ಬೆಂಗಳೂರು: ಮಳೆಗಾಲಕ್ಕೂ (Rain) ಮುನ್ನವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸನ್ನದ್ಧವಾಗಿದೆ. ಮಳೆ ಬಂದಾಗ ರಾಜಕಾಲುವೆ (Bangalore Rajakaluve) ಹುಳು ತೆಗೆಯಲು ಮುಂದಾಗುತ್ತಿದ್ದ ಬಿಬಿಎಂಪಿ ಈಗ ಬೇಸಿಗೆ ಕಾಲದಲ್ಲೇ ಆಪರೇಷನ್ ಕ್ಲೀನಿಂಗ್ ರಾಜಕಾಲುವೆಯತ್ತ ಹೆಜ್ಜೆ ಹಾಕಿದೆ. ಬೇಸಿಗೆ ಅವಧಿಯಲ್ಲೇ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ತಯಾರಿ ನಡೆಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆಗಳು ತಲೆದೋರುತ್ತದೆ. ರಾಜಕಾಲುವೆಗಳು ಉಕ್ಕಿ ಆ ನೀರು ರಸ್ತೆಗಳಿಗೆ, ಮನೆಗಳಿಗೆ ನುಗ್ಗಿ ಜನರನ್ನು ಹೈರಾಣಾಗಿಸುತ್ತವೆ. ಈ ಹಿಂದೆ ಒಂದು ಗಂಟೆ ಮಳೆಗೆ ಅಪಾರ್ಟ್ಮೆಂಟ್‌ಗಳು, ಐಷಾರಾಮಿ ವಿಲ್ಲಾಗಳು ಎಲ್ಲವೂ ಮುಳುಗಿ ಕಾರುಗಳು, ಬೈಕ್‌ಗಳು ತೇಲಿ ಬಂದಿದ್ದವು. ಇಂಥ ಅವಘಡಗಳು ದೇಶದಲ್ಲಿಯೇ ಬೆಂಗಳೂರಿನ ಹೆಸರು ಹಾಳಾಗುವಂತೆ ಮಾಡಿತ್ತು.
ಬೆಂಗಳೂರಿನ ಹಲವು ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸಿತ್ತು. ಇದಕ್ಕೆ ಮೂಲ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗಲು ಆಗದೆ ಇರುವುದು ಎಂದು ತಿಳಿದು ಬಂದಿತ್ತು. ಸರ್ಜಾಪುರ ರಸ್ತೆಯಲ್ಲಿರುವ ರೈನ್‌ಬೋ ಲೇಔಟ್, ಕಂಟ್ರಿ ಸೈಡ್ ಲೇಔಟ್‌ನಲ್ಲಿ 5-6 ಅಡಿ ಮಳೆ ನೀರು ನಿಂತು ಮನೆಯನ್ನೇ ತೊರೆಯುವಂತಾಗಿತ್ತು.
ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾಮಳೆಗೆ (Bengaluru rain) ನಲುಗಿ ಹೋಗಿತ್ತು. ಹಿಂದೆಂದೂ ಕಾಣದ ಮಳೆಗೆ ಹಾಗೂ ಅದರಿಂದ ಆದ ಹಾನಿಯಿಂದ ಹೊರಬರಲು ಆಗದೇ ಜನರು ಒದ್ದಾಡುವಂತೆ ಮಾಡಿತ್ತು. ಕೋಟಿ ಮೌಲ್ಯದ ಕಾರುಗಳಲ್ಲಿ ಓಡಾಡುತ್ತಿದ್ದ ಬಿಲಿಯನೇರ್‌ಗಳು ಜೀವ ಉಳಿಸಿಕೊಳ್ಳಲು ಟ್ರ್ಯಾಕ್ಟರ್, ಬೋಟುಗಳನ್ನು ಹತ್ತಬೇಕಾಯಿತು.
ರಾಜಕಾಲುವೆಯ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ಬೆಳ್ಳಂದೂರು ಸಂಚಾರ ಪೊಲೀಸರು ಬಿಬಿಎಂಪಿಗೆ ಪತ್ರ ಬರೆದಿದ್ದರು. ಕಳೆದ ವರ್ಷ ಮಳೆಗಾಲದಲ್ಲಿ ಬೆಳ್ಳಂದೂರು ಸಮೀಪದ ಯಮ್ಮೂರು ಮುಖ್ಯರಸ್ತೆಯಲ್ಲಿರುವ ಎಪ್ಸಿಲಾನ್ ವಿಲ್ಲಾ ಮಳೆ ನೀರಿನಿಂದ ಮುಳುಗಿ ಹೋಗಿತ್ತು.
ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ತುರ್ತಾಗಿ ಕೈಗೊಳ್ಳಬೇಕಾದ 9 ಸ್ಥಳಗಳ ಪಟ್ಟಿಯನ್ನು ಪತ್ರದಲ್ಲಿ ನೀಡಲಾಗಿತ್ತು. ಹೀಗಾಗಿ ಬಿಬಿಎಂಪಿ ಎಲ್ಲ ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲಸ ಮಾಡಿಸುತ್ತಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇದ್ದರೂ ಬೆಂಗಳೂರು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬಿಬಿಎಂಪಿ ಅಭಯ ನೀಡಿದೆ.