ಬೆಂಗಳೂರು, ಕರ್ನಾಟಕ: ದೇಶದ ಐಟಿ ಕ್ಯಾಪಿಟಲ್ ಆಗಿರುವ ಬೆಂಗಳೂರಲ್ಲಿ ಟ್ರಾಫಿಕ್‌ನದ್ದೇ (Bengaluru Traffic) ದೊಡ್ಡ ಸಮಸ್ಯೆ. ಚಾಲಕರು, ಬೈಕ್ ಸವಾರರು ಒನ್‌ವೇದಲ್ಲಿ ನುಗ್ಗೋದು ಸಾಮಾನ್ಯ. ಚಲಿತ್ತಿರುವ ಟ್ರಾಫಿಕ್‌ಗೆ ವಿರುದ್ಧವಾಗಿ ಗಾಡಿಗಳನ್ನು ಓಡಿಸಿಕೊಂಡು ಬರುವುದು, ಇಲ್ಲವೇ ಫುಟ್‌ಪಾತ್‌ಗಳಲ್ಲಿ ಬೈಕ್‌ಗಳನ್ನು ನುಗ್ಗಿಸುವುದು ಕಾಣಬಹುದು. ಟ್ರಾಫಿಕ್ ನಿಯಮಗಳನ್ನು ಮೇಲಿಂದ ಮೇಲೆ ಮುರಿಯಲಾಗುತ್ತದೆ. ಆದರೆ, ಇದಕ್ಕೆಲ್ಲ ಅಂತ್ಯ ಹಾಡಲು ಬೆಂಗಳೂರು ಟ್ರಾಫಿಕ್ ಪೊಲೀಸ್ (Bengaluru Traffic Police) ಮುಂದಾಗಿದ್ದಾರೆ. ಇನ್ನು ಮುಂದೆ ಯಾರಾದರೂ ಒನ್‌ವೇ, ಟ್ರಾಫಿಕ್ ವಿರುದ್ಧವಾಗಿ ಮತ್ತು ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಕೇಸ್ (Criminal Case) ದಾಖಲಾಗಿದೆ.
ಹೌದು ಇದು ನಿಜ. ಹಾಗಾಗಿ, ಇನ್ನು ಮುಂದೆ ಒನ್‌ವೇಲ್ಲಿ ಹೋಗುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. ಯಾಕೆಂದರೆ, ನಿಯಮ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 283 ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗುವುದು. ಅಲ್ಲದೇ ಅವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಫುಟ್‌ಪಾತ್ ಮತ್ತು ಸೈಡ್‌ವಾಕ್ಸ್‌ನಲ್ಲಿ ವಾಹನ ಚಲಾಯಿಸುವವರ ವಿರುದ್ಧವೂ ಕಠಿಣ ಕ್ರಮವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಕೈಗೊಳ್ಳಲಿದ್ದಾರೆ.
ಪೊಲೀಸರು ಅಡ್ಡ ಹಾಕ್ತಾರೆ, ದಂಡಾನೂ ಕಟ್ಟಬೇಕಾಗುತ್ತೆ!
ಹೇಗೂ ವಾಹನಗಳನ್ನು ಪೊಲೀಸರು ತಡೆಯಬಾರದು ಎಂಬ ಕಾನೂನಿದೆ. ನಾನು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಬಹುದು ಎಂದು ನೀವು ಇನ್ನು ಮುಂದೆ ಬೇಕಾಬಿಟ್ಟಿಯಾಗಿ, ಹೇಗಂದರೆ ಹಾಗೆ ವಾಹನ ಚಲಾಯಿಸಿದರೆ ಜೋಕೆ. ನೀವು ಮಾಡುವ ಉಲ್ಲಂಘನೆ ಕಣ್ಣಿಗೆ ಕಂಡರೆ ಸಂಚಾರಿ ಪೊಲೀಸರು (Traffic Police) ನಿಮ್ಮನ್ನು ಅಡ್ಡಗಟ್ಟಬಹುದು, ಅಲ್ಲಿಯೇ ನಿಮ್ಮ ಮೇಲೆ ಕ್ರಮವನ್ನೂ ತೆಗೆದುಕೊಳ್ಳಬಹುದು. ಇಂಥದ್ದೊಂದು ಆದೇಶವನ್ನು ಈಗ ಪೊಲೀಸ್ ಮಹಾ ನಿರ್ದೇಶಕ (ಡಿಜಿ & ಐಜಿಪಿ) ಡಾ. ಅಲೋಕ್ ಮೋಹನ್ (Dr Alok Mohan) ಹೊರಡಿಸಿದ್ದಾರೆ.
ರಾಜ್ಯದಲ್ಲಿ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ವಿವಿಧ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಸಂಚಾರ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ, ಮಾಲಿನ್ಯ ಮತ್ತು ಪ್ರಯಾಣದ ಸಮಯದಲ್ಲಿ ಹೆಚ್ಚಳ ತಡೆಯಲು, ಆ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಡಿಜಿಪಿ ಡಾ. ಅಲೋಕ್ ಮೋಹನ್ ಮುಂದಾಗಿದ್ದಾರೆ. ನಗರ ಪ್ರದೇಶದಲ್ಲಿನ ಸಂಚಾರ ನಿರ್ವಹಣೆ ಸಂಬಂಧ ಕೆಲವು ಕರ್ತವ್ಯಗಳನ್ನು ನಿಭಾಯಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಡಿಜಿಪಿ ಡಾ. ಅಲೋಕ್ ಮೋಹನ್ ನೀಡಿರುವ ಸೂಚನೆಯಲ್ಲೇನಿದೆ?
1) ಕಣ್ಣಿಗೆ ಗೋಚರಿಸುವ ಸಂಚಾರ ನಿಯಮ ಉಲ್ಲಂಘಿಸುವವರನ್ನು ಹೊರತುಪಡಿಸಿ ಇತರೆ ಯಾವುದೇ ಚಾಲಕ / ಸವಾರರನ್ನು ರಸ್ತೆಗಳಲ್ಲಿ ತಡೆಯಕೂಡದು
2) ಸಂಚಾರ ಪೀಕ್ ಸಮಯಕ್ಕೆ ಮುನ್ನವೇ ಸಂಚಾರ ಪೊಲೀಸ್ ಅಧಿಕಾರಿಗಳು ರಸ್ತೆಯ ಮೇಲಿದ್ದು ತಮ್ಮ ತಮ್ಮ ಸರಹದ್ದಿನಲ್ಲಿ ಗಸ್ತಿನಲ್ಲಿರತಕ್ಕದ್ದು. ಇದರಿಂದ ಸಂಚಾರ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿ ಆ ಕ್ಷಣದ ಸಂಚಾರ ಸಮಸ್ಯೆಗಳ ಬಗ್ಗೆ ಮಾಹಿತಿ ಲಭ್ಯವಾಗುವುದಲ್ಲದೇ ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಅದನ್ನು ಪರಿಹರಿಸಲು ಸಾಕಷ್ಟು ಸಮಯಾವಕಾಶವಿರುವ ಕಾರಣ ದಟ್ಟಣೆ ಉಂಟಾಗದಂತೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.
3) ಸಂಚಾರ ಪೊಲೀಸ್ ಅಧಿಕಾರಿಗಳು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲ ಸಮಯದಲ್ಲೂ ಬಾಡಿ ವೊರ್ನ್ ಕ್ಯಾಮರಾಗಳನ್ನು ಧರಿಸತಕ್ಕದ್ದು.
4) ನಿಲುಗಡೆ ನಿಷಿದ್ಧ ಸ್ಥಳದಲ್ಲಿ ನಿಲುಗಡೆ ಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳತಕ್ಕದ್ದು. ಇಂತಹ ಸಂದರ್ಭದಲ್ಲಿ ಅಂತಹ ವಾಹನಗಳನ್ನು ತಕ್ಷಣವೇ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡತಕ್ಕದ್ದು.
5) ಎ.ಎಸ್.ಐ ಹಾಗೂ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಾನೂನು ಪ್ರದತ್ತವಾಗಿರುವ ಅಧಿಕಾರವು ಅತ್ಯಂತ ಮಹತ್ವದ್ದಾಗಿದ್ದು, ಇದು ಪೊಲೀಸ್ ಅಧಿಕಾರಿಗಳಿಗಿರುವ ಪ್ರಾಮುಖ್ಯತೆ ಹಾಗೂ ಅವರ ಸರಹದ್ದಿನಲ್ಲಿ ವಿವೇಚನೆಯನ್ವಯ ಬಳಸಬಹುದಾದ ಅಧಿಕಾರವಾಗಿದೆ. ಈ ಅಧಿಕಾರವು ಅಂಕಿ-ಅಂಶಗಳನ್ನು ಸೃಷ್ಟಿಸುವ ಅಥವಾ ಜನಸಾಮಾನ್ಯರಿಗೆ ಅವರು ಉಲ್ಲಂಘಿಸಿರುವ ಎಲ್ಲ ಸಂಚಾರ ನಿಯಮ ಉಲ್ಲಂಘನೆಗಳನ್ನು ದಂಡ ಪಾವತಿಸಿ ಮುಕ್ತಾಯ ಮಾಡಿಕೊಳ್ಳಬೇಕೆಂದು ಒತ್ತಾಯಿಸುವ ಸಾಧನವನ್ನಾಗಿ ಬಳಸಿಕೊಳ್ಳಕೂಡದು. ನಿಯಮ ಉಲ್ಲಂಘನೆಗಳನ್ನು ಮಾಡಿದ ವ್ಯಕ್ತಿಗೆ ಇರುವ ಕಾನೂನು ಪ್ರಕ್ರಿಯೆಯ ಸಾಧ್ಯತೆಗಳನ್ನು ಅವರಿಗೆ ಆಯ್ಕೆ ಮಾಡಲು ಅವಕಾಶ ನೀಡಬೇಕೇ ಹೊರತು ದಂಡ ಪಾವತಿ ಮೂಲಕ ಮುಕ್ತಾಯಗೊಳಿಸಿಕೊಳ್ಳವಂತೆ ಒತ್ತಾಯಪೂರ್ವಕವಾಗಿ ಹಣ ಪಡೆಯುವುದಾಗಲೀ ಅಥವಾ ಅಂತಹ ವ್ಯಕ್ತಿಯೇ ಉಲ್ಲಂಘಿಸಿರುವರೆಂಬ ಆರೋಪವನ್ನು ದೃಢೀಕರಿಸುವುದಕ್ಕಾಗಲೀ ಬಳಸಕೂಡದು.
6) ಸಾಕ್ಷ್ಯಾಧಾರ ಸಹಿತ ಇರುವ ಸಂಚಾರ ನಿಯಮ ಜಾರಿ ಪ್ರಕ್ರಿಯೆಯು ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಹಾಗೂ ದೋಷರಹಿತವಾಗಿದೆ ಎಂಬುದನ್ನು ಎಲ್ಲ ಪೊಲೀಸ್ ಅಧಿಕಾರಿಗಳು ಮನಗಾಣಬೇಕು. ಜನಸಾಮಾನ್ಯರು ಈ ಪಾರದರ್ಶಕ ವ್ಯವಸ್ಥೆಯ ಜಾರಿ ಪದ್ಧತಿಯನ್ನು ಸ್ವಾಗತಿಸಿದ್ದಾರೆ. ಈ ಪ್ರಕ್ರಿಯೆಯು, ಮಾನವ ದೋಷದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಿ, ಉಲ್ಲಂಘನೆ ಸ್ಪಷ್ಟವಾಗಿ ಗೋಚರವಾದಲ್ಲಿ ಮಾತ್ರ ಕಾನೂನು ಪ್ರಕ್ರಿಯೆ ಚಾಲನೆಗೊಳ್ಳುವ ದೋಷರಹಿತ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
ಈ ಸುದ್ದಿಯನ್ನೂ ಓದಿ: Bangalore Traffic: ಅಲೋಕ್ ಕುಮಾರ್‌ಗೆ ಬೆಂಗಳೂರು ಟ್ರಾಫಿಕ್ ನಿಯಂತ್ರಣ ಹೊಣೆ; ತಪ್ಪೀತೇ ಸಂಚಾರ ದಟ್ಟಣೆ ಕಿರಿಕಿರಿ?
7) ಸಂಚಾರ ಪೊಲೀಸ್ ಕರ್ತವ್ಯದ ಎಲ್ಲ ಸ್ಥರಗಳಲ್ಲೂ ಹಾಗೂ ಸಂದರ್ಭಗಳಲ್ಲೂ ಅತ್ಯಂತ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತಿ ಅವಶ್ಯಕ. ಪ್ರತಿಯೊಂದು ವ್ಯವಹಾರವೂ ದೋಷರಹಿತವಾಗಿದ್ದು, ಉಲ್ಲಂಘನೆದಾರರಿಗೆ ಅವರು ಪಾವತಿಸಿದ ಮೊತ್ತಕ್ಕೆ ಸಮನಾದ ಅಧಿಕೃತ ಸ್ವೀಕೃತಿಯನ್ನು ತಕ್ಷಣವೇ ನೀಡತಕ್ಕದ್ದು.