ಬೆಳಗಾವಿ: ದೇಶದಲ್ಲಿ ಮೊದಲು ಬ್ಯಾನ್ ಮಾಡಬೇಕಾಗಿರುವುದು ಕಾಂಗ್ರೆಸ್ ಪಕ್ಷವನ್ನು ಎಂದಿದ್ದಾರೆ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್. ಪಿಎಫ್‌ಐ ಮಾದರಿಯಲ್ಲೇ ಆರೆಸ್ಸೆಸ್‌ನ್ನು ನಿಷೇಧಿಸಬೇಕು ಎಂಬ ಕಾಂಗ್ರೆಸ್ ನಾಯಕರ ಮಾತಿಗೆ ತಿರುಗೇಟು ನೀಡಿದ ಅವರು ಕಾಂಗ್ರೆಸ್ಸನ್ನು ಬರ್ಖಾಸ್ತು ಮಾಡಬೇಕು ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದನ್ನೂ ನೆನಪಿಸಿಕೊಂಡಿದ್ದಾರೆ. ಜತೆಗೆ ಭಯೋತ್ಪಾದಕ ಸಂಘಟನೆಗಳಿಗೂ ಕಾಂಗ್ರೆಸ್ಸೇ ಅದೇ ಬೆಂಬಲ ನೀಡುತ್ತಿರುವುದು ಎಂದಿದ್ದಾರೆ.
ʻʻದೇಶದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐನಂಥ ಸಂಘಟನೆಗಳಿಗೆ ಶಕ್ತಿ ತುಂಬಿದ್ದೇ ಕಾಂಗ್ರೆಸ್. ಆಂತರಿಕ ಭಯೋತ್ಪಾದನೆಯಂಥ ಚಟುವಟಿಕೆ ನಡೆಸಲು ಧೈರ್ಯ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆʼʼ ಎಂದು ಹೇಳಿದ ಕಟೀಲ್ ಅವರು, ʻʻಕಾಂಗ್ರೆಸ್ ಮುಂದೆ ದೇಶವನ್ನು ಹಾಳು ಮಾಡಲಿದೆ ಎಂದು ಗೊತ್ತಿದ್ದೇ ಮಹಾತ್ಮಾ ಗಾಂಧಿ ಅವರು ಅದನ್ನು ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು ಅನಿಸುತ್ತದೆ. ಆದರೆ, ಮಹಾತ್ಮಾ ಗಾಂಧಿಯೇ ಹೇಳಿದ್ದರೂ ಕಾಂಗ್ರೆಸ್‌ನವರು ಕೇಳಿಲ್ಲʼʼ ಎಂದರು.
ʻʻಕಾಂಗ್ರೆಸ್ ಕಾಲಘಟ್ಟದಲ್ಲಿ ಎಷ್ಟು ಪಿಎಫ್‌ಐ ಕಾರ್ಯಕರ್ತರನ್ನು ರಕ್ಷಣೆ ಮಾಡಿದ್ದಾರೆ. ಹಂತಕರನ್ನು ರಕ್ಷಣೆ ಮಾಡಿದ್ದಾರೆ ಎನ್ನುವುದನ್ನು ಸಿದ್ದರಾಮಣ್ಣ ಒಮ್ಮೆ ಅಧ್ಯಯನ ಮಾಡಲಿ. ಗೋ ಹಂತಕರನ್ನ ರಕ್ಷಣೆ ಮಾಡಿರುವ ಬಗ್ಗೆ ಅಧ್ಯಯನ ಮಾಡಲಿ. ಆಗ ಅವರೇ ಹೇಳ್ತಾರೆ ಕಾಂಗ್ರೆಸ್ ಅನ್ನೇ ನಿಷೇಧ ಮಾಡಬೇಕು ಎಂದುʼʼ – ಹೀಗೆಂದು ಕಾಲೆಳೆದರು ನಳಿನ್ ಕುಮಾರ್ ಕಟೀಲ್.
ಗುಜರಾತ್ ಜತೆ ಚುನಾವಣೆ ಇಲ್ಲ
ಗುಜರಾತ್ ಜೊತೆಗೆ ಕರ್ನಾಟಕದಲ್ಲೂ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್ ಕಟೀಲ್, ʻʻಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವುದಿಲ್ಲ. ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ. ಚುನಾವಣೆಗೆ ಸಂಬಂಧಿಸಿ ನಮಗೆ ಯಾವುದೇ ಧಾವಂತ ಇಲ್ಲ. ಸಿಎಂ ಆಗುವ ಧಾವಂತ ಇರುವುದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ಗೆ. ನಮ್ಮ ಪಕ್ಷದಲ್ಲಿ ಅಂತಹ ಧಾವಂತಗಳು ಇಲ್ಲʼʼ ಎಂದು ಹೇಳಿದರು.
ಬೈದು ಬೈದು ಸತೀಶ್ ಹೆಸರೇ ಬರ್ತಿದೆ!
ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿರಾ ಎಂದು ಕೇಳಿದಾಗ, ನಾವು ಎಲ್ಲರನ್ನೂ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಜಿಲ್ಲೆಯಲ್ಲಿ ೧೮ ಸೀಟುಗಳನ್ನು ಗೆಲ್ಲುತ್ತೇವೆ ಎಂದರು.
ಹೀಗೆ ಹೇಳುವಾಗ ಮಾತಿನ ಭರದಲ್ಲಿ ʻಇದು ನಮ್ಮ, ಸತೀಶ್ ಜಾರಕಿಹೊಳಿ ಗುರಿʼ ಎಂದ ಹೇಳಿದರು ನಳಿನ್‌ಕುಮಾರ್. ಸಾವರಿಸಿಕೊಂಡ ಅವರು, ʻʻಸತೀಶ್ ಜಾರಕಿಹೊಳಿಗೆ ಬೈದು ಬೈದು ಅವರ ಹೆಸರೇ ಬಂತುʼ ಎಂದು ಸರಿ ಮಾಡಿಕೊಂಡರು.
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನು ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿದ್ದಾರೆ ಎಂದರು ಕಟೀಲ್. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ʻʻರಮೇಶ್ ಜಾರಕಿಹೊಳಿ ಖಂಡಿತವಾಗಿಯೂ ಮಂತ್ರಿ ಆಗ್ತಾರೆ. ಯಾವಾಗ ಆಗ್ತಾರೆ ಅನ್ನೋದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದುʼʼ ಎಂದರು.
ಹಾಲಿ ಶಾಸಕರಿಗೇ ಟಿಕೆಟ್ ಎಂದ ನಳಿನ್
ʻʻಬಿಜೆಪಿಯ ಹಾಲಿ ಶಾಸಕರ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದು ನಿಜ. ಹಾಗಂತ ಹಾಲಿ ಶಾಸಕರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್ ಕೊಡುವ ಪ್ರಶ್ನೆಯಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿʼʼ ಎಂದರು ನಳಿನ್.
ಡಿಕೆಶಿ ಸರಿಯಾಗಿದ್ದರೆ ಭಯಪಡಬೇಕಾಗಿಲ್ಲ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲೆ ಸಿಬಿಐ ದಾಳಿ ನಡೆದಿರುವ ಬಗ್ಗೆ ಮಾತನಾಡಿದ ನಳಿನ್, ʻʻಸಿಬಿಐ, ಐಟಿ ಎಲ್ಲರ ತನಿಖೆಯನ್ನೂ ಮಾಡಲಿದೆ. ಇವರು ಸರಿಯಾಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ.ಇವರು ಕದ್ದಿದ್ರೆ ಭಯಪಡಬೇಕು, ಕದ್ದಿಲ್ಲ ಅಂದ್ರೆ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿ ಹೋಗಿ ಉತ್ತರ ಕೊಡಬೇಕುʼʼ ಎಂದರು.
ʻʻಕಾಂಗ್ರೆಸ್ ಅವಧಿಯಲ್ಲಿ ಎಲ್ಲರ ಮೇಲೂ ತನಿಖೆ ಆಗಿದೆ, ಹಾಗಂತ ಎಲ್ಲರೂ ಹೆದರಿದ್ರಾ? ನರೇಂದ್ರ ಮೋದಿ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ಮಾಡಿದ್ರು. ಅಮಿಶ್ ಶಾ ಅವರನ್ನು ಜೈಲಿಗೇ ಹಾಕಿದ್ದರು. ನಾವು ಮುಷ್ಕರವೂ ಮಾಡಿಲ್ಲ. ಬೀದಿ ಹೋರಾಟವೂ ಮಾಡಿಲ್ಲʼʼ ಎಂದು ನೆನಪಿಸಿದರು.
ಇದನ್ನೂ ಓದಿ| ದ್ದರಾಮಯ್ಯ ನರಹಂತಕ ಸಿಎಂ ಎಂದು ಜರಿದ ನಳಿನ್ ಕುಮಾರ್ ಕಟೀಲ್