ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸುಳ್ಳು ನೆಪ ಹೇಳುವುದನ್ನು ಬಿಟ್ಟು ಗುರುರಾಘವೇಂದ್ರ ಬ್ಯಾಂಕ್ ಸಹಿತ ವಿವಿಧ ಸಹಕಾರಿ ಬ್ಯಾಂಕ್ ಹಗರಣಗಳ (Bank fraud) ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಹಕಾರಿ ಬ್ಯಾಂಕ್‌ಗಳ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಕೊಡಿಸಿ ಎಂದು ವಿವಿಧ ರೀತಿಯಲ್ಲಿ ಒತ್ತಾಯಿಸುತ್ತ ಬಂದರೂ ಸರ್ಕಾರ ಕಿವಿಗೊಡುತ್ತಿಲ್ಲ. ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮತ್ತು ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಅವರಿಗೆ ಎಲ್ಲ ವಿಚಾರ ಗೊತ್ತಿದ್ದರೂ ಈ ಬಗ್ಗೆ ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಇವರೆಲ್ಲರೂ ಸೇರಿ ಯಾರನ್ನು ಕಾಪಾಡಲು ನೋಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಗುರುರಾಘವೇಂದ್ರ ಬ್ಯಾಂಕ್ ಹಗರಣದ ಬಗ್ಗೆ ಚರ್ಚೆ ನಡೆದಾಗ, ಸಹಕಾರಿ ಸಚಿವರು ಸರಿಯಾದ ಮಾಹಿತಿ ನೀಡದೆ ಜಾರಿಕೊಂಡಿದ್ದಾರೆ. ನೀವು ಬಡವರ ಪರವಾಗಿದ್ದರೇ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ ಎಂದು ಬಿ.ಕೆ.ಹರಿಪಸ್ರಾದ್ ಅವರು ಕೇಳಿದ್ದಕ್ಕೆ, ಸಚಿವ ಸೋಮಶೇಖರ್ ಅವರು ಸಿಬಿಐಗೆ ಕೊಡಲು ಅಭ್ಯಂತರವಿಲ್ಲ, ಆದರೆ ತಡವಾಗುತ್ತದೆ ಎಂದು ಹೇಳಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ʼಮಹಾʼ ಉದ್ಧಟತನಕ್ಕೆ ಒಕ್ಕೊರಲ ಖಂಡನೆ; ಒಂದಿಂಚು ಭೂಮಿಯನ್ನೂ ಬಿಡೆವು ಎಂದ ಕರ್ನಾಟಕ
ನಮ್ಮ ಸಿಐಡಿಯವರೇ ತನಿಖೆ ನಡೆಸಲು ಸಮರ್ಥವಾಗಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆ ಸಿಬಿಐಗೆ ಕೊಡಲು ಆಗಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ, ಸತ್ಯ ಏನೆಂದರೆ ಈವರೆಗೂ ಸಹಕಾರಿ ಸಂಸ್ಥೆಗಳ ಹಗರಣಗಳ ಕುರಿತು 22 ಕೇಸ್‌ಗಳನ್ನು ಸಿಐಡಿಗೆ ವಹಿಸಿದ್ದು, ಒಂದು ಕೂಡ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. 850 ಸಹಕಾರಿ ಸಂಸ್ಥೆಗಳ ಅವ್ಯವಹಾರ ಕುರಿತು ಯಾವುದೇ ರೀತಿಯಾದ ನ್ಯಾಯ ದೊರಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸುಮಾರು 20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ಹಗರಣದಲ್ಲಿ ಬಿಜೆಪಿಯವರು ಭಾಗಿಯಾಗಿರುವ ಕಾರಣಕ್ಕೆ ತನಿಖೆ ವಿಳಂಬವಾಗುತ್ತಿದೆ ಎಂಬ ಪಿ.ಆರ್. ರಮೇಶ್ ಅವರ ಪ್ರಶ್ನೆಗೆ ಸಚಿವರು, ಇದರಲ್ಲಿ ರಾಜಕಾರಣ ಮಾಡುವುದು ಬೇಡ ಎಂಬ ಉತ್ತರ ನೀಡಿದ್ದಾರೆ. ಅದೇ ರೀತಿ ಹಗರಣದ ತನಿಖೆಯ ಬಗ್ಗೆ ಇಲ್ಲಿಯವರೆಗೂ ಯಾವುದೇ ಪ್ರಗತಿ ಆಗಿಲ್ಲ. ಅತ್ಯಂತ ಹೆಚ್ಚಿನ ಸಾಲ ಪಡೆದ 24 ಜನರ ಹೆಸರು ಪ್ರಕಟಿಸುವಂತೆ ಕೇಳಿದರೂ ಪ್ರಕಟಿಸಿಲ್ಲ. ಸಿಐಡಿ ತನಿಖೆ ಏನಾಯ್ತು? ಲೆಕ್ಕಪರಿಶೋಧಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಇಡಿಯವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳುತ್ತಾರೆ, ಏನು ಪ್ರಗತಿ ಆಗಿದೆ ಎಂದು ಯು.ಬಿ.ವೆಂಕಟೇಶ್ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೂ ಸಚಿವರು ಸಮಂಜಸ ಉತ್ತರ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಪಿ.ಆರ್. ರಮೇಶ್ ಮತ್ತು ಯು.ಬಿ.ವೆಂಕಟೇಶ್ ಅವರ ಪ್ರಶ್ನೆ ಕೇಳಿದಾಗ 1294 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಆಡಿಟ್ ರಿಪೋರ್ಟ್ ಕೊಟ್ಟಿದ್ದಾರೆ. ಎಫ್‌ಐಆರ್ ಆಗಿದೆ. 819 ಕೋಟಿ ರೋಪಾಯಿ ಸಾಲ ಪಡೆದವನ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. 1194 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಐಡಿ, ಇಡಿ ಸೂಚನೆ ನೀಡಿದೆ. ಹರಾಜು ಹಾಕಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತಾಗಿದ್ದು, ಜಾರಿಕೊಳ್ಳುವ ಉತ್ತರವಾಗಿದೆ. ಅದೇನೇ ಇರಲಿ ತನಿಖೆಯನ್ನು ಸಿಬಿಐಗೆ ವಹಿಸಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಿ, ಸಂತ್ರಸ್ತರಿಗೆ ಹಣ ವಾಪಸ್ ಸಿಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದ್ದಾರೆ.