ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಹಗರಣ ಸೇರಿದಂತೆ ಸಹಕಾರಿ ಬ್ಯಾಂಕುಗಳಲ್ಲಿ ನಡೆದ ಎಲ್ಲ ಹಗರಣಗಳ ತನಿಖೆಯನ್ನು (Bank Fraud) ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಮತ್ತು ಕೆಪಿಸಿಸಿ ವಕ್ತಾರ, ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಶುಕ್ರವಾರ ವಿಧಾನಸೌಧದ ಮುಂದೆ ಮೌನ ಪ್ರತಿಭಟನೆ ನಡೆಸಿದ್ದಾರೆ.
ಶುಕ್ರವಾರ ಸಂಜೆ ಸಚಿವ ಸಂಪುಟದ ಸಭೆ ಆರಂಭವಾಗುವುದಕ್ಕೂ ಮೊದಲು ವಿಧಾನಸೌಧದ ಮುಂದಿನ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದರಿನ ಪುಟ್ ಪಾತ್ ನಲ್ಲಿ ಇಬ್ಬರೇ ಪೊಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿಯೇ ಈ ಹಗರಣಗಳ ಕುರಿತು ಸಿಬಿಐ ತನಿಖೆಗೆ ಒಪ್ಪಿಸುವ ತೀರ್ಮಾನ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಹಗರಣ ಬೆಳಕಿಗೆ ಬಂದು ಮೂರು ವರ್ಷಗಳಾದರೂ ವಂಚನೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ವಂಚನೆಗೊಳಗಾದ ಷೇರುದಾರರಿಗೆ ಮತ್ತು ಠೇವಣಿದಾರರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಸಹಕಾರಿ ಸಚಿವರು ಈ ಹಿಂದೆ ಪ್ರಕಟಿಸಿದಂತೆ ಈ ಕೂಡಲೇ ಈ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಇವರಿಬ್ಬರು ಆಗ್ರಹಿಸಿದರು.
ಶ್ರೀ ಗುರು ರಾಘವೇಂದ್ರ ಬ್ಯಾಂಕ್, ವಸಿಷ್ಠ ಸೌಹಾರ್ದ, ಗುರುಸಾರ್ವಭೌಮ ಸೊಸೈಟಿ, ಕಣ್ವ ಸೊಸೈಟಿ, ನಾಗರತ್ನ ಬ್ಯಾಂಕ್ ಹಾಗೂ ಇನ್ನುಳಿದ ಎಲ್ಲಾ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ಬರಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ, ʻವಿಸ್ತಾರ ನ್ಯೂಸ್ʼ ನೊಂದಿಗೆ ಮಾತನಾಡಿದ ಡಾ. ಶಂಕರ ಗುಹಾ ದ್ವಾರಕಾನಾಥ್, ಗುರು ರಾಘವೇಂದ್ರ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಮೂರು ವರ್ಷ ಕಳೆದಿದೆ. ಆದರೆ ಈ ಬಗ್ಗೆ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸುಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳಿಂದ ಹಿಡಿದು ಪ್ರಧಾನಿಯವರೆಗೆ ಈ ಸಂಬಂಧ ಮನವಿ ಸಲ್ಲಿಸಿದ್ದೇವೆ. ಆದರೆ ಸರ್ಕಾರ ಮನಸ್ಸೇ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಅವರು, ಈ ವಂಚನೆಯಿಂದ ಅಘಾತಕ್ಕೊಳಗಾದ ಸುಮಾರು 150 ಮಂದಿ ಸಂತ್ರಸ್ತ ಠೇವಣಿದಾರರು ಮತ್ತು ಷೇರುದಾರರು ತೀರಿಕೊಂಡಿದ್ದಾರೆ. ಅವರಿಗೆಲ್ಲ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಹಕಾರಿ ಬ್ಯಾಂಕ್ ಹಗರಣಗಳ ಪಟ್ಟಿ ತುಂಬಾ ದೊಡ್ಡದಿದ್ದು, ಅದರಲ್ಲಿ 120 ಸೊಸೈಟಿ ಹಗರಣಗಳು ಸೇರಿಕೊಂಡಿವೆ. ಗುರು ರಾಘವೇಂದ್ರ ಬ್ಯಾಂಕ್ 2800 ಕೋಟಿ ರೂಪಾಯಿ ಹಗರಣ, ಗುರು ಸಾರ್ವಭೌಮ ಬ್ಯಾಂಕ್ 300 ಕೋಟಿ ರೂಪಾಯಿ ಹಗರಣ, ವಸಿಷ್ಠ ಸೊಸೈಟಿ 800 ಕೋಟಿ ರೂಪಾಯಿ ಹಗರಣ, ಕಣ್ವ ಸೊಸೈಟಿ ಸುಮಾರು 2000 ಕೋಟಿ ರೂಪಾಯಿ ಹಗರಣ, ನಾಗರತ್ನ ಸೊಸೈಟಿ 150 ಕೋಟಿ ರೂಪಾಯಿ ಹಗರಣ, ಮಹಾಗಣಪತಿ ಸೊಸೈಟಿ 40 ಕೋಟಿ ರೂಪಾಯಿ ಹಗರಣ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವೆಲ್ಲದರ ಸಮಗ್ರ ತನಿಖೆ ನಡೆಯಬೇಕಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಕೋ-ಆಪರೇಟಿವ್ ಹಗರಣಗಳಿಂದಾದ ನಷ್ಟ 25000 ಕೋಟಿ ರೂ.ಗಳಾಗಿದ್ದು, 1.8 ಕೋಟಿ ಜನ ಸಂತ್ರಸ್ತರಿದ್ದಾರೆ. ಅಂದರೆ ಸಹಕಾರಿ ಬ್ಯಾಂಕ್ ಹಗರಣಗಳಿಂದ ರಾಜ್ಯದಲ್ಲಿ ಪ್ರತಿ ಮೂವರ ಪೈಕಿ ಒಬ್ಬರಿಗೆ ಅನ್ಯಾಯವಾಗಿದೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ವಿವರಿಸಿದರು.
ಇದನ್ನೂ ಓದಿ : Rahul Gandhi Disqualified: ರಾಹುಲ್ ಗಾಂಧಿ ಅನರ್ಹಕ್ಕೆ ಕನ್ನಡಿಗರೊಬ್ಬರೂ ಕಾರಣ, ಯಾರಿವರು?