Site icon Vistara News

Banavasi Kadambotsava: ಬನವಾಸಿಯ ಕದಂಬೋತ್ಸವಕ್ಕೆ ದಿನಾಂಕ ನಿಗದಿಯಾದರೂ ಇನ್ನೂ ಘೋಷಣೆಯಾಗದ ಪಂಪ ಪ್ರಶಸ್ತಿ

Banavasi Kadambotsavam Pampa Award

#image_title

ಭಾಸ್ಕರ್ ಆರ್. ಗೆಂಡ್ಲ ವಿಸ್ತಾರ ನ್ಯೂಸ್ ಶಿರಸಿ

ಶಿರಸಿ (ಬನವಾಸಿ): ರಾಜ್ಯದ ಪ್ರತಿಷ್ಠಿತ ಉತ್ಸವಗಳ ಪೈಕಿ ಒಂದಾದ ಬನವಾಸಿಯ ಕದಂಬೋತ್ಸವಕ್ಕೆ (Banavasi Kadambotsava) ದಿನಾಂಕ ನಿಗದಿಯಾದರೂ, ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನೀಡುವ ಪಂಪ ಪ್ರಶಸ್ತಿ ಘೋಷಣೆ ಮಾತ್ರ ಇನ್ನೂ ಆಗಿಲ್ಲ. 

ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕಳೆದ ಮೂರು ವರ್ಷಗಳಿಂದ ಕದಂಬೋತ್ಸವ ನಡೆದಿಲ್ಲ. ಈ ಬಾರಿ ಫೆ. ೨೫ ಹಾಗೂ ೨೬ರಂದು ಉತ್ಸವ ನಡೆಯಲಿದೆ. ಕನ್ನಡ ಭಾಷೆಯ ಬೆಳವಣಿಗೆ, ಕನ್ನಡ ಸಾಹಿತ್ಯದಲ್ಲಿ ಮೇರು ಸಾಧನೆ ಮಾಡಿದ ಸಾಹಿತಿಗೆ ಆದಿಕವಿ ಪಂಪನ ನೆನಪಿನಲ್ಲಿ ಪಂಪ ಪ್ರಶಸ್ತಿ ನೀಡುವ ಸಂಪ್ರದಾಯ 1987ರಲ್ಲಿ ಆರಂಭಗೊಂಡಿತು. ಮೊದಲು 1 ಲಕ್ಷ ರೂ. ಇದ್ದ ಪ್ರಶಸ್ತಿಯ ಮೊತ್ತ 2008ರಿಂದ 3 ಲಕ್ಷ ರೂ.ಗೆ ಹೆಚ್ಚಳವಾಗಿದೆ. ಪಂಪ ಪ್ರಶಸ್ತಿಯು ಕನ್ನಡದ ಜ್ಞಾನಪೀಠ ಎಂದು ಕರೆಯಿಸಿಕೊಳ್ಳುವಷ್ಟು ಎತ್ತರದ ಸ್ಥಾನದಲ್ಲಿದೆ. ಪ್ರಥಮ ಪ್ರಶಸ್ತಿಗೆ ರಾಷ್ಟ್ರಕವಿ ಕುವೆಂಪು ಭಾಜನರಾಗಿದ್ದರು. ಸರ್ಕಾರವು ವಾರ್ಷಿಕವಾಗಿ ನೀಡುವ ಈ ಪ್ರಶಸ್ತಿಗೆ ಪ್ರತ್ಯೇಕ ಆಯ್ಕೆ ಸಮಿತಿಯನ್ನು ರಚನೆ ಮಾಡಿ ಸಾಹಿತಿಯನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಕದಂಬೋತ್ಸವ ಸಮೀಪಿಸುತ್ತಿದ್ದರೂ ಇದೇ ವೇದಿಕೆಯಲ್ಲಿ ಪ್ರದಾನ ಮಾಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿಲ್ಲ.

ಮೂರು ವರ್ಷಗಳ ಪಂಪ ಪ್ರಶಸ್ತಿ ಬಾಕಿ

ಪ್ರಸಕ್ತ ಸಾಲಿನ ಕದಂಬೋತ್ಸವಕ್ಕೆ ಇನ್ನು ೧೭ ದಿನಗಳು ಬಾಕಿ ಉಳಿದಿವೆ. ಆದರೆ 2020, 2021 ಹಾಗೂ 2022ನೇ ಸಾಲಿನ ಪಂಪ ಪ್ರಶಸ್ತಿ ಘೋಷಣೆ ಇನ್ನೂ ಆಗಿಲ್ಲ. ಪಂಪ ಪ್ರಶಸ್ತಿ ಪ್ರದಾನವೇ ಕದಂಬೋತ್ಸವದ ಪ್ರಮುಖ ಘಟ್ಟವಾಗಿದೆ. ಪಂಪ ಪ್ರಶಸ್ತಿ ಪ್ರದಾನ ಇಲ್ಲದಿದ್ದರೆ ಉತ್ಸವಕ್ಕೆ ಮಹತ್ವ ಬರಲಾರದು. ಪ್ರಶಸ್ತಿ ಘೋಷಣೆಯ ಹೊಣೆ ಹೊತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶೀಘ್ರ ಎಚ್ಚೆತ್ತುಕೊಳ್ಳಬೇಕಿದೆ. 

ಕಗ್ಗಂಟಾಗಿದ್ದ ಕದಂಬೋತ್ಸವ ಆಚರಣೆ

ಕಳೆದ ಮೂರು ವರ್ಷಗಳಲ್ಲಿ ಕೊರೊನಾ ಮಹಾಮಾರಿಯಿಂದ ಕದಂಬೋತ್ಸವ ನಡೆಸಲು ತಡೆ ಹಿಡಿಯಲಾಗಿತ್ತು. ಕಳೆದ ವರ್ಷ ಡಿಸೆಂಬರ್ ೧೮ರಂದೇ ಕದಂಬೋತ್ಸವ ಆಗಬೇಕಿತ್ತು. ಆದರೆ ಈ ವಿಚಾರ ಕಗ್ಗಂಟಾಗಿಯೇ ಉಳಿದಿತ್ತು. ಶಿರಸಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವತಃ ತಾವೇ ಕದಂಬೋತ್ಸವ ನಡೆಸುವ ವಿಚಾರ ಪ್ರಸ್ತಾಪ ಮಾಡಿದ್ದರು. ಇದೀಗ ಕದಂಬೋತ್ಸವ ಫೆ. ೨೫ ಹಾಗೂ ೨೬ಕ್ಕೆ ನಿಗದಿಯಾಗಿದೆ.

ಇದನ್ನೂ ಓದಿ: ವಿಸ್ತಾರ Explainer: Turkey Earthquake: ಯಾಕಿಷ್ಟು ಭಯಾನಕ? ನಮ್ಮಲ್ಲೂ ಇಂಥ ಭೂಕಂಪ ಆಗಬಹುದೇ?

ಪ್ರಶಸ್ತಿಗೆ ಮೀನಾಮೇಷ

ಮೊದಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಪ್ರಶಸ್ತಿ ಪ್ರದಾನ ಮಾಡುತ್ತಿತ್ತು. ಪಂಪ ನೆಚ್ಚಿದ ನೆಲ ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿ ಪ್ರದಾನ ಜರುಗಬೇಕೆಂಬ ಆಶಯದಿಂದ 1995ರಿಂದ ಕದಂಬೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಕದಂಬೋತ್ಸವದ ಘನತೆಯೂ ಹೆಚ್ಚಿದೆ. 2013ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಿ ಕದಂಬೋತ್ಸವ ವೇದಿಕೆಯಲ್ಲಿ ನೀಡುವುದಾಗಿ ಕೊನೆಯ ಕ್ಷಣದವರೆಗೂ ಭರವಸೆ ನೀಡಿದ್ದ ಸರ್ಕಾರ, ಜನರ ನಿರೀಕ್ಷೆಯನ್ನು ಹುಸಿಯಾಗಿಸಿತು. ಹೀಗಾಗಿ ಪಂಪ ಪ್ರಶಸ್ತಿ ಪ್ರದಾನ ಇಲ್ಲದೆಯೇ ಕದಂಬೋತ್ಸವ ಜರುಗಿತು. ಎರಡು ದಶಕಗಳಲ್ಲಿ ಐವರು ಸಾಹಿತಿಗಳು ಕದಂಬೋತ್ಸವ ವೇದಿಕೆಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಲು ಆಗಮಿಸಲಿಲ್ಲ. ಪಂಪ ಪ್ರಶಸ್ತಿ ಇಲ್ಲದೇ ಕದಂಬೋತ್ಸವ ಇಲ್ಲ ಎನ್ನುವಷ್ಟು ಬೆಸೆದುಕೊಂಡಿದ್ದ ಸ್ಮರಣೀಯ ಕ್ಷಣಗಳು ಒಂದಿಲ್ಲೊಂದು ಕಾರಣದಿಂದ ಇತ್ತೀಚೆಗೆ ಬೇರ್ಪಡುತ್ತಿವೆ ಎಂಬುದು ಬನವಾಸಿಗರ ಅಭಿಪ್ರಾಯವಾಗಿದೆ.

“ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ವೇದಿಕೆಯಲ್ಲೇ ಪಂಪ ಪ್ರಶಸ್ತಿ ವಿತರಿಸಲು ಕ್ರಮ ವಹಿಸಲಾಗುತ್ತಿದೆ. 2020 ರಿಂದ 2022 ರವರೆಗಿನ ಪಂಪ ಪ್ರಶಸ್ತಿಯನ್ನೂ ನೀಡಲಾಗುವುದು. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರವೇ ಪಂಪ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗುವುದು” ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ

ಇದನ್ನೂ ಓದಿ: Brahmin CM: ಪ್ರಲ್ಹಾದ ಜೋಶಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ: ಜಾತಿ ಆಧಾರದಲ್ಲಿ ಟೀಕೆ ಸರಿಯಲ್ಲ ಎಂದ ಬ್ರಾಹ್ಮಣ ಮಹಾಸಭಾ

ಈವರೆಗಿನ ಪಂಪ ಪ್ರಶಸ್ತಿ ಪುರಸ್ಕೃತರು  

ಕುವೆಂಪು, ತೀ.ನಂ.ಶ್ರೀಕಂಠಯ್ಯ, ಶಿವರಾಮ ಕಾರಂತ, ಸಂ.ಶಿ.ಭೂಸನೂರಮಠ, ಪು.ತಿ.ನ., ಎ.ಎನ್.ಮೂರ್ತಿರಾವ್, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣ ಭಟ್ಟ, ಕೆ.ಎಸ್.ನರಸಿಂಹಸ್ವಾಮಿ, ಎಂ.ಎಂ.ಕಲಬುರ್ಗಿ, ಜಿ.ಎಸ್.ಶಿವರುದ್ರಪ್ಪ, ದೇಜಗೌ, ಚನ್ನವೀರ ಕಣವಿ, ಡಾ. ಎಲ್.ಬಸವರಾಜು, ಪೂರ್ಣಚಂದ್ರ ತೇಜಸ್ವಿ, ಚಿದಾನಂದಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಹೆಚ್.ಎಲ್.ನಾಗೇಗೌಡ, ಎಸ್.ಎಲ್.ಭೈರಪ್ಪ, ಜಿ.ಎಸ್.ಆಮೂರ್, ಯಶವಂತ ಚಿತ್ತಾಲ, ಟಿ.ವಿ.ವೆಂಕಟಾಚಲ ಶಾಸ್ತ್ರಿ, ಚಂದ್ರಶೇಖರ ಪಾಟೀಲ, ಜಿ.ಹೆಚ್.ನಾಯಕ, ಬರಗೂರು ರಾಮಚಂದ್ರಪ್ಪ, ಡಾ.ಡಿ.ಎನ್.ಶಂಕರ ಭಟ್ಟ, ಕಯ್ಯಾರ ಕಿಞ್ಞಣ್ಣ ರೈ, ಪ್ರೊ.ಜಿ. ವೆಂಕಟಸುಬ್ಬಯ್ಯ, ಬಿ.ಎ.ಸನದಿ, ಡಾ.ಹಂ.ಪ. ನಾಗರಾಜಯ್ಯ, ಎಸ್.ನಿಸಾರ್ ಅಹಮದ್, ಷ.ಶೆಟ್ಟರ್, ಸಿದ್ದಲಿಂಗಯ್ಯ ಅವರಿಗೆ ಇದುವರೆಗೆ ಪಂಪ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: Parliament Budget Session: ಅದಾನಿ ವಿಚಾರಕ್ಕೆ ಮತ್ತೆ ಕಲಾಪ ಬಲಿ, ಪಟ್ಟು ಸಡಿಲಿಸದ ಪ್ರತಿಪಕ್ಷಗಳು

Exit mobile version