ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park) ಈಗ ಮತ್ತಷ್ಟು ಕಳೆಗಟ್ಟಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೇಟಿ ಬಳಿಕ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ವಾರಾಂತ್ಯವಾದರೆ ಸಾಕು ಬಂಡಿಪುರ ಸಫಾರಿಗೆ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
2023ರ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರದಲ್ಲಿ ಸಫಾರಿ ನಡೆಸಿದ್ದರು. ಪ್ರಾಜೆಕ್ಟ್ ಟೈಗರ್‌ನ (Project Tiger) 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಗಾಗಿ ಅವರು ಆಗಮಿಸಿದ್ದರು. ಈ ವೇಳೆ ಮೋದಿ ಸುಮಾರು 2 ಗಂಟೆ ಕಾಲ ಬಂಡೀಪುರ ಉದ್ಯಾನವನವನ್ನು ಸುತ್ತಿದ್ದರು.
ಬಂಡೀಪುರ ಅಭಯಾರಣ್ಯದ ಸೊಬಗಿನ ಜತೆಗೆ ಕಾಲ ಕಳೆದಿದ್ದ ನರೇಂದ್ರ ಮೋದಿ ಅವರು ವನ್ಯಜೀವಿ, ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಿ ಖುಷಿಪಟ್ಟಿದ್ದರು. ಸುದೀರ್ಘ 2 ಗಂಟೆ 15 ನಿಮಿಷ ಟೈಗರ್ ಸಫಾರಿ ನಡೆಸಿ, ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ಅವುಗಳ ಫೋಟೊ ತೆಗೆದು ಖುಷಿಪಟ್ಟಿದ್ದರು. ಇದಾದ ಬಳಿಕ ಪರಿಸರ ಪ್ರೇಮಿಗಳು, ಪ್ರವಾಸಿ ಪ್ರೇಮಿಗಳಿಗೆ ಇದು ಫೇವರಿಟ್ ತಾಣವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದಲ್ಲದೆ, ಕೇರಳ-ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ
ನಿತ್ಯ 2 ಸಾವಿರ ಜನ ಭೇಟಿ
ಪ್ರತಿ ನಿತ್ಯ ಒಂದೂವರೆಯಿಂದ ಎರಡು ಸಾವಿರ ಜನರ ಭೇಟಿ ನೀಡುತ್ತಿದ್ದು, ಸಫಾರಿಯಿಂದಲೇ ಪ್ರತಿ ದಿನ 7 ರಿಂದ 8 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ಪ್ರವಾಸಿಗರ ಹೆಚ್ಚಳದಿಂದ ಅರಣ್ಯ ಇಲಾಖೆಯ ಆದಾಯದಲ್ಲಿಯೂ ಹೆಚ್ಚಳವಾಗುತ್ತಿದೆ.
ಹೊಸ ವಾಹನಗಳ ಖರೀದಿ
ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು 4 ಹೊಸ ವಾಹನಗಳನ್ನು ಖರೀದಿಸಿದೆ. ಸಫಾರಿಗಾಗಿ ಮತ್ತೆ 2 ಬಸ್, 2 ಜೀಪ್‌ಗಳನ್ನು ಖರೀದಿ ಮಾಡಲಾಗಿದೆ.
ಟಿಕೆಟ್‌ಗಾಗಿ ಪರದಾಟ
ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿರುವುದರಿಂದ ಮೊದಲೇ ಬುಕ್ಕಿಂಗ್ ನಡೆಯುತ್ತಿದ್ದು, ಸೋಲ್ಟ್‌ಔಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆಫ್‌ಲೈನ್ ಟಿಕೆಟ್ ಕಡಿಮೆ ಪ್ರಮಾಣದಲ್ಲಿಟ್ಟಿದ್ದರಿಂದ ಅವುಗಳು ಎಲ್ಲರಿಗೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಟಿಕೆಟ್ ಸಿಗದೇ ಪ್ರವಾಸಿಗರು ನಿರಾಸೆಯಿಂದ ವಾಪಸ್ ಆಗುತ್ತಿರುವ ಸನ್ನಿವೇಶವೂ ಇದೆ.
912.04 ಚದರ ಕಿ.ಮೀ ವಿಸ್ತೀರ್ಣ
ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಮೀಸಲು ಪ್ರದೇಶವು ಭಾರತದ 2ನೇ ಅತಿ ದೊಡ್ಡ ಹುಲಿ ಸಂರಕ್ಷಣಾ ತಾಣವಾಗಿದ್ದು, 912.04 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್ (ವನ್ಯಜೀವಿ ಅಭಯಾರಣ್ಯ), ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಇನ್ನು ಈ ಬಂಡೀಪುರವು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ದಕ್ಷಿಣ ಏಷ್ಯಾದ ಕಾಡಾನೆಗಳ ಅತಿ ದೊಡ್ಡ ಆವಾಸ ಸ್ಥಾನವೂ ಇದಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ.
ಇದನ್ನೂ ಓದಿ: Weather Report: ಭಾನುವಾರ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಗಾಳಿ ವೇಗವೂ ಹೆಚ್ಚಲಿದೆ ಎಂದ ಹವಾಮಾನ ಇಲಾಖೆ
ಇಲ್ಲಿರುವ ವನ್ಯಜೀವಿಗಳು
ಹುಲಿಗಳು, ಚಿರತೆ, ಜಿಂಕೆ, ಕಡವೆಗಳು, ಕಾಡು ನಾಯಿಗಳು, ಕಾಡುಹಂದಿ, ಕರಡಿಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆ ಇತ್ಯಾದಿಗಳು ವನ್ಯಜೀವಿಗಳನ್ನು ಬಂಡಿಪುರದಲ್ಲಿ ಕಾಣಬಹುದಾಗಿದೆ.
ದಿನಕ್ಕೆರಡು ಬಾರಿ ಅರಣ್ಯ ಸಫಾರಿ
ಬಂಡೀಪುರದಲ್ಲಿ ಪ್ರತಿದಿನ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಇಲ್ಲಿ ಎರಡು ರೀತಿಯ ಸಫಾರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಬಸ್ ಹಾಗೂ ಜೀಪ್ ವ್ಯವಸ್ಥೆ ಇದೆ. ಬಸ್‌ನಲ್ಲಿ ಹೆಚ್ಚಿನ ಜನರು ಒಮ್ಮೆಲೆಗೆ ಹೋಗಬಹುದಾಗಿದ್ದು, ಇದು 45 ನಿಮಿಷಗಳಿಂದ 1 ಗಂಟೆಯ ಅವಧಿಯನ್ನು ಹೊಂದಿರುತ್ತದೆ. ಇನ್ನು ಜೀಪ್ ಸಫಾರಿಯಲ್ಲಿ ಸರಿಸುಮಾರು 2 ಗಂಟೆಗಳ ಅವಧಿ ಇರುತ್ತದೆ. ಈ ಎರಡೂ ಸಫಾರಿಗಳು ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆ ನಡುವೆ ಕಾರ್ಯನಿರ್ವಹಿಸುತ್ತವೆ. ಇನ್ನು ನೀವು ಕ್ಯಾಮೆರಾಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಹೆಚ್ಚುವರಿ ಶುಲ್ಕವಿರುತ್ತದೆ.
ಎಷ್ಟು ದೂರ?
ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರು ನಗರವು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ (ಬಂಡೀಪುರದಿಂದ 73 ಕಿ.ಮೀ). ಮೈಸೂರಿನಿಂದ ಬಂಡೀಪುರ ತಲುಪಲು ಬಸ್‌ಗಳು ಅಥವಾ ಟ್ಯಾಕ್ಸಿಗಳು ಸಿಗುತ್ತವೆ.
ವಸತಿ ವ್ಯವಸ್ಥೆಯೂ ಇದೆ
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ರಾಷ್ಟ್ರೀಯ ಉದ್ಯಾನವನದ ಹೊರಗಡೆ ಬಂಡೀಪುರ ಸಫಾರಿ ಲಾಡ್ಜ್ ಅನ್ನು ನಡೆಸುತ್ತಿದೆ. ಕೆಲವು ಖಾಸಗಿ ರೆಸಾರ್ಟ್‌ಗಳು ಲಭ್ಯವಿವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳೂ ಇದ್ದು, ಪ್ರವಾಸಿಗರು ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬಹುದು.
ಯಾವ ಸಮಯ ಹೆಚ್ಚು ಸೂಕ್ತ
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ವರ್ಷದ ಯಾವ ಸಮಯದಲ್ಲಿ ಭೇಟಿ ನೀಡಬಹುದಾದರೂ ಮುಂಗಾರು ನಂತರದ ಅಂದರೆ, ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಭೇಟಿ ನೀಡುವುದು ಉತ್ತಮ ಸಮಯ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?
ರಾತ್ರಿ ಸಂಚಾರ ನಿಷೇಧ
ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಕಾರಣ ರಾತ್ರಿ ವಾಹನಗಳ ಸಂಚಾರದಿಂದ ಅಪಘಾತಗಳು ಸಂಭವಿಸಿ ಕಾಡು ಪ್ರಾಣಿಗಳು ಮೃತಪಡುತ್ತವೆ. ಹೀಗಾಗಿ ರಾತ್ರಿ ಸಂಚಾರವನ್ನು ನಿಷೇಧ ಮಾಡಲಾಗಿದೆ.