿ ಯಾವುದೇ ಆರೋಪಗಳು ರುಜುವಾಗಿಲ್ಲ. ಜಿಪಂ ಸಮಿತಿಯ ವರದಿಯಲ್ಲಿ ಗುರುತರವಾದ ಆರೋಪಗಳಿಲ್ಲವೆಂದು ಹೇಳಿದ್ದಾರೆ. ಆದರೆ ತನಿಖಾ ತಂಡ ಬಂದಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ದೂರು ಕೊಟ್ಟಿದ್ದಾರೆ, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಜಿಪಂ ಸಿಇಒ ಹತ್ತಿರ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಳ್ಳಾರಿ ಜಿಪಂ ಉಪ ಕಾರ್ಯದರ್ಶಿ ಶರಣ ಬಸವ ಹೇಳಿಕೆ ನೀಡಿದ್ದಾರೆ.

Exit mobile version