ಬೆಂಗಳೂರು/ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ (Bangalore–Mysore Expressway) ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರ ಹೆಸರನ್ನು ಇಡುವಂತೆ ಕೇಂದ್ರ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಬರೆದಿದ್ದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು, ಮಣ್ಣಿನ ಮಗನಾದ ಎಚ್.ಡಿ. ದೇವೇಗೌಡ ಅವರ ಸಾಧನೆ ಮತ್ತು ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಯವರು ಸ್ಮರಿಸಬೇಕು. ಕನ್ನಡ ನಾಡಿನ ನೆಲ ಜಲಕ್ಕೆ, ಇಲ್ಲಿಯ ಹಕ್ಕುಗಳಿಗೆ, ನಾಡಿನ ಅಸ್ಮಿತೆಗೆ ದೇವೇಗೌಡರ ಕೊಡುಗೆ ಅಭೂತಪೂರ್ವ ಆಗಿದೆ. ನಾಡಿನ ಜೀವ ನದಿಗಳಾದ ಕಾವೇರಿ ಹೋರಾಟದಿಂದ ಹಿಡಿದು, ಕೃಷ್ಣೆಯವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಹೀಗಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಅವರ ಹೆಸರು ಇಡಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ನಿತಿನ್ ಗಡ್ಕರಿ ಅವರು ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Sumalatha Ambareesh: ಬಿಜೆಪಿ ಸೇರಲು ಸುಮಲತಾ ಮೂರು ಕಂಡೀಷನ್; ಪಕ್ಷ ಸೇರ್ಪಡೆ ಬಹುತೇಕ ಪಕ್ಕಾ?
ರೈತ ಕುಟುಂಬದಲ್ಲಿ ಜನಿಸಿ, ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆಯ ಕನ್ನಡ ಮಣ್ಣಿನ ಮಗ ದೇವೇಗೌಡರ ಹೆಸರು ದಶಪಥ ಹೆದ್ದಾರಿಗೆ ನೀಡುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ವಿಷಯ ಎಂದು ಟಿ.ಎ. ಶರವಣ ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ