ಬೆಂಗಳೂರು: ನಗರದಲ್ಲಿ 24/7 ಹೋಟೆಲ್ (Night life) ತೆರೆಯಲು ಪೊಲೀಸ್ ಇಲಾಖೆ ಅನುಮತಿ ನೀಡದಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ತಯಾರಿ ನಡೆಸುವುದಾಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ರಾತ್ರಿ ಪೂರ್ತಿ ಹೋಟೆಲ್ ತೆರೆಯಲ ಅವಕಾಶ ನೀಡಿ 2021ರಲ್ಲಿ ಸರ್ಕಾರವು ಆದೇಶ ಹೊರಡಿಸಿತ್ತು. ಆದರೆ ಸಾಂಕ್ರಾಮಿಕ ಕಾಯಿಲೆಯಾದ ಕೋವಿಡ್ ಕಾರಣದಿಂದ ಇಡೀ ರಾತ್ರಿ ಹೋಟೆಲ್ ತೆರೆದಿಡಲು ಅನುಮತಿಯನ್ನು ನೀಡಿರಲಿಲ್ಲ. ಈಗ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು, ಇಡೀ ರಾತ್ರಿ ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ಕೋರಿ ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರು ಮನವಿ ಸಲ್ಲಿಸಿದ್ದರು. ಆದರೆ ಪೊಲೀಸ್ ಇಲಾಖೆಯು ಈ ಮನವಿಗೆ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ.
ಪೊಲೀಸ್ ಇಲಾಖೆ ಮನವಿ ನಿರಾಕರಿಸಲು ಕಾರಣವೇನು?
ರಾತ್ರಿಯಿಡಿ ಹೋಟೆಲ್ ತೆರೆದಿಡಲು ಅನುಮತಿಯನ್ನು ನೀಡಿದರೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲು ಅಗತ್ಯ ಸಿಬ್ಬಂದಿ ನಮ್ಮ ಬಳಿ ಇಲ್ಲ ಎಂದು ಪೊಲೀಸ್ ಇಲಾಖೆ ಹೇಳಿದ್ದು, ಈ ಕಾರಣಕ್ಕಾಗಿಯೇ ಹೋಟೆಲ್ ಮಾಲೀಕರ ಮನವಿಗೆ ನಕಾರ ವ್ಯಕ್ತಪಡಿಸಿದೆ. ಬಸ್ಸು, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾತ್ರ 24/7 ಹೋಟೆಲ್‌ಗಳನ್ನು ತೆರೆಯಬಹುದು. ಆದರೆ, ನಗರದಲ್ಲಿ ಇತರ ಹೋಟೆಲ್‌ಗಳು ಇಡೀ ರಾತ್ರಿ ತೆರೆಯುವಂತಿಲ್ಲ ಎಂದು ಪೊಲೀಸ್ ಇಲಾಖೆ ಮುಖ್ಯಮಂತ್ರಿಗಳಿಗೆ ಮೌಖಿಕವಾಗಿ ಮಾಹಿತಿ ನೀಡಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ಆದೇಶಿಸಿದರೂ ಪೊಲೀಸ್ ಇಲಾಖೆ ಒಪ್ಪುತ್ತಿಲ್ಲ ಎಂದು ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ಸು, ರೈಲು, ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ 24 ಗಂಟೆ ಹೋಟೆಲ್ ಸೇವೆ ಜಾರಿಯಿದೆ. ಆದರೆ, ಬೆಂಗಳೂರಿನ ಇತರ ಪ್ರಮುಖ ಸ್ಥಳಗಳಲ್ಲಿ ರಾತ್ರಿ ಹೋಟೆಲ್ ತೆರೆಯಲು ಅನುಮತಿ ನೀಡಬೇಕು ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಇಡೀ ರಾತ್ರಿ ಹೋಟೆಲ್ ಸೇವೆ ನೀಡಲು ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳುತ್ತೇವೆ. ಆದಾಗ್ಯೂ ಸರ್ಕಾರ ಒಪ್ಪದೇ ಇದ್ದಲ್ಲಿ ಕೋರ್ಟ್ ಮೊರೆ ಹೋಗುವುದು ಅನಿವಾರ್ಯ ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: 24/7 Hotel | ಆಯ್ದ ಸ್ಥಳಗಳಲ್ಲಿ ರಾತ್ರಿ ಹೋಟೆಲ್ ತೆರೆಯಲು ಪೊಲೀಸರ ಗ್ರೀನ್ ಸಿಗ್ನಲ್