ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳ ಹಗರಣದ ಪ್ರಕರಣವನ್ನು ಸಿಬಿಐಗೆ ವಹಿಸಲು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿರುವುದು ನಮ್ಮ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ, ಇದು ವಿಳಂಬವಾಗದೆ ಅತಿ ಶೀಘ್ರದಲ್ಲಿ ತನಿಖೆ ಪ್ರಾರಂಭವಾಗಬೇಕಾಗಿದೆ. ಜತೆಗೆ ಸಂತ್ರಸ್ತರಿಗೆ ಪರಿಹಾರ ಅತಿ ಶೀಘ್ರದಲ್ಲೇ ದೊರೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ದ ಸಹಕಾರಿ ಬ್ಯಾಂಕ್ ಹಗರಣ ಬೆಳಕಿಗೆ ಬಂದಾಗಿನಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮೊದಲು ಧ್ವನಿಯೆತ್ತಿದವನು ನಾನು. 3 ವರ್ಷಗಳ ಸತತ ಹೋರಾಟದ ಬಳಿಕ ಈಗ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗುತ್ತಿದೆ. ಇದು ಅತಿ ಶೀಘ್ರವಾಗಿ ನಡೆಯಬೇಕು, ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ಬರಬೇಕು ಎಂದು ಹೇಳಿದರು.
ಸರ್ಕಾರ ಬಹಳ ನಿಧಾನವಾಗಿ ಎಚ್ಚೆತ್ತುಕೊಂಡಿದೆ. ಸಹಕಾರಿ ಸಚಿವರು 10 ದಿನಗಳ ಹಿಂದೆಯಷ್ಟೇ ಸಿಬಿಐ ತನಿಖೆ ಬೇಕಾಗಿಲ್ಲ ಎಂದಿದ್ದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ಹಗರಣಗಳು, ಅವರಿಗೆ ಚುನಾವಣೆಯಲ್ಲಿ ಮುಳುವಾಗುತ್ತದೆ ಎಂಬ ಕಾರಣಕ್ಕೆ ಈಗ ಕ್ರಮ ಕೈಗೊಂಡಿದ್ದಾರೆ. ತಡವಾದರೂ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಆದರೆ, ನಾವು ಇದನ್ನು ನಿರಂತರವಾಗಿ ಗಮನಿಸುತ್ತಿರುತ್ತೇವೆ. ಚುನಾವಣೆಯ ಉದ್ದೇಶಕ್ಕಾಗಿ ಕಣ್ಣೊರೆಸುವ ಸಲುವಾಗಿ ಸಿಬಿಐಗೆ ಕೊಟ್ಟು ಸುಮ್ಮನಾಗುವುದು ಸರಿಯಲ್ಲ. ಸಂತ್ರಸ್ತರಿಗೆ ಪೂರ್ತಿಯಾದ ಪರಿಹಾರ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Karnataka Election : ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಎಲ್ಲ ಸಹಕಾರಿ ಬ್ಯಾಂಕ್ ಹಗರಣಗಳ ತನಿಖೆ ಸಿಬಿಐಗೆ ಒಪ್ಪಿಸಬೇಕು
ಸಹಕಾರಿ ಬ್ಯಾಂಕ್ ಹಗರಣಗಳ ಪಟ್ಟಿ ತುಂಬಾ ದೊಡ್ಡದಿದ್ದು, ಅದರಲ್ಲಿ 120 ಸೊಸೈಟಿ ಹಗರಣಗಳು ಸೇರಿಕೊಂಡಿವೆ. ಗುರು ರಾಘವೇಂದ್ರ ಬ್ಯಾಂಕ್ 2800 ಕೋಟಿ ರೂಪಾಯಿ ಹಗರಣ, ಗುರು ಸಾರ್ವಭೌಮ ಬ್ಯಾಂಕ್ 300 ಕೋಟಿ ರೂಪಾಯಿ ಹಗರಣ, ವಸಿಷ್ಠ ಸೊಸೈಟಿ 800 ಕೋಟಿ ರೂಪಾಯಿ ಹಗರಣ, ಕಣ್ವ ಸೊಸೈಟಿ ಸುಮಾರು 2000 ಕೋಟಿ ರೂಪಾಯಿ ಹಗರಣ, ನಾಗರತ್ನ ಸೊಸೈಟಿ 150 ಕೋಟಿ ರೂಪಾಯಿ ಹಗರಣ, ಮಹಾಗಣಪತಿ ಸೊಸೈಟಿ 40 ಕೋಟಿ ರೂಪಾಯಿ ಹಗರಣ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವೆಲ್ಲದರ ಸಮಗ್ರ ತನಿಖೆ ನಡೆಯಬೇಕಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಕೋ-ಆಪರೇಟಿವ್ ಹಗರಣಗಳಿಂದಾದ ನಷ್ಟ 25000 ಕೋಟಿ ರೂ.ಗಳಾಗಿದ್ದು, 1.8 ಕೋಟಿ ಜನ ಸಂತ್ರಸ್ತರಿದ್ದಾರೆ. ಅಂದರೆ ಸಹಕಾರಿ ಬ್ಯಾಂಕ್ ಹಗರಣಗಳಿಂದ ರಾಜ್ಯದಲ್ಲಿ ಪ್ರತಿ ಮೂವರ ಪೈಕಿ ಒಬ್ಬರಿಗೆ ಅನ್ಯಾಯವಾಗಿದೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ಹೇಳಿದರು.
ವಸಿಷ್ಠ ಸೊಸೈಟಿಯ ಹಗರಣದ ತನಿಖೆಯ ವಿಚಾರವಾಗಿ ಸೌಹಾರ್ದ ಫೆಡರೇಶನ್‌ನಿಂದ ಬಹಳ ನಿರ್ಲಕ್ಷ್ಯವಾಗಿದೆ. ಕಣ್ವ ಸೊಸೈಟಿ ಹಗರಣ ಅಷ್ಟು ದೊಡ್ಡದಾಗಿದ್ದರೂ ಅದರ ಬಗ್ಗೆ ಯಾರು ಮಾತನಾಡುತ್ತಿಲ್ಲ, ಇವೆಲ್ಲದರ ತನಿಖೆಯನ್ನು ಸಿಬಿಐಗೆ ಕೊಡಲೇಬೇಕು. ಸಂಪುಟದಲ್ಲಿ ಈ ಕುರಿತು ತೀರ್ಮಾನ ಆಗದೆ ಹೋದರೆ ಮುಂದಿನ ದಿನಗಳಲ್ಲಿ ನಾವು ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಶಾಸಕ ಮತ್ತು ಸಂಸದರ ವೈಫಲ್ಯ
ನಾವು ಠೇವಣಿದಾರರ ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ, ಆ ಮೂಲಕ ಈ ಹಗರಣದ ತನಿಖೆಯನ್ನು ಸಿಬಿಐ ಒಪ್ಪಿಸಲು ಪತ್ರ ಚಳವಳಿ ಸೇರಿ ಹಲವು ರೀತಿಯ ಹೋರಾಟ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಇದರಿಂದ ಹಗರಣದ ರೂವಾರಿಗಳಾದ ರಾಮಕೃಷ್ಣ ಮತ್ತು ವೆಂಕಟೇಶ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಚಿಕ್ಕಪ್ಪ ಶಾಸಕ ರವಿ ಸುಬ್ರಮಣ್ಯ ಅವರು, ಸಹಕಾರಿ ಬ್ಯಾಂಕ್ ಹಗರಣಗಳ ವಿಷಯವನ್ನು ನಿರ್ವಹಿಸುವಲ್ಲಿ ಪೂರ್ತಿಯಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡುವುದು ಇವರ ಗುರಿಯಾಗಿರಲಿಲ್ಲ, ಅದರ ಬದಲಾಗಿ ಬೇರೆಯವರನ್ನು ಕಾಪಾಡಲು ನೋಡುತ್ತಿದ್ದರೋ ಅಥವಾ ಅವರನ್ನು ಅವರೇ ಕಾಪಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದನ್ನು ನೋಡಿದರೆ ಇವರಿಗೆ ಇದರಿಂದ ಗಾಬರಿಯಾಗಿರಬೇಕು ಎಂದು ತೋರುತ್ತದೆ. ತೇಜಸ್ವಿ ಸೂರ್ಯರವರಿಗೆ ಈ ಹಗರಣದ ರೂವಾರಿಗಳಾಗಿದ್ದ ರಾಮಕೃಷ್ಣ ಮತ್ತು ವೆಂಕಟೇಶ್ ಅವರು ಚುನಾವಣಾ ಪ್ರಚಾರ ಮಾಡುವಲ್ಲಿ ಸಹಕರಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಅನೇಕ ಅನುಮಾನಗಳು ಮೂಡಿವೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ಹೇಳಿದರು.
ಸಂತ್ರಸ್ತರಿಗೆ ಪೂರ್ತಿಯಾಗಿ ಪರಿಹಾರ ದೊರೆಯಬೇಕು
ಸಂತ್ರಸ್ತರಲ್ಲಿ ಹಲವರು ವಯಸ್ಸಾದವರು ಮತ್ತು ಹಲವರು ಕಾಯಿಲೆಗೆ ಒಳಪಟ್ಟವರು ಇದ್ದು, ಕಷ್ಟಕಾಲದಲ್ಲಿ ತಮ್ಮ ನೆರವಿಗೆ ಬರಬಹುದೆಂದು ಬ್ಯಾಂಕಿನಲ್ಲಿ ಇಟ್ಟ ತಮ್ಮದೇ ಹಣಕ್ಕಾಗಿ ಹಗಲಿರಳು ಪರಿತಪಿಸುತ್ತಿದ್ದಾರೆ. ಅಲ್ಲದೇ
ಸಂತ್ರಸ್ತ ಠೇವಣಿದಾರರು ಮತ್ತು ಷೇರುದಾರರಲ್ಲಿ ಈಗಾಗಲೇ 150 ಜನ ತೀರಿಕೊಂಡಿದ್ದಾರೆ. ಹೀಗಾಗಿ ಇನ್ನೂ ವಿಳಂಬವಾಗುವುದು ಸರಿಯಲ್ಲ. ಡಿಐಸಿಜಿಸಿ ವಿಮೆಯ ಹಣ ಕೆಲವರಿಗೆ ದೊರಕಿದ್ದು ಬಿಟ್ಟರೆ, ಇನ್ನೂ ಶೇ. 90ಕ್ಕಿಂತಲೂ ಹೆಚ್ಚು ಪರಿಹಾರ ಬರಬೇಕಾಗಿದೆ. ಇದರ ಜತೆ ವಿಶ್ವ ಭಾರತಿ ಹೌಸಿಂಗ್ ಸೊಸೈಟಿಯ ಹಗರಣ ಕುರಿತಾಗಿಯೂ ಸದ್ಯದಲ್ಲೇ ಸಭೆ ಸೇರಿ ಆ ಕುರಿತು ಮಾಹಿತಿಯನ್ನು ತಿಳಿಸಲಾಗುವುದು. ಇದು ಬಹಳ ಹಳೆಯ ಹಗರಣವಾಗಿದ್ದು, ಅದರ ತನಿಖೆಯು ಕೂಡ ಶೀಘ್ರದಲ್ಲೇ ಪ್ರಾರಂಭವಾಗಬೇಕಾಗಿದೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Siddaramaiah : ಆಡಳಿತಾತ್ಮಕವಾಗಿ ದೇಶವನ್ನು ಸೋಲಿಸಿದ್ದಾರೆ ಮೋದಿ : ಸಿದ್ದರಾಮಯ್ಯ ಆಕ್ರೋಶ