Site icon Vistara News

Bangalore Works : ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳ ಪುನಾರಂಭ, ಶೇ. 75 ಹಳೇ ಬಿಲ್‌ ಕ್ಲಿಯರ್: ಡಿ.ಕೆ. ಶಿವಕುಮಾರ್

DK Shivakumar inspection of Bangalore work

ಬೆಂಗಳೂರು: ಇಲಾಖೆಗಳಿಂದ ಅನುಮತಿ ಪಡೆದು ಸ್ಥಗಿತವಾಗಿರುವ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು (Bangalore Works) ಪುನಾರಂಭಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಹಳೇ ಕಾಮಗಾರಿಗಳ ಶೇ. 75ರಷ್ಟು ಬಿಲ್‌ಗಳನ್ನು ಕ್ಲಿಯರ್‌ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿಳಿಸಿದರು.

ವಸಂತನಗರದ ಅಯ್ಯಪ್ಪ ಸ್ವಾಮಿ ದೇವಾಸ್ಥಾನದ ಪಕ್ಕ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನಂತರ ಜಯಮಹಲ್ ಪ್ಯಾಲೇಸ್ ರಸ್ತೆಯ ಅಗಲೀಕರಣ ಹಾಗೂ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದರು.

ಆದಷ್ಟು ಬೇಗ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಬಿಡಿಎ ಮುಖ್ಯಸ್ಥರಾದ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಇದ್ದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆದಿವೆ. ಟೆಂಡರ್ ಶ್ಯೂರ್ ರಸ್ತೆಯಲ್ಲಿ ಮುಂದೆ ಯಾರೂ ಕೂಡ ರಸ್ತೆಯನ್ನು ಅಗೆಯಬಾರದು, ಕೇಬಲ್ ಲೈನ್ ಎಳೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಅವುಗಳನ್ನು ಯಾರೂ ಉಪಯೋಗಿಸುತ್ತಿಲ್ಲ. ನಾವು ಎಲ್ಲೆಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದೇವೆ, ಅಲ್ಲೆಲ್ಲ ಇದರ ಕಾನೂನುಬದ್ಧವಾಗಿ ಉಪಯೋಗ ಮಾಡಿಕೊಳ್ಳಬೇಕು. ಬೆಂಗಳೂರಿನ ಅಂದ ಹೆಚ್ಚಿಸಲು ಕೇಬಲ್‌ಗಳನ್ನು ಅಂಡರ್ ಗ್ರೌಂಡ್‌ನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ಕಾಮಗಾರಿಗಳ ಪುನಾರಂಭಕ್ಕೆ ಸೂಚನೆ

ಬೆಂಗಳೂರಿನಲ್ಲಿ ಬೀಳುವ ಮಳೆ ನೀರು ರಸ್ತೆಯ ಮೇಲೆ ನಿಲ್ಲಬಾರದು, ಒಳಚರಂಡಿ ಮೂಲಕ ಹರಿದು ಹೋಗಬೇಕು. ಅದಕ್ಕಾಗಿ ನಾವು ಈಗಾಗಲೇ ಅನುಮತಿ ನೀಡಲಾಗಿರುವ ಕಾಮಗಾರಿಗಳನ್ನು ಪುನಾರಂಭಿಸಲು ಸೂಚಿಸಿದ್ದೇನೆ. ಇನ್ನು ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಕೂಡಲೇ ಅವುಗಳನ್ನು ಸರಿಪಡಿಸಲಾಗುವುದು. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಚರ್ಚೆ ಮಾಡಿದ್ದೇವೆ. ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಸೇರಿ ರಸ್ತೆಗುಂಡಿಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಆದ್ಯತೆ ಮೇರೆಗೆ ಈ ಕೆಲಸ ಮಾಡಬೇಕಾಗಿದೆ. ಈ ಮಧ್ಯೆ ಇದೇ ತಿಂಗಳು 7ರಂದು ಹೊರವರ್ತುಲ ರಸ್ತೆಗೆ ಭೇಟಿ ನೀಡಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಶೇ. 50-75 ಬಾಕಿ ಬಿಲ್ ಪಾವತಿ

ಬಿಬಿಎಂಪಿ ಬಿಲ್ ಬಾಕಿ ವಿಚಾರವಾಗಿ, ಅಮೃತನಗರ ಯೋಜನೆಯಲ್ಲಿ ಐದು ಸಾವಿರ ಕೋಟಿ ವೆಚ್ಚದ 352 ಪ್ಯಾಕೇಜ್ ಕಾಮಗಾರಿಗಳ ಪೂರ್ಣಗೊಳಿಸಲು ತಿಳಿಸಲಾಗಿದೆ. ಇನ್ನು ಕಾಮಗಾರಿಗಳ ತನಿಖೆ ಕೂಡ ಮುಂದುವರಿದು ವರದಿ ಸಲ್ಲಿಕೆಯಾಗಲಿದೆ. 675 ಕೋಟಿ ಮೊತ್ತದ ಬಿಲ್ ಪಾವತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸುಮಾರು 50-75% ನಷ್ಟು ಬಿಲ್ ಪಾವತಿ ಮಾಡಲಾಗಿದೆ. 432 ಕೋಟಿ ಬಿಬಿಎಂಪಿ ಅನುದಾನ ಕೂಡ ಬಿಡುಗಡೆ ಮಾಡಲಾಗುವುದು. ಉಳಿದ ಬಾಕಿ ಮೊತ್ತವನ್ನು ಪಾವತಿ ಮಾಡಲಾಗುವುದು. ಜನರಿಗೆ ತೊಂದರೆ ಆಗದಂತೆ ಕೆಲಸ ಆರಂಭಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಇಂಜಿನಿಯರ್ ಗಳಿಗೆ ವಹಿಸಲಾಗಿದೆ ಎಂದು‌ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ : Karnataka Drought : ಬರ ಅಧ್ಯಯನ ಮಾಡಲು ರಾಜ್ಯಕ್ಕೆ ಇಂದು ಕೇಂದ್ರ ತಂಡ

ಎಸ್ಐಟಿ ತನಿಖೆ ಎಲ್ಲಿಯವರೆಗೂ ಬಂದಿದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ತನಿಖೆ ನಡೆಯುತ್ತಿದೆ. ಪೂರ್ಣಗೊಂಡ ನಂತರ ಅದರ ವರದಿ ಸಲ್ಲಿಕೆಯಾಗಲಿದೆ. ಅದಕ್ಕಾಗಿ ನಾವು ಸ್ವಲ್ಪ ಪ್ರಮಾಣದ ಬಿಲ್‌ಗಳನ್ನು ಪಾವತಿ ಮಾಡುತ್ತಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Exit mobile version