Site icon Vistara News

Ballary Hospital problem: 11 ವರ್ಷವಾದರೂ ಮುಗಿಯದ ಕಾಮಗಾರಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಯಾವಾಗ?

Ballary hospital

#image_title

ಎಸ್‌.ಎರಿಸ್ವಾಮಿ ವಿಸ್ತಾರ ನ್ಯೂಸ್‌ ಬಳ್ಳಾರಿ
ಗಣಿನಾಡು ಬಳ್ಳಾರಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (Ballary Hospital problem) ಕಾಮಗಾರಿಗೆ ಹನ್ನೊಂದು ವರ್ಷ ವಯಸ್ಸು! ಈಗಾಗಲೇ ಮೂರು ಸರಕಾರಗಳು ಬದಲಾವಣೆಯಾಗಿವೆ. ಆದರೂ ಇನ್ನೂ ಆಸ್ಪತ್ರೆ ಮಾತ್ರ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಕಾಲ ಕೂಡಿ ಬಂದಿಲ್ಲ; ನಿರ್ಮಾಣ ಹಂತದಲ್ಲಿಯೇ ಉಳಿದಿದೆ.

ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ ಸೇರಿ ನಾನಾ ಜಿಲ್ಲೆ ಹಾಗೂ ನೆರೆಯ ಆಂಧ್ರದ ಕರ್ನೂಲ್‌, ಗುತ್ತಿ, ಗುಂತಕಲ್‌ ಗ್ರಾಮಗಳ ಜನರಿಗೆ ಚಿಕಿತ್ಸೆಗೆ ಸಾಕಷ್ಟು ಅನುಕೂಲವಾಗುವ ಉದ್ದೇಶದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ನಿರ್ಮಾಣ ಎರಡು ಹಂತಗಳಲ್ಲಿ ಆರಂಭವಾಗಿದೆ. 2012 ಮತ್ತು 2013ರಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಆಸ್ಪತ್ರೆಗೆ ಆರಂಭದಲ್ಲಿ 80 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 17 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ನಂತರ ಹೆಚ್ಚುವರಿಯಾಗಿ 25 ಕೋಟಿ ರೂ. ಬಿಡುಗಡೆ ಮಾಡಿದೆ. ಅದಾಗ್ಯೂ ಅನುದಾನ ಕೊರತೆಯಿಂದ ಕಾಮಗಾರಿ ಮತ್ತೆ ವಿಳಂಬವಾಗಿದೆ. ಡಿಸೆಂಬರ್ ಒಳಗೆ ಪೂರ್ಣಗೊಳ್ಳುವ ವಿಶ್ವಾಸ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪಾಳು ಬಿದ್ದಿರುವ ಬಳ್ಳಾರಿಯ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ಕಟ್ಟಡ

ನೆರೆಯ ಆಂಧ್ರಪ್ರದೇಶದ ಹಯಗ್ರೀವ ಕನ್‌ಸ್ಟ್ರಕ್ಷನ್‌ ಸಂಸ್ಥೆ ಆಸ್ಪತ್ರೆ ಕಾಮಗಾರಿ ಕೈಗೆತ್ತಿಗೊಂಡಿತ್ತು. ಆದರೆ, ಸರಕಾರ ಬದಲಾವಣೆಗಳ ಹಾಗೂ ಅನುದಾನ ಬಿಡುಗಡೆ ವಿಳಂಬದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿತು. ಈ ಮಧ್ಯೆ ಕೊರೊನಾದಿಂದ ಕೆಲಸವೇ ನಡೆಯಲಿಲ್ಲ. ಹೊಣೆ ಹೊತ್ತಿದ್ದ ಹಯಗ್ರೀವ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆ ಕಾಮಗಾರಿ ಸ್ಥಗಿತಗೊಳಿಸಿತು. ಸದ್ಯ ಬೆಂಗಳೂರಿನ ಗುತ್ತಿಗೆದಾರರಿಗೆ ಕಾಮಗಾರಿಯ ಹೊಣೆ ವಹಿಸಲಾಗಿದೆ. ಆಸ್ಪತ್ರೆ ಕಾಮಗಾರಿ ವಿಚಾರ ಶಾಸಕ ಜಿ. ಸೋಮಶೇಖರ ರೆಡ್ಡಿ ಸದನದಲ್ಲಿ ಚರ್ಚಿಸಿದ್ದಾರೆ. ಸಚಿವ ಶ್ರೀರಾಮುಲು ಬಿಜೆಪಿ ಸರಕಾರ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಕಾರ್ಯಕ್ರಮವೊಂದರಲ್ಲಿ ತಾವೇ ಹೇಳಿಕೊಂಡಿದ್ದರು. ಮೂರು ಸರಕಾರಗಳ ಅವಧಿ ಪೂರ್ಣಗೊಂಡರೂ ಆಸ್ಪತ್ರೆಯ ಅನುದಾನ ಅನಾರೋಗ್ಯವನ್ನು ಸರಕಾರ ಸರಿಪಡಿಸಿಲ್ಲ.

ಪಾಳು ಬಿದ್ದಿರುವ ಬಳ್ಳಾರಿಯ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌

ಸೂಪರ್‌ ಸೆಷ್ಪಾಲಿಟಿ ಆಸ್ಪತ್ರೆ ನಿರ್ಮಾಣವಾದರೆ 450 ಬೆಡ್‌, ಸೆಂಟ್ರಲೈಸ್ಡ್‌ ಎಸಿ, ವ್ಹೀಲ್‌ ಆಧಾರಿತ ಬೆಡ್‌, ಕಾರ್ಡಿಯಾಲಿಜಿ, ರೇಡಿಯಾಲಜಿ, ಪ್ಲಾಸ್ಟಿಕ್‌ ಸರ್ಜರಿ ಸೇರಿ ನಾನಾ ಸೌಲಭ್ಯ ದೊರೆಯುವುದು. ಆದರೆ, ಅಸ್ಪತ್ರೆಯು‌ ಕಾಮಗಾರಿ ಹಂತದಲ್ಲಿಯೇ ಉಳಿದಿದೆ. ಉದ್ಘಾಟನೆಗೆ ಇನ್ನು ಎಷ್ಟು ವರ್ಷ ಕಾಯಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.

ಇದನ್ನೂ ಓದಿ : Super Speciality Hospital: ಉ.ಕ.ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಬಗೆಹರಿದ ಜಾಗದ ಗೊಂದಲ

Exit mobile version