ಮಡಿಕೇರಿ: ಕೊಡಗಿನ ಪ್ರಕೃತಿ ರಮಣೀಯ ತಾಣದಲ್ಲಿ ಚಾರಣಕ್ಕೆ ತೆರಳಿದ್ದ ಯುವಕನೊಬ್ಬ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ (Trekker Death). ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ ದುರ್ದೈವಿ.
ಬೆಂಗಳೂರಿನ ಜೆಪಿ ನಗರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್ ಚಾರಣ ಪ್ರಿಯರಾಗಿದ್ದು, ರಾಜ್ಯದ ಮೂರನೇ ಅತಿ ಎತ್ತರದ ಬೆಟ್ಟವಾದ ತಡಿಯಂಡಮೋಳ್‌ಗೆ ಚಾರಣ ಮಾಡಲು 5 ಜನ ಸಹೋದ್ಯೋಗಿಗಳ ಜೊತೆ ಆಗಮಿಸಿದ್ದರು.
ಬೆಟ್ಟದ ಮೇಲೆ ತಲುಪಿದಾಗ ತೀವ್ರತರದ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆಯೆ ಕೊನೆಯುಸಿರೆಳೆದರು. ಅವರನ್ನು ಕಾಪಾಡಿಕೊಳ್ಳಲು ಸಹಚಾರಣಿಗರು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ದುರ್ಗಮ ಹಾದಿಯಲ್ಲೇ ಚಾರಣಿಗನ ಮೃತದೇಹವನ್ನು ಸಿಬ್ಬಂದಿಗಳು ಹೊತ್ತು ತಂದಿದ್ದಾರೆ.
ಹೇಮಾವತಿ ನದಿಯಲ್ಲಿ ಮುಳುಗಿ ಯುವತಿ ಸಾವು
ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ (Drowned) ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ.
ಹಾಸನ ತಾಲೂಕಿನ, ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಗೊರೂರು ಅರಳಿಕಟ್ಟೆ ನಿವಾಸಿ ಗಿರೀಶ್ ಎಂಬುವವರ ಪುತ್ರಿ ನಿತ್ಯಾ ಹನುಮ ಜಯಂತಿ ಹಿನ್ನಲೆಯಲ್ಲಿ ತಮ್ಮ ಸಂಬಂಧಿಕರೊಂದಿಗೆ ಅರಳಿಕಟ್ಟೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದ ನಿತ್ಯಾ ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.
ನಿತ್ಯಾ ಮೃತದೇಹಕ್ಕಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Heart Failure: ʼಆರೋಗ್ಯದ ಬಗ್ಗೆ ಕಾಳಜಿ ವಹಿಸಿʼ ಎನ್ನುತ್ತಾ ವೇದಿಕೆ ಮೇಲೆ ಕುಸಿದು ಪ್ರೊಫೆಸರ್ ಸಾವು