Site icon Vistara News

ಬಿಲ್ಕಿಸ್‌ ಬಾನೊ ಅತ್ಯಾಚಾರ ಆರೋಪಿಗಳನ್ನು ಮತ್ತೆ ಜೈಲಿಗಟ್ಟಿ: ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

Bilkis bano

ಬೆಂಗಳೂರು: ಗುಜರಾತ್‌ನ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮತ್ತು ಅವರ ಮರು ಬಂಧನ ಆಗ್ರಹಿಸಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಗೆ ಅಖಿಲ ಬಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಸಾಥ್‌ ನೀಡಿವೆ. ಪ್ರತಿಭಟನೆಯಲ್ಲಿ ಹಲವು ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಆರೋಪಿಗಳನ್ನು ಮತ್ತೆ ಜೈಲಿಗೆ ಅಟ್ಟಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ʻʻಬಿಲ್ಕಿಸ್ ಜೊತೆ ಇದೆ ಕರ್ನಾಟಕʼ ಎಂಬ ಶೀರ್ಷಿಕೆಯಡಿ ಪ್ರತಿಭಟನೆ ನಡೆಯುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮುಸ್ಲಿಂ ಮಹಿಳೆಯರೂ ಇದ್ದಾರೆ.

ಏನಿದು ಬಿಲ್ಕಿಸ್‌ ಬಾನೊ ಪ್ರಕರಣ?
೨೦೦೨ರ ಫೆಬ್ರವರಿ ೨೭ರಂದು ಗುಜರಾತ್‌ನ ಗೋಧ್ರಾದಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ದೊಡ್ಡ ಪ್ರಮಾಣದ ಸಾವು ಸಂಭವಿಸಿದ್ದು, ಇದಕ್ಕೆ ಪ್ರತಿಯಾಗಿ ದೊಡ್ಡ ಮಟ್ಟದ ಹಿಂಸಾಚಾರ ನಡೆದಿತ್ತು. ಇದರಿಂದ ಹೆದರಿದ ಕೆಲವರು ಊರಿನಿಂದ ವಲಸೆ ಹೋಗುತ್ತಿದ್ದರು. ಆಗ ೨೦ ವರ್ಷದವರಾಗಿದ್ದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಟಿದ್ದರು. ಆಗ ಆಕೆ ಐದು ತಿಂಗಳ ಗರ್ಭಿಣಿ. ಆ ಸಂದರ್ಭದಲ್ಲಿ ಸುಮಾರು 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದುದಲ್ಲದೆ, ಗರ್ಭಿಣಿ ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ೧೧ ಮಂದಿಯನ್ನು ಅಪರಾಧಿಗಳೆಂದು ಗುರುತಿಸಿ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಗುಜರಾತ್‌ ಸರಕಾರ ಈ ಆರೋಪಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್‌ ಇದನ್ನು ಪರಿಶೀಲಿಸುವಂತೆ ಗುಜರಾತ್‌ ಸರಕಾರಕ್ಕೆ ಸೂಚನೆ ನೀಡಿದೆ.

ಈ ನಡುವೆ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಕ್ರಮ, ಅವರನ್ನು ಹಿಂದೂ ಸಂಘಟನೆಗಳು ಹೀರೊಗಳ ಮಾದರಿಯಲ್ಲಿ ಸ್ವಾಗತಿಸಿ, ಸಿಹಿ ಹಂಚಿರುವುದು ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

Exit mobile version