Site icon Vistara News

Bangalore Weather : 10 ವರ್ಷದಲ್ಲೇ ಬೆಂಗಳೂರಲ್ಲಿ ಕನಿಷ್ಠ ತಾಪಮಾನ; ದಿಢೀರ್‌ ಚಳಿಯಾಗಲು ಬಿಸಿಲೇ ಕಾರಣ!

Bangalore Weather city view

ಬೆಂಗಳೂರು: ರಾಜ್ಯಾದ್ಯಂತ ಮಳೆ ಇಲ್ಲದೆ ಭಾರಿ ಸಮಸ್ಯೆಯಾಗುತ್ತಿದೆ. ಒಂದೆಡೆ ಬರ (Karnataka Drought) ಪರಿಸ್ಥಿತಿ ಇದ್ದರೆ ಮತ್ತೊಂದೆಡೆ ತಾಪಮಾನ ಏರಿಕೆಯ ಆತಂಕ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ (Bangalore Weather) ಅಕ್ಟೋಬರ್‌ ತಿಂಗಳಿನಲ್ಲಿ ಕಳೆದ 10 ವರ್ಷದಲ್ಲೇ ಕನಿಷ್ಠ ತಾಪಮಾನ (Bangalore Temperature) ದಾಖಲಾಗಿದೆ. ಕೇವಲ ಮಂಗಳವಾರ (ಅಕ್ಟೋಬರ್‌ 24) 17.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಇದ್ದು ಹತ್ತು ವರ್ಷದಲ್ಲಿಯೇ ಅತಿ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಹೇಳಿದೆ.

2014ರ ಅಕ್ಟೋಬರ್ 31 ರಂದು ಬೆಂಗಳೂರಿನಲ್ಲಿ 17.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಆಗ ಇದೇ ಕನಿಷ್ಠ ತಾಪಮಾನವಾಗಿತ್ತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್​​ ದಾಖಲಾಗಿತ್ತು. ಒಟ್ಟಾರೆ ಬೆಂಗಳೂರಿನಲ್ಲಿ 17.1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನಕ್ಕೆ ಇಳಿದಿತ್ತು.

ಇನ್ನು ಬೆಂಗಳೂರು ಗ್ರಾಮಾಂತರ ಪ್ರದೇಶವೂ ಇದಕ್ಕೆ ಹೊರತಾಗಿಲ್ಲ. ಅಲ್ಲಿಯೂ ಸಹ ಕನಿಷ್ಠ ತಾಪಮಾನ 17.2 ಡಿಗ್ರಿ ಸಲ್ಸಿಯಸ್‌ನಷ್ಟು ದಾಖಲಾಗಿದೆ. ಆದರೆ, ಗರಿಷ್ಠ ತಾಪಮಾನವು 30.8 ಡಿಗ್ರಿ ಸಲ್ಸಿಯಸ್‌ ಇತ್ತು. ಬೆಂಗಳೂರಿನಲ್ಲಿ ನೋಡುವುದಾದರೆ ಗರಿಷ್ಠ ತಾಪಮಾನವು 30.5 ಡಿಗ್ರಿ ಸಲ್ಸಿಯಸ್‌ನಷ್ಟು ಇತ್ತು.

ಇನ್ನೊಂದು ವಾರ ತಾಪಮಾನದಲ್ಲಿ ಏರಿಳಿತ

ಬೆಂಗಳೂರಿನಲ್ಲಿ ಮುಂದಿನ ವಾರದವರೆಗೂ ತಾಪಮಾನದಲ್ಲಿ ಏರಿಳಿತ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನದಲ್ಲಿ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಒಮ್ಮೆ ಮಾತ್ರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಮುಂದಿನ 7 ದಿನದ ಬೆಂಗಳೂರಿನ ತಾಪಮಾನದ ಪಟ್ಟಿ (ಡಿಗ್ರಿ ಸೆಲ್ಸಿಯಸ್‌ಗಳಲ್ಲಿ)

ದಿನಾಂಕ ಕನಿಷ್ಠ ತಾಪಮಾನ ಗರಿಷ್ಠ ತಾಪಮಾನ

ಅ. 25 – 18.0 – 31.0

ಅ. 26 – 19.0 – 30.0

ಅ. 27 – 20.0 – 30.0

ಅ. 28 – 20.0 – 31.0

ಅ. 29 – 21.0 – 31.0

ಅ. 30 – 21.0 – 31.0

ಅ. 31 – 21.0 – 31.0

ತಾಪಮಾನ ಕೂಲ್‌ ಆಗಲು ಏನು ಕಾರಣ?

ಬೆಂಗಳೂರಿನಲ್ಲಿ ಈಗಂತೂ ಮಳೆ ಸಮರ್ಪಕವಾಗಿ ಆಗುತ್ತಿಲ್ಲ. ಬಿಸಿಲು ಸಹ ಹೆಚ್ಚಾಗಿದೆ. ಹಾಗಾಗಿ ವಾತಾವರಣ ತಂಪಾಗಲು ಏನು ಕಾರಣ? ಎಂಬ ಬಗ್ಗೆ ಸಹ ಕುತೂಹಲ ಇದ್ದೇ ಇರುತ್ತದೆ. ಆದರೆ, ಹೀಗೆ ತಾಪಮಾನ ಕೂಲ್‌ ಆಗಲು ಹೆಚ್ಚಾಗಿರುವ ಬಿಸಿಲೇ ಕಾರಣ ಎಂದು ಹವಾಮಾನ ತಜ್ಞರು ಉತ್ತರಿಸುತ್ತಾರೆ. ಇದು ಸೋಜಿಗವಾದರೂ ಸತ್ಯ ಎಂಬ ಅಂಶವನ್ನು ಒಪ್ಪಿಕೊಳ್ಳಲೇ ಬೇಕು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಒಣ ಹವಾಮಾನ; ಏರಲಿದೆ ತಾಪಮಾನ

ಹವಾಮಾನ ತಜ್ಞರು ಹೇಳುವ ಪ್ರಕಾರ, ಭೂಮಿಯಲ್ಲಿ ತಾಪಮಾನ ಏರಿಕೆಯಾದಾಗ ವಿಕಿರಣ ತಂಪಾಗಿಸುವಿಕೆ (ರೇಡಿಯೇಶನ್‌ ಕೂಲಿಂಗ್)‌ ಉಂಟಾಗುತ್ತದೆ. ಅಂದರೆ ಭೂಮಿಯ ಮೇಲ್ಮೈಯ ತಂಪಾಗಿಸುವಿಕೆ ಪ್ರಕ್ರಿಯೆ ಇದಾಗಿದೆ. ರಾತ್ರಿ ವೇಳೆ ಭೂಮಿಯಲ್ಲಿ ಶಾಖವು ಹೊರಸೂಸಲ್ಪಡುತ್ತದೆ. ಇದನ್ನೇ ವಿಕಿರಣ ತಂಪಾಗಿಸುವಿಕೆ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಎಲ್ಲ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಭೂಮಿಯ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಇದು ಬಹುಮುಖ್ಯವಾಗಿದೆ. ಒಂದು ವೇಳೆ ದಿನವಿಡಿ ಮೋಡ ಕವಿದ ವಾತಾವರಣ ಇದ್ದರೆ ಭೂಮಿಗೆ ಅಷ್ಟೊಂದು ತಾಪಮಾನ ಬೀಳುವುದಿಲ್ಲ. ಹೀಗಾಗಿ ಹವಾಮಾನ ವೈಪರೀತ್ಯವೂ ಆಗದೆ, ಏಕಾಏಕಿ ತಾಪಮಾನದಲ್ಲಿ ಕುಸಿತವೂ ಆಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

Exit mobile version