Site icon Vistara News

Bangalore Water Crisis: ಬೆಂಗಳೂರಿನ ನೀರಿನ ಸಮಸ್ಯೆ ಗೆದ್ದವರ ಸ್ಫೂರ್ತಿದಾಯಕ ಕತೆಯಿದು!

Bangalore Water Crisis 2

ಬೆಂಗಳೂರಿಗರು ನೀರಿನ (Bangalore Water Crisis) ಸಮಸ್ಯೆಯೊಂದಿಗೆ ಹೋರಾಟ ನಡೆಸುತ್ತ, ದುಬಾರಿ ನೀರಿನ ಟ್ಯಾಂಕರುಗಳ ಮೂಲಕ ನೀರು ತರಿಸಿಕೊಂಡು ಜೀವನ ನಡೆಸಬೇಕಾದ ಪರಿಸ್ಥಿತಿ ಇರುವುದು ಗೊತ್ತೇ ಇದೆ. ಆದರೆ, ಇಂಥ ಸಂದರ್ಭ ಬೇಗೂರಿನ ಮೆಟ್ರೋಪೊಲೀಸ್‌ ಗುರುಕೃಪಾ ಎಂಬ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ ಒಂದು ಮಾತ್ರ ಎಲ್ಲವುಗಳ ನಡುವೆ ವಿಶೇಷವಾಗಿ ಗಮನ ಸೆಳೆಯುತ್ತದೆ.

2018ರಲ್ಲಿ ಈ ಅಪಾರ್ಟ್‌ಮೆಂಟಿನ ಬೋರ್‌ವೆಲ್‌ ನೀರು ಆರಿದಾಗಲೇ ಈ ಅಪಾರ್ಟ್‌ಮೆಂಟ್‌ಗೆ ನೀರಿನ ಸಮಸ್ಯೆ ತಲೆದೋರಿತ್ತು. ನೀರಿಲ್ಲದೆ ಏನು ಮಾಡುವುದು ಎಂದು ಚಿಂತಾಕ್ರಾಂತರಾಗಿ ಎಲ್ಲರಂತೆ ಟ್ರಾಂಕರ್‌ನಿಂದ ನೀರು ತರಿಸಿಕೊಳ್ಳುವುದು ಎಂಬ ಆಯ್ಕೆಗೆ ಬೇರೆ ದಾರಿ ಕಾಣಲಿಲ್ಲ. ಆದರೆ, ಈ ಅಪಾರ್ಟ್‌ಮೆಂಟ್‌ನ ನಿವಾಸಿ ಗಣೇಶ್‌ ಶಾನುಭಾಗ್‌ ಅವರಿಗೆ ಮಾತ್ರ ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುವುದನ್ನು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲ. ಈ ಸಮಸ್ಯೆಗೆ ಉತ್ತರವನ್ನು ಕಂಡು ಹುಡುಕಲೇಬೇಕು ಎಂಬುದು ಅವರ ಮನದ ಇಂಗಿತವಾಗಿತ್ತು. ಟೆಕ್‌ ಉದ್ಯೋಗಿಯಾಗಿರುವ ಇವರು ಪರಿಸರದ ಕಾಳಜಿಯನ್ನೂ ಹೊಂದಿದವರಾಗಿದ್ದು, ಇದಕ್ಕೊಂದು ಪರಿಹಾರ ಹುಡುಕಲೇಬೇಕು ಎಂಬ ಬಲವಾದ ತುಡಿತದಿಂದ ಕಾರ್ಯೋನ್ಮುಖರಾದರು. ಇದಕ್ಕೆ ಕಾರಣವೇನೆಂದು ತಿಳಿಯ ಹೊರಟಾಗ, ಅಂತರ್ಜಲದ ಮಟ್ಟ ಇತ್ತೀಚೆಗಿನ ದಿನಗಳಲ್ಲಿ ಗಣನೀಯ ಕುಸಿತ ಕಂಡಿರುವುದನ್ನು ಅವರು ಗಮನಿಸಿದರು.

ನೀರಿನ ಕೊರತೆ ಏಕೆ?

ಬೆಂಗಳೂರು ಆ ವರ್ಷದಲ್ಲಿ 1300 ಎಂಎಂ ಮಳೆಯನ್ನು ಪಡೆದಿದ್ದರೂ, ಈ ಮಳೆ ಬೆಂಗಳೂರಿನಂತಹ ಜನದಟ್ಟಣೆಯ ನಗರದ ಶೇ.80ರಷ್ಟು ಅಗತ್ಯಗಳನ್ನು ಪೂರೈಸಲು ಸಾಕಾಗಿದ್ದೂ, ನೀರಿನ ಕೊರತೆ ಯಾಕಾಗುತ್ತದೆ ಎಂಬುದೇ ಅವರ ಪ್ರಶ್ನೆಯಾಗಿತ್ತು. ಹೀಗೆ ಸಾಕಷ್ಟು ವಿಷಯಗಳನ್ನು ತಿಳಿಯಹೊರಟ ಅವರು, ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯಲೇಬೇಕೆಂದು ಕಾರ್ಯೋನ್ಮುಖರಾದರು. ಅಪಾರ್ಟ್‌ಮೆಂಟ್‌ನ ನಿವಾಸಿಗಳ ಒಕ್ಕೂಟ, ಶಾನುಬಾಗ್‌ ಅವರ ಬೆನ್ನಿಗೆ ನಿಂತರು. ಒಂದಿಷ್ಟು ಮಂದಿ ನಿವಾಸಿಗಳು, ಶಾನುಭಾಗ್‌ ಅವರ ಜೊತೆಗೂಡಿ, ತಮ್ಮ ವಾರಾಂತ್ಯದ ದಿನಗಳನ್ನು ಸಂಪೂರ್ಣವಾಗಿ ಇದಕ್ಕೆ ಮುಡಿಪಾಗಿಟ್ಟರು. ಕಡಿಮೆ ಖರ್ಚಿನಲ್ಲಿ ತಮ್ಮದೇ ಆದ, ಮಳೆಕೊಯ್ಲು ಪರಿಕರಗಳನ್ನು ಸಿದ್ಧ ಮಾಡಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿಯೂ ಅಳವಡಿಸುವ ಬಗ್ಗೆ ಯೋಚಿಸಿದರು. ಬೆಂಗಳೂರಿನ ಕೆಲವು ಮನೆಗಳಲ್ಲಿ ಮಳೆಕೊಯ್ಲು ನಡೆಸುತ್ತಿರುವಲ್ಲಿಗೆ ಭೇಟಿ ಕೊಟ್ಟು, ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿತರು. ಕಡಿಮೆ ವೆಚ್ಚದಲ್ಲಿ, ತಮ್ಮದೇ ಆದ ಮಳೆಕೊಯ್ಲು ವ್ಯವಸ್ಥೆಯನ್ನು ಒಂದೇ ತಿಂಗಳಲ್ಲಿ ಅಳವಡಿಸಿಯೂ ಬಿಟ್ಟರು!

ಒಂದೇ ವರ್ಷದಲ್ಲಿ ನೀರಿನ ಸ್ವಾವಲಂಬನೆ

2019ರ ಮಳೆಯಲ್ಲಿ ಈ ಅವರ ಪ್ರಯತ್ನ ಎಷ್ಟು ಫಲಪ್ರದವಾಯ್ತು ಎಂಬುದನ್ನು ಒಂದೇ ವರ್ಷದಲ್ಲಿ ನಿರೂಪಿಸಿಯೂ ಬಿಟ್ಟಿತು. ಟ್ಯಾಂಕರ್‌ ನೀರಿಗಾಗಿ ಕಾಯುತ್ತಿದ್ದ ಈ ಅಪಾರ್ಟ್‌ಮೆಂಟ್‌ ನಿವಾಸಿಗಳು, ಈ ಮಳೆಕೊಯ್ಲಿನ ವ್ಯವಸ್ಥೆಯಿಂದಾಗಿ ನೀರಿಗಾಗಿ, ಬೇರೆ ಮೂಲಗಳಿಗೆ ಕಾಯುವುದು ತಪ್ಪಿತು. ನೀರಿನ ಸ್ವಾವಲಂಬನೆ ಒಂದೇ ವರ್ಷದಲ್ಲಿ ಸಾಧ್ಯವಾಯಿತು. ಅಷ್ಟೇ ಅಲ್ಲ, ಸುಮಾರು ಒಂದು ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಷ್ಟು ನೀರಿನ ಬಿಲ್‌ ಅನ್ನೂ ಇದು ಉಳಿಸಿತು!

ಇದನ್ನೂ ಓದಿ | Water Crisis: ಬೆಂಗಳೂರಿಗರೇ ಹುಷಾರ್.. ಹೋಳಿ ಹಬ್ಬಕ್ಕೆ ನೀರಲ್ಲಿ ಜಾಲಿ ಮಾಡಿದ್ರೆ ಬೀಳುತ್ತೆ ಕೇಸ್‌

ಈ ಮಳೆಕೊಯ್ಲು ಪರಿಕರಗಳ ಖರೀದಿಗೆ ಸುಮಾರು 3 ಲಕ್ಷ ರೂಪಾಯಿಗಳಷ್ಟು ಆರಂಭದಲ್ಲಿ ಹೂಡಿಕೆ ಮಾಡಲಾಗಿತ್ತು. ಇದರ ಅಳವಡಿಕೆಗಾಗಿ ಇವರು ತನ್ನ ಸಮಯ, ಶ್ರಮಕ್ಕಾಗಿ ಯಾವುದೇ ಹೆಚ್ಚಿನ ಹಣವನ್ನು ಪಡೆಯಲಿಲ್ಲ. ಅವರ ಅಂದಿನ ಶ್ರಮ ಪ್ರತಿ ವರ್ಷವೂ ಫಲ ಕೊಡುತ್ತಿದೆ. ಸಾಕಷ್ಟು ಹಣವನ್ನೂ ಉಳಿಸುತ್ತಿದೆ. ಅಷ್ಟೇ ಅಲ್ಲ, ಇಂತಹ ಸಮಸ್ಯೆ ಅನುಭವಿಸುತ್ತಿರುವ ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೂ ಇವರು ಸಲಹೆ ಸೂಚನೆಗಳನ್ನೂ ನೀಡುತ್ತಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ಇದನ್ನು ಅಳವಡಿಸಿ ಕೊಟ್ಟಿದ್ದಾರೆ. ಇದು ಅವರ ಹವ್ಯಾಸವಾಗಿ ಬದಲಾಗಿದ್ದು, ಇದರಿಂದ ಸಂತೋಷ ಸಿಗುತ್ತಿದೆ ಎಂದೂ ಅವರು ಹೇಳುತ್ತಾರೆ. ಬೆಂಗಳೂರಿಗರು ಹೆಚ್ಚು ಹೆಚ್ಚು ಇಂತಹ ನೀರಿನ ಸ್ವಾವಲಂಬನೆಯತ್ತ ಕಾರ್ಯೋನ್ಮುಖರಾಗಬೇಕು ಎಂಬುದೇ ಅವರ ಆಶಯ.

Exit mobile version