Site icon Vistara News

Bangalore Mysore Expressway: ದಶಪಥದಲ್ಲಿ ಇಂದಿನಿಂದ ಬೈಕ್‌, ರಿಕ್ಷಾ ಮತ್ತಿತರ ವಾಹನ ಸಂಚಾರ ಬಂದ್‌

expressway

ರಾಮನಗರ: ಇಂದಿನಿಂದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore mysore Expressway) ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಪಘಾತ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಕ್ರಮ ಜಾರಿಯಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಅಪಘಾತಗಳ ಹೆದ್ದಾರಿಯಾಗುತ್ತಿದೆ ಎಂಬ ಆರೋಪಗಳ ನಡುವೆ ಅವಘಡಗಳನ್ನು ತಪ್ಪಿಸಲು ಪೊಲೀಸ್‌ ಇಲಾಖೆ (Police Department) ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಹೆದ್ದಾರಿ ಇಲಾಖೆಯೂ (National High way Authority) ಕೆಲವೊಂದು ವಾಹನಗಳಿಗೆ ನಿಷೇಧ (Restriction on vehicle) ಹೇರಿದ್ದು, ಈ ವಾಹನಗಳು ಹೆದ್ದಾರಿ ಪ್ರವೇಶಿಸುವಂತಿಲ್ಲ (Vehicle Ban) ಎಂಬ ಸೂಚನೆಯನ್ನು ನೀಡಿದೆ. ಇಂದಿನಿಂದ (ಆಗಸ್ಟ್‌ 1) ಈ ನಿಯಮ ಜಾರಿಗೆ ಬರಲಿದೆ.

ಯಾವ ವಾಹನಗಳಿಗೆ ನಿರ್ಬಂಧ?

ಅತ್ಯಂತ ವೇಗವಾಗಿ ವಾಹನಗಳು ಸಾಗುವ, ಮಲ್ಟಿ ಆಕ್ಸಿಸ್‌ ಕಂಟ್ರೋಲ್‌ (Multi axis Control) ಇರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಇನ್ನು ಮುಂದೆ ಬೈಕ್‌ ಮಾತ್ರವಲ್ಲ, ಆಟೊ, ಟ್ರ್ಯಾಕ್ಟರ್‌ ಸೇರಿದಂತೆ ಹಲವು ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.

ಬೈಕ್‌, ಸ್ಕೂಟರ್‌ ಮತ್ತು ಇತರೆ ದ್ವಿಚಕ್ರವಾಹನಗಳು
ಆಟೋರಿಕ್ಷಾ ಸೇರಿದಂತೆ ಎಲ್ಲ ತ್ರಿಚಕ್ರವಾಹನಗಳು
ಮೋಟಾರು ಎಂಜಿನ್‌ ಇಲ್ಲದ ವಾಹನಗಳು
ಕೃಷಿ ಬಳಕೆ ಸೇರಿದಂತೆ ಯಾವುದೇ ಟ್ರ್ಯಾಕ್ಟರ್‌ಗಳು
ಮಲ್ಟಿ ಆಕ್ಸೆಲ್‌ ಹೈಡ್ರಾಲಿಕ್‌ ವಾಹನಗಳು
ಕ್ವಾಡ್ರಿ ಚಕ್ರಗಳು

ಇಂದು ಬೆಳಗ್ಗೆ 8 ಗಂಟೆಯಿಂದ ಈ ನಿಷೇಧಿತ ವಾಹನಗಳು ಹೈವೆಗಿಳಿಯುವಂತಿಲ್ಲ. ಎಕ್ಸ್‌ಪ್ರೆಸ್ ವೇಗೆ ಇವು ಎಂಟ್ರಿಯಾದರೆ ದಂಡ ಖಚಿತ. ಕನಿಷ್ಠ 500 ರೂ. ದಂಡ ವಿಧಿಸುವುದಾಗಿ ರಾಮನಗರ ಎಸ್ಪಿ ಎಚ್ಚರಿಕೆ ನೀಡಿದ್ದಾರೆ. ರಾಮನಗರದ 9 ಎಂಟ್ರಿ ಹಾಗೂ ಎಕ್ಸಿಟ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಹೆದ್ದಾರಿ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆ ಅನ್ವಯ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದು ದ್ವಿಚಕ್ರ, ತ್ರಿಚಕ್ರವಾಹನ ಸೇರಿದಂತೆ ಕೆಲವು ವಾಹನಗಳು ಇನ್ನು ಸರ್ವಿಸ್‌ ರಸ್ತೆಯಲ್ಲಿಯೇ ಪ್ರಯಾಣ ಬೆಳೆಸಬೇಕಾಗುತ್ತದೆ.

ಜು.12ರಂದು ಆದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಮಾಡಿದ ದಿನದಿಂದಲೂ ಈ ಸಂಚಾರ ನಿಷೇಧದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಬೈಕ್‌ಗಳಿಗೆ ಪ್ರವೇಶವಿಲ್ಲ, ರಿಕ್ಷಾ ಇಲ್ಲ ಎಂಬೆಲ್ಲ ಸುದ್ದಿಗಳಿದ್ದವು. ಹಾಗಿದ್ದರೂ ಕೆಲವು ಕಡೆ ಈ ವಾಹನಗಳು ಹೆದ್ದಾರಿ ಪ್ರವೇಶ ಮಾಡುತ್ತಿದ್ದವು. ಇದೀಗ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದಕ್ಕಾಗಿ ಹೆದ್ದಾರಿ ಪ್ರಾಧಿಕಾರವೇ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆದ್ದಾರಿ ಪ್ರಾಧಿಕಾರವು ಕಳೆದ ಜು.12ರಂದೇ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ವಾಹನ ಸಂಚಾರಕ್ಕೆ ವೇಗ ಮಿತಿ

ಇದೇ ವೇಳೆ ಹೆದ್ದಾರಿ ಪ್ರಾಧಿಕಾರವು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನ ಸಂಚರಿಸುವ ಗರಿಷ್ಠ ವೇಗಕ್ಕೆ ಮಿತಿ ಹಾಕಿದೆ. ಅಧಿಸೂಚನೆಯ ಪ್ರಕಾರ ವಾಹನಗಳು ಪ್ರತಿ ಗಂಟೆಗೆ 80ರಿಂದ 100 ಕಿಲೋಮೀಟರ್‌ ವೇಗದಲ್ಲಿ ಮಾತ್ರ ಸಂಚರಿಸಬೇಕು. ಪ್ರಾಧಿಕಾರ ವೇಗ ಮಿತಿ ಆದೇಶ ಹೊರಡಿಸುವ ಮುನ್ನವೇ ಹೆದ್ದಾರಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರೇ ಸಂಚಾರ ನಿಯಂತ್ರಣಕ್ಕೆ ವೇಗ ಮಿತಿ ಅಳವಡಿಸಿದ್ದರು ಮತ್ತು ಅತಿ ವೇಗದಲ್ಲಿ ಚಲಾಯಿಸುವ ವಾಹನಗಳಿಗೆ ದಂಡ ವಿಧಿಸಿದ್ದರು.

ಇದನ್ನೂ ಓದಿ: Expressway : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್‌, ಆಟೊ ಸಂಚಾರ ನಿಷೇಧ ಶೀಘ್ರ, ಕಾರಣವೇನು?

Exit mobile version