ಬಳ್ಳಾರಿ: ವೆಂಟಿಲೇಟರ್‌ನಲ್ಲಿದ್ದ ಮೌಲಾ ಹುಸೇನ್ ಮತ್ತು ಚೆಟ್ಟೆಮ್ಮ ಅವರ ಸಾವಿಗೆ ವಿದ್ಯುತ್ ಕಡಿತ ಕಾರಣವಲ್ಲ ಎಂಬುದು ಇಲ್ಲಿನ ವೈದ್ಯರ ಮಾಹಿತಿ ಮತ್ತು ದಾಖಲೆಯಿಂದ ತಿಳಿಯುತ್ತದೆ, ಆದರೆ, ನನ್ನ ನಿರ್ಧಾರವನ್ನು ಹೇಳುವುದಿಲ್ಲ, ಅದು ತನಿಖಾ ತಂಡದ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ತನಿಖಾ ತಂಡದ ವರದಿಯೇ ಅಂತಿಮ, ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಭಾನುವಾರ ವಿಮ್ಸ್‌ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.14ರಂದು ಬೆಳಗ್ಗೆ 8:20ರಿಂದ 9:30ರವರೆಗೆ ವಿದ್ಯುತ್ ಕಡಿತವಾಗಿರುವುದು ನಿಜ, ಒಂದು ಗಂಟೆಯ ಅವಧಿಯಲ್ಲಿ ಇಬ್ಬರು ನಿಧನರಾಗಿದ್ದಾರೆ, ಈ ಸಂದರ್ಭದಲ್ಲಿ ವೆಂಟಿಲೇಟರ್ ಬ್ಯಾಕಪ್‌ನಲ್ಲಿ ನಡೆಯುತ್ತಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೌಲಾಹುಸೇನ್(35) ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದಾರೆ. ಮುಂಚೆಯೇ ರೋಗಿಯ ಸಂಬಂಧಿಕರಿಗೆ ರೋಗಿಯ ಸ್ಥಿತಿಯ ಬಗ್ಗೆ ತಿಳಿಸುತ್ತಾ, ಸಹಿ ಪಡೆದಿದ್ದಾರೆ ಎಂದರು.
ವೈದ್ಯರಿಂದಲೇ ಮಾಹಿತಿ ಸಂಗ್ರಹ
ವಿಷಕಾರಿ ಹಾವು ಕಡಿತದಿಂದ ವಿಮ್ಸ್ ಗೆ ದಾಖಲಾಗಿದ್ದ ಚೆಟ್ಟೆಮ್ಮ(30)ಎನ್ನುವವರ ಆರೋಗ್ಯದ ಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿಯೇ ಗಂಭೀರವಾಗಿತ್ತು. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಿದಾಗಿಯೂ ಆರೋಗ್ಯದಲ್ಲಿ ಸುಧಾರಣೆಯಾಗದೇ ಸಾವನ್ನಪ್ಪಿದ್ದಾರೆ ಎಂದು ವಿಮ್ಸ್ ನ ಆಡಳಿತ ಮಂಡಳಿ ಮತ್ತು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದೆ, ಇದೇ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡಿದೆ ಎಂದರು.
ವರದಿ ಆಧರಿಸಿ ಕಠಿಣ ಕ್ರಮ
ವಿಮ್ಸ್‌ನಲ್ಲಿ ನಡೆದ ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ತನಿಖಾ ಸಮಿತಿಯೊಂದನ್ನು ರಚಿಸಿದ್ದು,ಸದರಿ ಸಮಿತಿ ಈಗಾಗಲೇ ಒಂದು ಬಾರಿ ಭೇಟಿ ನೀಡಿ ಪರಿಶೀಲಿಸಿದೆ. ಜೆಸ್ಕಾಂ ಎಂಜಿನಿಯರ್ ಒಬ್ಬರ ಅವಶ್ಯವಿದ್ದು, ಸಮಿತಿಯಲ್ಲಿ ಅವಕಾಶ ನೀಡುವಂತೆ ಸಮಿತಿಯು ಕೋರಿದ್ದು, ಜೆಸ್ಕಾಂ ಎಂಜಿನಿಯರ್ ಒಬ್ಬರನ್ನು ಒದಗಿಸಲಾಗುವುದು. ಸಮಿತಿಯು ಶೀಘ್ರ ವರದಿ ಸಲ್ಲಿಸಲಿದೆ. ವರದಿಯನ್ನು ಬಹಿರಂಗ ಪಡಿಸಲಾಗುತ್ತದೆ. ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವಿಮ್ಸ್ ನಲ್ಲಿ ಉತ್ಕೃಷ್ಟ ಮಟ್ಟದ ಹಾಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗುವ ನಿಟ್ಟಿನಲ್ಲಿ ವಿಮ್ಸ್ ನಿರ್ದೇಶಕರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ತಜ್ಞ ವೈದ್ಯರ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಖಾಸಗಿ ಕೆಲಸದ ಮೇಲೆ ನಿಗಾ
ಸರಕಾರಿ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ನೀಡುವ ಖಾಸಗಿ ಕ್ಲಿನಿಕ್ ನಡೆಸುವ ವಿಷಯದಲ್ಲಿ ಬಿಗಿಯಾದ ಕಾನೂನು ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು. ಈಗಾಗಲೇ ದಿನಕ್ಕೆ ಮೂರು ಬಾರಿ ಬಯೋಮೆಟ್ರಿಕ್ ಮಾಡಬೇಕೆಂದು ಸೂಚಿಸಲಾಗಿದೆ. ಒಂದು ತಿಂಗಳು ನಂತರ ಮತ್ತಷ್ಟು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನನಗೆ ಅನಾರೋಗ್ಯದಿಂದ ಆರಂಭದಲ್ಲಿ ಸದನಕ್ಕೆ ಹೋಗಿರಲಿಲ್ಲ, ನನ್ನ ಬದಲಾಗಿ ಶ್ರೀರಾಮುಲು ಅವರು ಸದನದಕ್ಕೆ ಇಲ್ಲಿನ ವೈದ್ಯರು ನೀಡಿದ ವರದಿಯನ್ನು ಆಧರಿಸಿ ಮಾಹಿತಿ ನೀಡಿದ್ದರು ಎಂದರು.
ಎಸ್ಪಿಗೆ ಸೂಚನೆ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಹೊರಗಿನ ವ್ಯಕ್ತಿಗಳು ಮತ್ತು ವಿಮ್ಸ್ನಲ್ಲಿ ಇಂತಹ ಘಟನೆಗೆ ಕಾರಣವಾದರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಅವರಿ ಸೂಚನೆ ನೀಡಿದ್ದೇನೆ, ನಿರ್ದೇಶಕರು ಇಂತಹ ವಿಚಾರ ಇದ್ದರೆ ತನಿಖಾಧಿಕಾರಿಗಳ ಮೇಲೆ ತಿಳಿಸಲಿದೆ ಎಂದು ತಿಳಿಸಿದರು.
ವಿಮ್ಸ್ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಮ್ಸ್ ನಿರ್ದೇಶಕರಿಗೆ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನೀಡಿದರು.
ಭೇಟಿ, ಪರಿಶೀಲನೆ: ವಿಮ್ಸ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಭಾನುವಾರ ವಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿರುವ ಸ್ಥಳ, ವಿದ್ಯುತ್ ಪೂರೈಕೆಯಾಗುವ ಜನರೇಟರ್, ಎಂಐಸಿಯುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಪಡೆದುಕೊಂಡರು.
ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಡಿಸಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಡಾ. ಸುಜಾತಾ, ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ಅವರು ಸಾಥ್ ನೀಡಿದರು.
ನಿರ್ದೇಶಕರ ಆಯ್ಕೆಯ ಬಗ್ಗೆ ಹೇಳೋದೇನು?
ನಿರ್ದೇಶಕರ ಆಯ್ಕೆಯು ನನ್ನ ವೈಯಕ್ತಿಕವಲ್ಲ, ಮಾರ್ಗಸೂಚಿಗಳ ಅನ್ವಯವೇ, ನೇಮಕಾತಿ ಸಮಿತಿಯು ಹಲವು ಅಂಶಗಳ ಆಧಾರದ ಮೇಲೆ ವಿಮ್ಸ್ ಗೆ ನಿರ್ದೇಶಕರನ್ನು ಆಯ್ಕೆ ಮಾಡಿದೆ ಎಂದು ಸಚಿವ ಸುಧಾಕರ್ ಅವರು ಹೇಳುವ ಮೂಲಕ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ | Vims Bellary | ರೋಗಿಗಳ ಸಾವು; ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಶ್ರೀರಾಮುಲು