ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿಮ್ಸ್) ನಡೆದ ವಿದ್ಯುತ್ ವ್ಯತ್ಯಯ ಮತ್ತು ಸಾವಿನ ಪ್ರಕರಣದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ವಿಮ್ಸ್ ಅಧಿಕಾರಿಗಳು ಮತ್ತು ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಕೇಬಲ್ ಬ್ಲಾಸ್ಟ್‌ನಿಂದ ಐಸಿಯುನಲ್ಲಿರುವ ರೋಗಿಗಳು ಮೃತಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಡಾ. ಸುಧಾಕರ್ ಅವರು ವಿಮ್ಸ್‌ಗೆ ಆಗಮಿಸಿದ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಐಸಿಯುನಲ್ಲಿ ಅಂದು ಎಷ್ಟು ಹೊತ್ತು ಕರೆಂಟ್ ಹೋಗಿತ್ತು, ವಿದ್ಯುತ್ತಿನ ಪರ್ಯಾಯ ವ್ಯವಸ್ಥೆ ಇತ್ತಾ, ಸಾವಿಗೆ ಕಾರಣವಾದ ಅಂಶಗಳ ಕುರಿತಾಗಿ ಅಧಿಕಾರಿಗಳಿಂದ ಸಚಿವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಭೆಯ ನಂತರ ಕೇಬಲ್ ಬ್ಲಾಸ್ಟ್ ಆಗಿರುವ ಪ್ರದೇಶಕ್ಕೆ ಹಾಗು ವಿದ್ಯುತ್ ವ್ಯತ್ಯಯದಿಂದ ಮೃತ ಪಟ್ಟಿದ್ದಾರೆಂಬ ಐಸಿಯುಗೆ ಭೇಟಿ ನೀಡಲಿದ್ದಾರೆ.
ಶುಕ್ರವಾರ ಡಾ.ಸ್ಮಿತಾ ನೇತೃತ್ವದ ತನಿಖಾ ತಂಡ ಆಗಮನ ಸಂದರ್ಭದಲ್ಲಿ ತನಿಖೆಗೆ ಕೊಂಚ ಭದ್ರತೆ ಕಡಿಮೆ ಇತ್ತು. ಈ ಹಿನ್ನಲೆಯಲ್ಲಿ ಪೊಲೀಸರು ವಿಮ್ಸ್ ಆವರಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಡಿವೈಎಸ್ಪಿ, ಇನ್ಸ್ಪೆಕ್ಟರ್ ಸೇರಿದಂತೆ ೪೦ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ, ಎಸ್ಪಿ ಸೈದುಲಾ ಅಡಾವತ್, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ವಿಮ್ಸ್ ವಿವಿಧ ವಿಭಾಗದ ಎಚ್ಓಡಿ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ | Vims Bellary | ಸಿದ್ದರಾಮಯ್ಯ-ಸುಧಾಕರ್ ಜಟಾಪಟಿ; ಗಂಭೀರವಾಯ್ತು ವಿಮ್ಸ್ ರೋಗಿಗಳ ಸಾವು ಪ್ರಕರಣ