Site icon Vistara News

Bangalore Rain: ಅಬ್ಬಬ್ಬಾ… ಬೆಂಗಳೂರಲ್ಲಿ ದಾಖಲೆ ಬರೆಯಿತು ಮೇ ಮಳೆ; ಇದು 66 ವರ್ಷದಲ್ಲೇ ಅತಿ ಹೆಚ್ಚು!

banglore Rains records 66 year old record rainfall

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದು ಬಾರಿ ಸ್ವಲ್ಪ ಜೋರಾಗಿ ಮಳೆ ಬಂದರೂ ಜನರಿಗೆ ಕಷ್ಟ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈ ನಡುವೆ ಎಂದಿಗಿಂತ ತುಸು ಜೋರಾಗಿಯೇ ಹಾಗೂ ಹೆಚ್ಚಾಗಿಯೇ ಮಳೆಯಾಗುತ್ತಿರುವುದು ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಇನ್ನು ಮೇ ತಿಂಗಳ ಮಳೆಯು ಬೆಂಗಳೂರಿನಲ್ಲಿ (Bangalore Rain) ದಾಖಲೆಯನ್ನೇ ಬರೆದಿದೆ. ತನ್ನ 66 ವರ್ಷದ ಹಳೇ ದಾಖಲೆಯನ್ನೇ (Recorderd Rainfall) ಮುಳುಗಿಸಿಬಿಟ್ಟಿದೆ. ಒಟ್ಟಾರೆ ಈ ಒಂದೇ ತಿಂಗಳಿನಲ್ಲಿ ಸುಮಾರು 31 ಸೆಂ.ಮೀ. ಮಳೆಯಾಗಿದೆ.

ಬೆಂಗಳೂರಲ್ಲಿ 30.1 ಸೆಂ.ಮೀ ವರ್ಷಧಾರೆ

ಬೆಂಗಳೂರಿನಲ್ಲಿ ಮೇ ಮಾಸದಲ್ಲಿ ಒಟ್ಟು 30.1 ಸೆಂ.ಮೀ ಮಳೆ ಸುರಿದಿದೆ. 1957ರ ಮೇ ತಿಂಗಳಲ್ಲಿ 28 ಸೆಂ.ಮೀ.ನಷ್ಟು ಮಳೆಯಾಗಿತ್ತು. ಆದರೆ, ಈ ಬಾರಿ ಅದಕ್ಕಿಂತ 2 ಸೆಂ.ಮೀ. ತುಸು ಹೆಚ್ಚೇ ಮಳೆಯಾಗಿದೆ. ಇನ್ನೊಂದು ವಿಶೇಷವೆಂದರೆ 2015 ರಿಂದ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಲೇ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲಿಂದೀಚೆಗೆ ಪ್ರತಿ ವರ್ಷ ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಆಗುವ ಮಳೆಯು ಸರಾಸರಿ ವರ್ಷಕ್ಕೆ ಒಟ್ಟು 128.7 ಮಿಮೀ ಮಳೆಗಿಂತ ಹೆಚ್ಚಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳುತ್ತದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ 27 ಸೆಂ.ಮೀ ಮಳೆಯಾಗಿದೆ. ಆದರೆ, 2020 ಮತ್ತು 2021ರಲ್ಲಿ 13 ಸೆಂ.ಮೀ. ಮಳೆಯಾಗಿರುವ ವರದಿಯಾಗಿದೆ.

ಕಳೆದೆರಡು ತಿಂಗಳಲ್ಲೂ ಹೆಚ್ಚಿತ್ತು ಮಳೆ

ಕಳೆದ 2 ತಿಂಗಳನ್ನು ಗಮನಿಸುವುದಾದರೆ, 2023ರ ಮಾರ್ಚ್ 1 ರಿಂದ ಮೇ 31ರವರೆಗೆ ಬೆಂಗಳೂರಲ್ಲಿ 343 ಮಿಮೀ ಮಳೆ ಸುರಿದಿದೆ. ಇದು ಸಾಮಾನ್ಯಕ್ಕಿಂತ 173 ಮಿಮೀ ಹೆಚ್ಚಳವಾಗಿದೆ.

Weather Report: ಸ್ವಲ್ಪ ಬಿಸಿಲು, ಹೆಚ್ಚು ಮಳೆ; ಇದು ಮುಂದಿನ 4 ದಿನದ ಮಳೆ ರಿಪೋರ್ಟ್‌!

ರಾಜ್ಯದಲ್ಲಿ ಮಳೆ ಅಸ್ಥಿರತೆ ಮುಂದುವರಿದಿದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹವಾಮಾನ ಇರಲಿದ್ದರೂ ಸಂಜೆ ವೇಳೆಗೆ ಹಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ. ಇನ್ನೂ 4 ದಿನಗಳ ಕಾಲ ಭಾರಿ ಮಳೆ (Karnataka Rain) ಆಗಲಿದ್ದು, ದಕ್ಷಿಣ ಒಳನಾಡಿನಲ್ಲಿ ತುಸು ಹೆಚ್ಚಿಗೆ ಇರಲಿದೆ ಎಂದು ಹೇಳಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಗುರುವಾರದಿಂದ (ಜೂನ್‌ 1) ಜೂನ್‌ 4ರ ವರೆಗೆ ಬಹುತೇಕ ಕಡೆ ಜೋರು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಜೂನ್‌ 2 ಮತ್ತು 3ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ಅಲ್ಲಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಆದರೆ, ಉತ್ತರ ಒಳನಾಡಿನಲ್ಲಿ ಕೆಲ ಕಡೆ ಮಾತ್ರ ಮಳೆ ಸುರಿಯಲಿದೆ. ಇನ್ನು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಗುರುವಾರ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ. ವಿದರ್ಭದಿಂದ ದಕ್ಷಿಣ ತಮಿಳುನಾಡಿನವರೆಗೆ ಟ್ರಫ್ ಮುಂದುವರಿಕೆಯಾಗುತ್ತಿದ್ದು, ಇದರಿಂದ ಮಳೆ ಪ್ರಮಾಣ ಇನ್ನೂ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚಲಿದೆ ಗಾಳಿ ವೇಗ

ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ. ವೇಗವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಭಾಗದ ಒಂದೆರಡು ಕಡೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಸಾಧ್ಯತೆ ಇದ್ದು, ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Rain News: ಹಾವೇರಿಯಲ್ಲಿ ಸಿಡಿಲಿಗೆ ಬಾಲಕ ಗಂಭೀರ; ಶಿವಮೊಗ್ಗ, ರಾಮನಗರ ಸೇರಿ ಹಲವೆಡೆ ಭಾರಿ ಹಾನಿ

ಒಳನಾಡು, ಕರಾವಳಿಗಳಲ್ಲಿ ಹೆಚ್ಚಲಿದೆ ಬಿಸಿಲು

ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನ ವಾತಾವರಣ ಹೀಗಿದೆ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಸಲ ಭಾರಿ ಬಿರುಗಾಳಿ ಸಹಿತ ಗುಡುಗಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Exit mobile version