Site icon Vistara News

Bank fraud | ವಸಿಷ್ಠ ಬ್ಯಾಂಕ್ ಹಗರಣದ ಕುರಿತು ಸಚಿವರು ತಪ್ಪು ಉತ್ತರ ಕೊಟ್ಟಿದ್ದಾರೆ: ಡಾ. ಶಂಕರ್ ಗುಹಾ ದ್ವಾರಕನಾಥ್

Bank fraud

ಬೆಂಗಳೂರು: ವಸಿಷ್ಠ ಬ್ಯಾಂಕ್ ಹಗರಣದ (Bank fraud) ಕುರಿತು ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸಹಕಾರಿ ಸಚಿವರು ತಪ್ಪು ಉತ್ತರವನ್ನು ಕೊಟ್ಟು ಜಾರಿಕೊಂಡಿದ್ದಾರೆ ಎಂದು ಗುರುರಾಘವೇಂದ್ರ ಬ್ಯಾಂಕಿನ ಠೇವಣಿದಾರರ ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ್ ಗುಹಾ ದ್ವಾರಕನಾಥ್ ಆರೋಪಿಸಿದ್ದಾರೆ.

ವಸಿಷ್ಠ ಸೊಸೈಟಿಯ ಹಗರಣದ ಬಗ್ಗೆ ಮೇಲ್ಮನೆ ಸದಸ್ಯ ಯು.ಬಿ.ವೆಂಕಟೇಶ್ ಅವರು ಕೇಳಿದ ಪ್ರಶ್ನೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕೊಟ್ಟಂತಹ ಉತ್ತರವನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಅವರಿಗೆ ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತೇ ಇಲ್ಲ ಅಥವಾ ಜನರೆಲ್ಲ ದಡ್ಡರು ಇವರಿಗೆ ಏನು ಬೇಕಾದರೂ ಸುಳ್ಳು ಹೇಳಬಹುದು ಎಂದುಕೊಂಡಿರಬಹುದು ಎಂದು ತೋರುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಚಿವರು ಹೇಳಿರುವಂತಹ ಉತ್ತರದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸಹಕಾರಿ ಸಚಿವರು ದಯವಿಟ್ಟು ಅವರ ಅಧಿಕಾರಿಗಳಿಂದ ಸರಿಯಾದ ಮಾಹಿತಿ ತೆಗೆದುಕೊಂಡು ಮಾತನಾಡುವುದು ಒಳ್ಳೆಯದು. ಏಕೆಂದರೆ ಅವರು ಹೇಳಿರುವ ಉತ್ತರದಲ್ಲಿ ಪ್ರತಿಯೊಂದು ಶಬ್ದವು ಸುಳ್ಳಿನಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಮರಾಠಾ ಮೀಸಲಾತಿಗಾಗಿ ಹೋರಾಟ: ಸರ್ಕಾರಕ್ಕೆ ಡಿ.30ರ ಗಡುವು ನೀಡಿದ ಹೋರಾಟಗಾರರು

ಈಗಾಗಲೇ ಸಾಲ ಪಡೆದವರು ಹಾಗೂ ಹಗರಣದ ರೂವಾರಿಗಳ ಹತ್ತು ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಇದನ್ನು ಪ್ರಾಧಿಕಾರದ ವ್ಯಾಪ್ತಿಗೆ ತಂದು ಪರಿಹಾರ ಒದಗಿಸುವ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಹಾಗಾದರೆ ಸಹಕಾರ ಸಚಿವರು ಉಲ್ಲೇಖಿಸಿರುವ ಆ 10 ಆಸ್ತಿಗಳು ಎಲ್ಲಿವೆ? ಏಕೆಂದರೆ ಇದುವರೆಗೆ ನ್ಯಾಯಾಲಯದಿಂದ ಒಂದೇ ಒಂದು ಆದೇಶವನ್ನು ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.

ಹಗರಣ ಸಂಬಂಧ ಪ್ರಾಧಿಕಾರ ರಚನೆ ಜತೆಗೆ ಸಿಐಡಿ ತನಿಖೆ ನಡೆಯುತ್ತಿದ್ದು, ಒಂದು ವೇಳೆ ವಿಫಲವಾದಲ್ಲಿ ಬೇರೆ ಕ್ರಮಕ್ಕೆ ಸರ್ಕಾರ ಸಿದ್ಧ ಎಂದಿದ್ದಾರೆ. ವಸಿಷ್ಠ ಹಗರಣದ ತನಿಖೆಗೆ ಗೊತ್ತುಪಡಿಸಿದ ಸಮರ್ಥ ಅಧಿಕಾರಿ ಯಾರು? ಅಲ್ಲದೆ, ವಸಿಷ್ಠ ಹಗರಣಕ್ಕೆ ಸಂಬಂಧಿಸಿದಂತೆ ಯಾವ ಎಸಿ ಮತ್ತು ತಹಸೀಲ್ದಾರ್ ಕಾನೂನು ಜಾರಿಗೊಳಿಸುತ್ತಿದ್ದಾರೆ? ಇಲ್ಲಿಯವರೆಗೆ ಯಾವುದೇ ಸಿಎ ನೇಮಕಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಸರ್ಕಾರಿ ಆದೇಶ ಇಲ್ಲ. ವಾಸ್ತವವಾಗಿ ವಸಿಷ್ಠ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನನ್ನು ಜಾರಿಗೊಳಿಸಲು ಸರ್ಕಾರವು ಇದುವರೆಗೆ ಒಬ್ಬನೇ ಒಬ್ಬ ಸಿಬ್ಬಂದಿಯನ್ನು ನೇಮಿಸಿಲ್ಲ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ KSS s-35 ವಿಚಾರಣೆಯನ್ನು ಪ್ರಾರಂಭಿಸದೆ, ಸಹಕಾರ ಸಚಿವರು ಯಾವ ಕಾನೂನು ಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ? ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದೇ ಒಂದು ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಸದೆ, ಸಹಕಾರ ಸಚಿವರು ಈ ರೀತಿ ಮಾತನಾಡುತ್ತಿರುವುದರ ಹಿನ್ನೆಲೆ ಏನು ಎಂದು ಪ್ರಶ್ನಿಸಿದ್ದಾರೆ.

ಇಂತಹ ಸುಳ್ಳುಗಳನ್ನು ಹೇಳಿ ಸಹಕಾರ ಸಚಿವರು, ಎಲ್ಲಾ ವಸಿಷ್ಠ ಬ್ಯಾಂಕ್ ಸಂತ್ರಸ್ತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಠೇವಣಿದಾರರು ಹಣವನ್ನು ಇಟ್ಟು ಕಳೆದುಕೊಂಡಿರುವುದು ಸುಳ್ಳಲ್ಲ. ಈ ವಿಷಯದಲ್ಲಿ ಯಾವುದೇ ರೀತಿಯ ಪರಿಹಾರ ಕೂಡ ಠೇವಣಿದಾರರಿಗಾಗಲೀ ಷೇರುದಾರರಾಗಲೀ ಬಂದಿಲ್ಲ. ಸಚಿವರೇ
ಈ ಹಗರಣದ ಅಪರಾಧಿಗಳನ್ನು ನೀವು ಕಾಪಾಡುತ್ತಿರುವುದು ಏಕೆ? ಯಾರನ್ನು ನೀವು ಕಾಪಾಡುತ್ತಿದ್ದೀರಿ? ಅಥವಾ ಯಾರು ನಿಮಗೆ ಒತ್ತಡ ಹಾಕುತ್ತಿದ್ದಾರೆ? ಎನ್ನುವುದನ್ನು ಹೇಳಿ, ಅದಾದರೂ ಸಾರ್ವಜನಿಕರಿಗೆ ಗೊತ್ತಾಗಲಿ ಎಂದು ಆಗ್ರಹಿಸಿದ್ದಾರೆ.

ಇದರಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರ ಬದ್ಧತೆ ಏನಿದೆ. ಗುರುರಾಘವೇಂದ್ರ ಬ್ಯಾಂಕ್ ಮತ್ತು ವಸಿಷ್ಠ ಬ್ಯಾಂಕಿನ ಎಲ್ಲಾ ಸಭೆಯಲ್ಲೂ ಇವರು ಇರುತ್ತಾರೆ. ಹಾಗಿದ್ದಲ್ಲಿ ಅವರು ಏಕೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ? ಶಾಸಕರಾಗಿ, ಸಂಸದರಾಗಿ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಏಕೆ? ಯಾಕೆ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗುತ್ತಿಲ್ಲ? ಇದು ಖಾಸಗಿ ಪ್ರಕರಣವೇ? ಜನಪ್ರತಿನಿಧಿಗಳಿಗೆ ಈ ಬಗ್ಗೆ ಜವಾಬ್ದಾರಿ ಬೇಡವೇ? ಇದರಲ್ಲಿ ನೀವು ಯಾರನ್ನೋ ಕಾಪಾಡುತ್ತಿದ್ದೀರಿ ಎನ್ನುವುದು ಸ್ಪಷ್ಟವಾಗುತ್ತಿದೆ. ಅದು ಯಾರು ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗವಾಗಿ ಹೇಳಿ ಎಂದು ಒತ್ತಾಯಿಸಿದ್ದಾರೆ.

ಸಹಕಾರಿ ಸಚಿವರೇ ತಾವೊಬ್ಬ ಹಿರಿಯ ಮಂತ್ರಿಗಳಾಗಿ, ಹಿರಿಯ ಶಾಸಕರಾಗಿ ದಯವಿಟ್ಟು ಜವಾಬ್ದಾರಿಯನ್ನು ತೆಗೆದುಕೊಂಡು ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಸರಿಯಾದ ತನಿಖೆಯನ್ನು ನಡೆಸಿ. ಠೇವಣಿದಾರರಿಗೆ ಮತ್ತು ಷೇರುದಾರರಿಗೆ ಅವರು ಕಳೆದುಕೊಂಡಿರುವಂತಹ ಹಣವನ್ನು ಹಿಂತಿರುಗಿಸಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸದೇ ಇದ್ದಲ್ಲಿ ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ವಸಿಷ್ಠ ಸಹಕಾರ ಸಂಘ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಲು ಕಾಂಗ್ರೆಸ್‌ ಒತ್ತಾಯ

Exit mobile version