ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಬಿಬಿಎಂಪಿ ಮಾಡುವ ಎಡವಟ್ಟು ಕಾಮಗಾರಿಯಿಂದಾಗಿ ಜನಸಾಮಾನ್ಯರು ಫಜೀತಿ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರದ ಸಂಸ್ಥೆಯೊಂದರ ಜಾಗವನ್ನು ಉಳಿಸಲು ರಾಜಕಾಲುವೆಯ (Bangalore Rajakaluve) ದಿಕ್ಕನ್ನೇ ಬದಲಾಯಿಸುತ್ತಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತ ಬರುವ ಐದಾರು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಸುಮಾರು 130 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ರಾಚೇನಹಳ್ಳಿ ಕೆರೆ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ವಾರಾಂತ್ಯದಲ್ಲಂತೂ ಇಲ್ಲಿಗೆ ಸಾವಿರಾರು ಮಂದಿ ಆಗಮಿಸಿ ಪ್ರಕೃತಿ ಸೌಂದರ್ಯ ಸವಿದು ಹೋಗುತ್ತಾರೆ. ಆದರೆ ಈ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾದರೂ ಸಾಕು, ಕೆರೆ ಸುತ್ತಮುತ್ತ ಪ್ರವಾಹದ ಪರಿಸ್ಥಿತಿ ನಿರ್ಮಾಣ ಆಗುತ್ತದೆ.
ಕಳೆದ ಬಾರಿ ಸುರಿದ ಭಾರಿ ಮಳೆಗೆ ಸ್ಥಳೀಯರು ಹಾಗೂ ವಾಹನ ಸವಾರರು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದರು. ಆಗ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದರು. ಅಲ್ಲದೆ 15 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ, ಅದರ ಭಾಗವಾಗಿ ಬಿಬಿಎಂಪಿ ಈಗ ಕೈಗೆತ್ತಿಕೊಂಡಿರುವ ರಾಜಕಾಲುವೆ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದ್ದು, ಸಮಸ್ಯೆ ಬಗೆಹರಿಯುವುದಿರಲಿ ಇನ್ನೂ ಹೆಚ್ಚಾಗಲಿದೆ ಎಂದು ರಾಚೇನಹಳ್ಳಿ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಟ್ರಸ್ಟ್ ಗಂಭೀರ ಆರೋಪ ಮಾಡಿದೆ.
130 ಎಕರೆಯಷ್ಟು ವ್ಯಾಪ್ತಿಯುಳ್ಳ ರಾಚೇನಹಳ್ಳಿ ಕೆರೆಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಸುಮಾರು 30 ಕೆರೆಗಳ ನೀರು ಹರಿದುಬರುತ್ತದೆ. ಆದರೆ, ಈ ಕೆರೆಗಳ ನೀರು ಸರಾಗವಾಗಿ ಹಾದು ಬರುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಈ ಹಿನ್ನೆಲೆಯಲ್ಲಿ 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ಕಾಲುವೆ ಮಾರ್ಗಗಳ ಕಾಮಗಾರಿ ಬಿಬಿಎಂಪಿ ಕೈಗೆತ್ತಿಕೊಂಡಿದೆ.
ಜವಾಹರ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ (JNCASR) ಮೂಲಕ ಈ ಕಾಲುವೆ ಹಾದುಹೋಗಲಿದೆ. ಆದರೆ ಈ ಕಾಲುವೆ ಮಾರ್ಗವನ್ನು ನೇರವಾಗಿ ಕೆರೆಗೆ ಸಂಪರ್ಕಿಸುವುದು ಬಿಟ್ಟು, ಅಂಕುಡೊಂಕಾಗಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಮೀಪದ ಸುಮಾರು ನಾಲ್ಕೈದು ಗ್ರಾಮಗಳಿಗೆ ಪ್ರವಾಹದ ಭೀತಿ ಹೆಚ್ಚಾಗಿದೆ.
JNCASR ಆಡಳಿತ ವರ್ಗದ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಈ ರೀತಿ ಅವೈಜ್ಞಾನಿಕ ಕಾಮಗಾರಿಗೆ ಒಪ್ಪಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಲುವೆ ನೇರವಾಗಿ ಹಾದುಹೋದರೆ ಜವಾಹರ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ನ ಹಲವು ಕಟ್ಟಡಗಳನ್ನು ಕೆಡವಬೇಕಾಗುತ್ತದೆ. ಹೀಗಾಗಿ ಕಾಂಪೌಂಡ್ ಸಮಾನಾಂತರವಾಗಿ ಕಾಲುವೆ ನಿರ್ಮಾಣ ಆಗುತ್ತಿದ್ದು, ನಾಲ್ಕೈದು ತಿರುವುಗಳ ಮೂಲಕ ಮಳೆ ನೀರು, ಕೆರೆ ಸೇರುವಂತೆ ಅವೈಜ್ಞಾನಿಕ ಕಾಮಗಾರಿ ಮಾಡಲಾಗುತ್ತಿದೆ ಎಂದು ರಾಚೇನಹಳ್ಳಿ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ನವೀನ್ ಕುಮಾರ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Weather Report: ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಈ ಯೋಜನೆಗೆ ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯೋಜನೆ ರಿ-ಡಿಸೈನ್ ಮಾಡುವಂತೆ ಸಹ ಸೂಚಿಸಿದ್ದಾರೆ. ಆದರೆ, ಅಸೆಂಬ್ಲಿ ಎಲೆಕ್ಷನ್ ಸಮಯ ಆಗಿರುವುದರಿಂದ ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಎಂಬ ಆರೋಪ ಸಹ ಇದೆ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕ ಮಾಡಿದ್ದರೆ ಅದಕ್ಕೂ ಎಲೆಕ್ಷನ್ ಡ್ಯೂಟಿಯಲ್ಲಿ ಇದ್ದೇವೆ, ಕಾಮಗಾರಿ ಸರಿಯಾಗಿ ನಡೆಯುತ್ತಿದೆ ಎಂಬ ಸಬೂಬು ಬರುತ್ತಿದೆ.