Site icon Vistara News

ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ, ಫೋಟೊ ನಿಷೇಧದ ವಿವಾದಾತ್ಮಕ ಆದೇಶ ವಾಪಸ್

government office

ಬೆಂಗಳೂರು: ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೊ, ಫೋಟೊ ತೆಗೆಯಬಾರದು ಎಂಬ ವಿವಾದಾತ್ಮಕ ಆದೇಶವನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ಹಿಂತೆಗೆದುಕೊಂಡಿದೆ.

ಜುಲೈ ೧೫ರ ತಡರಾತ್ರಿಯಲ್ಲಿ ತಕ್ಷಣದಿಂದ ಅನ್ವಯಿಸುವಂತೆ ವಿವಾದಾತ್ಮಕ ಆದೇಶವನ್ನು ವಾಪಸ್‌ ಪಡೆಯಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ವಿವಾದ ಸೃಷ್ಟಿಸಿದ್ದ ಆದೇಶ

” ಎಲ್ಲ ಜಿಲ್ಲೆಗಳು, ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅನಧಿಕೃತವಾಗಿ ವಿಡಿಯೊ, ಫೋಟೊ ತೆಗೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಾರೆ. ಇದನ್ನು ನಿಷೇಧಿಸಬೇಕುʼʼ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ಸರ್ಕಾರ, ಈ ವಿವಾದಾತ್ಮಕ ಆದೇಶವನ್ನು ಹೊರಡಿಸಿತ್ತು.

” ಕೆಲಸಗಳು ಹಾಗೂ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಸರ್ಕಾರಿ ಕಚೇರಿಗೆ ಆಗಮಿಸುವುದು ಸಾಮಾನ್ಯ. ಈ ರೀತಿ ಕಚೇರಿಗೆ ಆಗಮಿಸುವ ವ್ಯಕ್ತಿಗಳು ಕಚೇರಿ ವೇಳೆಯಲ್ಲಿ ಕಚೇರಿ ಹಾಗೂ ಸಿಬ್ಬಂದಿಯ ಫೋಟೊ, ವಿಡಿಯೋ ಮಾಡುತ್ತಿದ್ದಾರೆ. ಇಂತಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ದುರ್ಬಳಕೆ ಮಾಡಿಕೊಳ್ಳುವುದರ ಜತೆಗೆ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟುಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಮುಖ್ಯವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಖಾಸಗಿ ವ್ಯಕ್ತಿಗಳು ಫೋಟೊ, ವಿಡಿಯೊ ಮಾಡದಂತೆ ನಿಷೇಧಿಸುವ ಅಥವಾ ನಿರ್ಬಂಧಿಸುವ ನಿರ್ಧಾರವನ್ನು ಮಾಡಬೇಕುʼʼ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರವನ್ನು ಮನವಿ ಮಾಡಿತ್ತು.

ಸಾರ್ವಜನಿಕರ ವ್ಯಾಪಕ ವಿರೋಧ

ಈ ಆದೇಶಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆಯ ಅವಶ್ಯಕತೆ ಇರುವಾಗ ಫೋಟೊ, ವಿಡಿಯೊ ಚಿತ್ರೀಕರಣಕ್ಕೆ ನಿಷೇಧಿಸಿದರೆ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಸಾರ್ವಜನಿಕರ ಹಕ್ಕನ್ನು ಕಸಿದಂತಾಗಿದೆ. ಸರ್ಕಾರಿ ಇಲಾಖೆಗಳಲ್ಲಿನ ಅಕ್ರಮಗಳಿಗೆ ಸಲೀಸಾಗಲಿದೆ ಎಂದು ಜಾಲತಾಣಗಳಲ್ಲಿ ಕೂಡ ವ್ಯಾಪಕವಾದ ಅಸಮಾಧಾನ ವ್ಯಕ್ತವಾಗಿತ್ತು. ಈ ಆದೇಶದಿಂದ ಮಾಧ್ಯಮಗಳ ಹಕ್ಕಿಗೂ ಉಲ್ಲಂಘನೆಯಾಗಲಿದೆ ಎಂದು ಬಹುತೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪ್ರತಿಪಕ್ಷಗಳೂ ಈ ಆದೇಶವನ್ನು ವಿರೋಧಿಸಿದ್ದವು. ʻಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಿಗಳಿಗೋಸ್ಕರ, ಭ್ರಷ್ಟಾಚಾರಕ್ಕಾಗಿʼ ಎನ್ನುವುದು ಬಿಜೆಪಿಯ 40% ಸರ್ಕಾರದ ಘೋಷಾ ವಾಕ್ಯ. ಹಿಂದೆ ಸದನದ ಕಲಾಪಗಳಿಗೆ ಮಾಧ್ಯಮಗಳ ನಿರ್ಬಂಧ, ಇಂದು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟರಿಗೆ ರಕ್ಷಣೆ. ಸರ್ಕಾರಿ ಕಚೇರಿಗಳಲ್ಲಿ ಕ್ಯಾಮೆರಾ ಚಿತ್ರೀಕರಣ ನಿಷೇಧಿಸುವ ಮೂಲಕ ಭ್ರಷ್ಟರ ಬೆಂಬಲಕ್ಕೆ ನಿಂತಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು.

ಇದನ್ನೂ ಓದಿ:ಸರ್ಕಾರಿ ಕಚೇರಿ ಒಳಗೆ ಫೋಟೊ, ವಿಡಿಯೊ ಮಾಡುವಂತಿಲ್ಲ: ಕಾಂಗ್ರೆಸ್‌, ಜೆಡಿಎಸ್‌, KRS ವಿರೋಧ

Exit mobile version