ಬೆಂಗಳೂರು: ಸಹಕಾರಿ ಬ್ಯಾಂಕ್ ಹಗರಣಗಳ (Bank Fraud) ಬಗ್ಗೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ನಡೆಸುವ ಸಭೆಗೆ ಸಹಕಾರಿ ಬ್ಯಾಂಕುಗಳ ಠೇವಣಿದಾರರು ಮತ್ತು ಷೇರುದಾರರ ವಿವಿಧ ಅಸೋಸಿಯೇಷನ್‌ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಕರೆಯಬೇಕು ಎಂದು ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಮುಖ್ಯ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಮನವಿ ಮಾಡಿದ್ದಾರೆ.
ಸಹಕಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸದನದಲ್ಲಿ ಹೇಳಿರುವಂತೆ ಜನವರಿ 17ರಂದು ಗುರುರಾಘವೇಂದ್ರ ಬ್ಯಾಂಕ್ ಮತ್ತು ವಸಿಷ್ಠ ಸೊಸೈಟಿ ಹಗರಣ ಸಂಬಂಧ ಸಭೆಯನ್ನು ಕರೆದಿದ್ದಾರೆ. ನಾವು ಇದನ್ನು ಸ್ವಾಗತಿಸುತ್ತೇವೆ. ಆದರೆ, ರಾಜ್ಯದಲಲಿ ಬರೀ ಎರಡೇ ಬ್ಯಾಂಕಿಂಗ್ ಹಗರಣಗಳು ನಡೆದಿಲ್ಲ. ಗುರುರಾಘವೇಂದ್ರ ಬ್ಯಾಂಕ್ ಹಗರಣದ ಜತೆ ಇನ್ನೂ 120 ಸೊಸೈಟಿ ಹಗರಣಗಳು ಸೇರಿಕೊಂಡಿವೆ. ಅದರಲ್ಲಿ ಕಣ್ವ ಸೊಸೈಟಿ ಹಗರಣ ಬಹಳ ದೊಡ್ಡದಿದೆ. ಅದಲ್ಲದೇ ನಾಗರತ್ನ ಸೊಸೈಟಿ, ಮಹಾಗಣಪತಿ ಸೊಸೈಟಿಗಳಲ್ಲಿ ದೊಡ್ಡ ದೊಡ್ಡ ಹಗರಣ ನಡೆದಿದೆ. ಇವುಗಳ ಬಗ್ಗೆಯೂ ಚರ್ಚೆಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | IT Raid : ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು ಆಪ್ತರಿಗೆ ಐಟಿ ಶಾಕ್; 2 ದಿನದಿಂದ ಪರಿಶೀಲನೆ
ಸಚಿವರಲ್ಲಿ ಮುಖ್ಯವಾಗಿ ಮನವಿ ಮಾಡುತ್ತಿರುವುದೇನೆಂದರೆ ಸಭೆಯು ಕೇವಲ ನಾಲ್ಕು ಗೋಡೆಗಳ ಮಧ್ಯೆ ತಮ್ಮ ತಮ್ಮವರ ನಡುವೆಯೇ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಠೇವಣಿದಾರರು ಮತ್ತು ಷೇರುದಾರರನ್ನು ದೂರವಿಟ್ಟು ಸಭೆಯನ್ನು ನಡೆಸಿದರೆ ಆ ಸಭೆಗೆ ಯಾವುದೇ ಅರ್ಥವಿಲ್ಲ. ಗುರುರಾಘವೇಂದ್ರ ಬ್ಯಾಂಕ್‌ಗೆ ಸಂಬಂಧಿಸಿದಂತೆ ಮೂರರಿಂದ ನಾಲ್ಕು ಠೇವಣಿದಾರರ ಸಂಘಟನೆಗಳಿದೆ. ವಸಿಷ್ಠ ಸೊಸೈಟಿಯಲ್ಲಿಯೂ ಠೇವಣಿದಾರರ ಸಂಘಟನೆ ಇದೆ. ಈ ಎಲ್ಲಾ ಅಸೋಸಿಯೇಷನ್‌ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಕಡ್ಡಾಯವಾಗಿ ಸಭೆಗೆ ಕರೆಯಲೇಬೇಕು ಎಂದು ಕೋರಿದ್ದಾರೆ.
ಮುಚ್ಚಿದ ಬಾಗಿಲಿನ ಒಳಗೆ ನೀವುಗಳೇ ಒಂದಿಷ್ಟು ಜನ ಸೇರಿ ಸಭೆ ನಡೆಸುತ್ತೀರಿ ಎಂದರೆ ಅದರ ಅರ್ಥ ನೀವು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ ಎಂಬುದಾಗುತ್ತದೆ. ಏಕೆಂದರೆ ಹಗರಣದ ವಿಚಾರವಾಗಿ ಅಲ್ಲಿಂದ ಇಲ್ಲಿಯವರೆಗೆ ಠೇವಣಿದಾರರಿಗೆ ಗೊತ್ತಿರುವಷ್ಟು ಮಾಹಿತಿ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಆದ್ದರಿಂದ ಕಡ್ಡಾಯವಾಗಿ ಅವರನ್ನು ಸಭೆಗೆ ಕರೆಯಲೇಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Karnataka Election : ಬಿಜೆಪಿಗೆ ಬಹುಮತ ಬರಲ್ಲ; ಆದ್ರೆ ಸರ್ಕಾರ ಮಾಡೋದು ನಾವೇ: ಸಿಪಿವೈ ಆಡಿಯೊ ವೈರಲ್