ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bangalore Airport) ಕಸ್ಟಮ್ಸ್ ಅಧಿಕಾರಿಗಳು (custom officers) ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಳಉಡುಪಿನೊಳಗೆ ಚಿನ್ನ ಇಟ್ಟುಕೊಂಡು ಮಲೇಶಿಯಾದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂವರು ಬಂದಿದ್ದರು.
ಈ ಖದೀಮರು ಚಿನ್ನ ಕಳ್ಳ ಸಾಗಾಣಿಕೆಗಾಗಿಯೇ ವಿಶೇಷವಾದ ಒಳಉಡುಪು ಅನ್ನು ತಯಾರಿ ಮಾಡಿಸಿದ್ದರು. ಕಸ್ಟಮ್ಸ್ ಅಧಿಕಾರಿಗಳಿಗೆ ತಿಳಿಯದಂತೆ ಅಂಡರ್ ವೇರ್‌ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಸಾಗಾಣಿಕೆಗೆ ಯತ್ನಿಸಿದ್ದರು. ಆದರೆ ಖದೀಮರು ಚಾಪೆ ಕೆಳಗೆ ನುಗ್ಗಿದರೆ ಕಸ್ಟಮ್ಸ್ ಅಧಿಕಾರಿಗಳು ರಂಗೋಳಿ ಕೆಳಗೆ ನುಗ್ಗಿ ಮೂವರನ್ನು ಬಂಧಿಸಿದ್ದಾರೆ.
ಈ ಪ್ರಕರಣಗಳಲ್ಲಿ ಬಂಧಿತರಿಂದ ಪೇಸ್ಟ್ ರೂಪದಲ್ಲಿ ತಂದಿದ್ದ 2.2 ಕೆಜಿಯ ₹ 1.3 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಈ ಮೂವರು ಪ್ರಯಾಣಿಕರು ದುಬೈನಿಂದ ಇಕೆ568 ವಿಮಾನದ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಈಗ ಚಿನ್ನದ ಸಮೇತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕಾಕ್‌ಗೆ ವಿದೇಶಿ ಹಣ ವರ್ಗಾವಣೆ
ಅಕ್ರಮ ಚಿನ್ನ ಮಾತ್ರವಲ್ಲದೆ ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ವಿದೇಶಿ ಹಣ ವಶವನ್ನು ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟ್ಟಿದ್ದ ಮೂವರು ಪ್ರಯಾಣಿಕರಿಂದ 1,41,12,961 ರೂಪಾಯಿ ವಶಕ್ಕೆ ಪಡೆಯಲಾಗಿದೆ. ಯುಎಸ್‌ಡಿ, ಯುರೋ, ಸ್ಪಿಸ್, ಫ್ರಾನ್ಸ್, ಮತ್ತು ಥಾಯ್ ದೇಶದ ಕರೆನ್ಸಿ ಇದಾಗಿದ್ದು, ಬ್ಯಾಗ್‌ನಲ್ಲಿಟ್ಟುಕೊಂಡು ವಿದೇಶಕ್ಕೆ ತೆರಳಲು ಬಂದಾಗ ಸೆಕ್ಯುರಿಟಿ ಚೆಕ್ಕಿಂಗ್ ವೇಳೆ ಕಳ್ಳ ಸಾಗಾಟದ ವಿಚಾರ ತಿಳಿದು ಬಂದಿದೆ. ಮೂವರು ಆರೋಪಿಗಳನ್ನು ಹಣದ ಸಮೇತ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಟೋರಿಯಸ್ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ
ಬೆಂಗಳೂರಿನಲ್ಲಿ ನಟೋರಿಯಸ್ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನವಾಗಿದೆ. ವಿವಿ ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ನೈಜೀರಿಯಾ ಡ್ರಗ್ ಪೆಡ್ಲರ್‌ಗಳಾದ ಲಾರೆನ್ಸ್ ಹಾಗೂ ಚುಕ್ವೂನೇಜಿಮ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ 1.85 ಕೆ.ಜಿ ವೈಟ್ ಎಂಡಿಎಂಎ (White MDMA), 1.15 ಕೆ.ಜಿ ಬ್ರೌನ್ ಎಂಡಿಎಂಎ (Brown MDMA), 310 ಗ್ರಾಂ ಕೊಕೇನ್ (cocaine) ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಈ ಡ್ರಗ್ ಪೆಡ್ಲರ್‌ಗಳು ಕೇವಲ ಉದ್ಯಮಿ ಹಾಗೂ ಸಾಫ್ಟ್‌ವೇರ್ ಇಂಜನಿಯರ್‌ಗಳನ್ನೇ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಇನ್ನು ಇದೇ ಮೊದಲ ಬಾರಿಗೆ Brown MDMA ಡ್ರಗ್‌ನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಪೊಲೀಸರ ಕಣ್ತಪ್ಪಿಸಿ ನಗರದಲ್ಲಿ ಸುಮಾರು ಐದು ವರ್ಷಗಳಿಂದ ಡ್ರಗ್ಸ್ ಮಾರಾಟ ಮಾಡಿದ್ದರು. ಸದ್ಯ ಇಬ್ಬರು ಪೆಡ್ಲರ್‌ಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಗಾಂಜಾ ಸಾಗಾಟ ಮಾಡುತ್ತಿದ್ದವರ ಬಂಧನ
ಗಾಂಜಾ ಸಾಗಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗನ್ನು ಬೀದರ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತೆಲಂಗಾಣ ಹಾಗೂ ಬೀದರ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬೊಲೆರೊ ವಾಹನದ ಮೂಲಕ ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದಾಗ ಎಕಂಬಾ ಚೇಕ್ ಪೋಸ್ಟ್‌ನಲ್ಲಿ ಖಚಿತ ಮಾಹಿತಿ ಮೇರೆಗೆ ಔರಾದ್ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ ಒಂದೂವರೆ ಕೋಟಿ ರೂಪಾಯಿ ಮೌಲ್ಯದ 150 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಕಾರ್ಯಚರಣೆ ನಡೆಸಿದ ಔರಾದ್ ಪೊಲೀಸರಿಗೆ ಬೀದರ್ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ಚರಂಡಿಯೊಳಗೆ ಗೋವಾ ಸಾರಾಯಿ ಬಚ್ಚಿಟ್ಟ ಖದೀಮರು
ಚರಂಡಿಯ ಕೆಳಗೆ ಅಕ್ರಮವಾಗಿ ಬಚ್ಚಿಟ್ಟಿದ್ದ ಸುಮಾರು 2.4 ಲಕ್ಷ ಮೌಲ್ಯದ ಸಾರಾಯಿಯನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನ ಹಾರವಾಡ ಗ್ರಾಮದ ಸೀಬರ್ಡ್ ಕಾಲೊನಿಯಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದ್ದು, 345 ಲೀಟರ್ ಗೋವಾ ಸಾರಾಯಿ ಮತ್ತು 80 ಲೀಟರ್ ಗೋವಾ ಫೆನ್ನಿಯನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ 2,42,080 ರೂಪಾಯಿ ಆಗಿದ್ದು, ಪ್ರಕರಣ ಸಂಬಂಧ ಆರೋಪಿ ಯಾರೆಂದು ಪತ್ತೆಯಾಗಿಲ್ಲ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ತಂಡ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಈರಣ್ಣ ಕುರುಬೇಟ್, ಶ್ರೀಶೈಲ್ ಹಡಪ, ಗಿರೀಶ ಅರೆವಾಳೆ, ವಿನಾಯಕ ನಾಯ್ಕ ಸಾಥ್ ನೀಡಿದ್ದಾರೆ. ಅಬಕಾರಿ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Theft Case: ಮಾಲೀಕನ ಎದುರೇ ಸ್ಕೂಟರ್ ಎಗರಿಸಿದ ಖತರ್ನಾಕ್ ಕಳ್ಳ; ಜ್ಯೂಸ್ ಕುಡಿಯಲು ಹೋದಾಗ ಮಾಯ!
ಸೂಕ್ತ ದಾಖಲೆ ಇಲ್ಲದ ಔಷಧ ಹಾಗೂ ಇನ್ಸುಲಿನ್ ಪತ್ತೆ
ಗದಗ ಜಿಲ್ಲೆ ನರಗುಂದದ ಕಲ್ಕೇರಿ ಚೆಕ್ ಪೋಸ್ಟನಲ್ಲಿ ಸೂಕ್ತ ದಾಖಲೆ ಇಲ್ಲದ ಔಷಧ ಹಾಗೂ ಇನ್ಸುಲಿನ್ ಪತ್ತೆ ಆಗಿದೆ. 1.40 ಕೋಟಿ ಮೌಲ್ಯದ ಔಷಧವನ್ನ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಗದಗ ಎಸ್‌ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.