ಶಿವಮೊಗ್ಗ: 1903ರಲ್ಲಿ ಪ್ರಾರಂಭಗೊಂಡ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2021-22ನೇ ಸಾಲಿನ ಅಂತ್ಯಕ್ಕೆ ಒಟ್ಟು ರೂ.31.14 ಕೋಟಿ ಲಾಭ ಗಳಿಸಿದೆ. ಈ ಪೈಕಿ ರೂ.8.15 ಕೋಟಿ ತೆರಿಗೆ ಪಾವತಿಸಿ, ನಿವ್ವಳ ರೂ. 22.99 ಕೋಟಿ ಲಾಭ ಪಡೆದಿದೆ. ಇದರೊಂದಿಗೆ ಬೆಂಗಳೂರು ವಿಭಾಗದಲ್ಲಿಯೇ ಅತಿ ಹೆಚ್ಚು ಲಾಭ ಗಳಿಸಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ ಹೇಳಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಮಾರ್ಚ್ 2022 ರ ಅಂತ್ಯಕ್ಕೆ ಬ್ಯಾಂಕ್ ರೂ. 1244.36 ಕೋಟಿ ಠೇವಣಿ ಸಂಗ್ರಹಿಸಿದೆ. ರೂ.129.50 ಕೋಟಿ ಷೇರು ಬಂಡವಾಳ ಹಾಗೂ ರೂ. 46.57 ಕೋಟಿ ನಿಧಿ ಡಿಸಿಯಲ್ಲಿದೆ ಎಂದರು.
2021-22 ನೇ ಸಾಲಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರು ಬ್ಯಾಂಕಿಗೆ ʻಎ” ಶ್ರೇಣಿ ನೀಡಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯ ಸಹಕಾರಿ, ಅಪೆಕ್ಸ್ ಬ್ಯಾಂಕ್ ಇವರು ಬ್ಯಾಂಕಿನ ಪರಿವೀಕ್ಷಣೆಯನ್ನು ನಡೆಸಿ ಸಾಧನೆಯನ್ನು ಪ್ರಶಂಸಿಸಿ ‘ಎ’ ಶ್ರೇಣಿಯನ್ನು ನೀಡಿದೆ. 2013 ರ ನಂತರ ಇದೇ ಮೊದಲ ಬಾರಿಗೆ ಬ್ಯಾಂಕು ತನ್ನ ಸದಸ್ಯರಿಗೆ ಷೇರು ಡಿವಿಡೆಂಡ್ ನೀಡುತ್ತಿದೆ. ಬ್ಯಾಂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚು ಶೇ. 6 ಡಿವಿಡೆಂಡನ್ನು ನೀಡಲು, ಬ್ಯಾಂಕಿನ ಆಡಳಿತ ಮಂಡಳಿ ಶಿಫಾರಸು ಮಾಡಿದ್ದು, ಸೆ. 1 ರಂದು ನಡೆಯುವ ಸರ್ವ ಸದಸ್ಯರ ಸಭೆಗೆ ಅನುಮೋದನೆಗಾಗಿ ಮಂಡಿಸಿದೆ ಎಂದರು.
೨೫೧೭ ಕೋಟಿ ರೂ. ವ್ಯವಹಾರ
ಬ್ಯಾಂಕು ಮಾರ್ಚ್ ಅಂತ್ಯಕ್ಕೆ ರೂ. 2517.30 ಕೋಟಿ ರೂ. ವ್ಯವಹಾರ ನಡೆಸಿದೆ. ಬ್ಯಾಂಕಿನಿಂದ 89945 ರೈತರಿಗೆ ಒಟ್ಟು ರೂ. 977.18 ಕೋಟಿ ಕೃಷಿ ಬೆಳೆ ಸಾಲ ಒದಗಿಸಿದೆ. ಈ ಮೂಲಕ ಬೆಂಗಳೂರು ವಿಭಾಗದಲ್ಲಿಯೇ ಅತಿ ಹೆಚ್ಚು ಕೃಷಿ ಸಾಲ ನೀಡಿದ ಬ್ಯಾಂಕ್ ಎಂಬ ಪ್ರಶಂಸೆಗೆ ಒಳಗಾಗಿದೆ. ಈ ಪೈಕಿ 6546 ಹೊಸ ರೈತರಿಗೆ ರೂ. 69 ಕೋಟಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ 9995 ರೈತ ಸದಸ್ಯರಿಗೆ ರೂ. 86.49 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ. ರೈತರಿಗೆ ರೂ.63.43 ಕೋಟಿ ಮಧ್ಯಮಾವಧಿ ಕೃಷಿ ಸಾಲ ಬ್ಯಾಂಕಿನಿಂದ ನೇರವಾಗಿ ನೀಡಲಾಗಿದೆ.
ಈವರೆಗೆ 7019 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ ಹಾಗೂ ಒಟ್ಟು 3052 ಗುಂಪುಗಳಿಗೆ ರೂ.101.22 ಕೋಟಿ ಸಾಲ ನೀಡಿದ್ದು, ವಸೂಲಾತಿ ಪ್ರಮಾಣ ಶೇ.99.00 ಆಗಿರುತ್ತದೆ. ಬ್ಯಾಂಕಿನಿಂದ ಒಟ್ಟಾರೆ ಕೃಷಿ ಮತ್ತು ಕೃಷಿಯೇತರ ಸಾಲ da.1403.40 ಕೋಟ ವಿತರಿಸಲಾಗಿದೆ ಎಂದರು.
ಮುಂಗಾರು ರೈತ ವಾಹನ ಉತ್ಸವ
ಬ್ಯಾಂಕಿನಿಂದ ಜಿಲ್ಲೆಯ ರೈತರಿಗೆ 4 ಚಕ್ರ ಹಾಗೂ ದ್ವಿಚಕ್ರ ವಾಹನ ಖರೀದಿಸಲು ರಿಯಾಯಿತಿ ಬಡ್ಡಿದರದಲ್ಲಿ ʻಮುಂಗಾರು ರೈತ ವಾಹನ ಉತ್ಸವʼ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ 696 ರೈತರಿಗೆ ರೂ 53.19 ಕೋಟಿ ಸಾಲವನ್ನು ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಈ ಯೋಜನೆಯನ್ನು ಜಾರಿಗೆ ತಂದಿದ್ದು ರೈತರ ಅಪೇಕ್ಷೆ ಮೇರೆಗೆ ಸದರಿ ಯೋಜನೆಯನ್ನು ದಸರಾ ಹಬ್ಬದವರೆಗೆ ಮುಂದುವರಿಸಲಾಗಿದೆ.
ಶೂನ್ಯ ಬಡ್ಡಿ ದರದಲ್ಲಿ ಹೈನುಗಾರಿಕೆ ಸಾಲ
ಕೇಂದ್ರ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘದ 1259 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ. ಹೈನುಗಾರಿಕೆ ಉದ್ದೇಶಕ್ಕಾಗಿ ರೂ. 194 ಕೋಟಿ ಸಾಲ ನೀಡಲಾಗಿದೆ. ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳನ್ನಾಗಿಯೂ ಮಾರ್ಪಡಿಸುವ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯು ಈಗಾಗಲೇ ಜಾರಿಯಲ್ಲಿದ್ದು, ಇದುವರೆಗೆ 37 ಪ್ರಸ್ತಾವನೆಗಳನ್ನು ಅಪೆಕ್ಸ್ ಬ್ಯಾಂಕ್ ಮೂಲಕ ನಬಾರ್ಡ್‌ಗೆ ಸಲ್ಲಿಸಲಾಗಿದೆ. ಈ ಪೈಕಿ ಈಗಾಗಲೇ 29 ಸಂಘಗಳಿಗೆ ರೂ. 14.54 ಕೋಟ ಮಂಜೂರಾಗಿರುತ್ತದೆ. ಸದರಿ ಮಂಜೂರಾತಿಯಲ್ಲಿ ಒಟ್ಟು 19 ಸಂಘಗಳಿಗೆ ಬ್ಯಾಂಕಿನಿಂದ ಸಾಲ ಬಿಡುಗಡೆಗೊಳಿಸಿ ಕಟ್ಟಡಗಳ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಎಂ.ಬಿ. ಚನ್ನವೀರಪ್ಪ ತಿಳಿಸಿದರು.
ಸಾಲ ವಸೂಲಾತಿಯಲ್ಲೂ ಮುಂದೆ
ಸಾಲ ವಸೂಲಾತಿಯಲ್ಲಿಯೂ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿದ್ದು ಮಾರ್ಚ್ ಅಂತ್ಯಕ್ಕೆ ಕೆ.ಸಿ.ಸಿ. ಬೆಳೆ ಸಾಲದ ವಸೂಲಾತಿ ಶೇ 99,32 ರಷ್ಟು ಹಾಗೂ ಒಟ್ಟಾರೆ ಕೃಷಿ ಸಾಲದಲ್ಲಿ ಶೇ.98.49 ಮತ್ತು ಕೃಷಿಯೇತರ ಸಾಲದಲ್ಲಿ ಶೇ.82.08 ಗಳಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು ಎಂ.ಬಿ. ಚನ್ನವೀರಪ್ಪ.
ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಮೆಷಿನ್ ಸೌಲಭ್ಯ ಒದಗಿಸಲಾಗುತ್ತಿದ್ದು ಪ್ರಾಯೋಗಿಕವಾಗಿ 120 ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆಯ್ಕೆ ಮಾಡಿ ಮೈಕ್ರೋ ಎಟಿಎಂ ಮೆಷಿನನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಾದ ಕೃಷಿ ಮಾರುಕಟ್ಟೆಯ ಮೂಲ ಸೌಕರ್ಯದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಚಟುವಟಿಕೆಗಳಿಗೆ ಬ್ಯಾಂಕಿನಿಂದ ಗರಿಷ್ಠ ಶೇ.9 ರ ಬಡ್ಡಿದರವನ್ನು ನಿಗದಿಪಡಿಸಬೇಕಾಗಿದ್ದು, ನಬಾರ್ಡ್‌ನಿಂದ ಶೇ.3ರ ಬಡ್ಡಿ ಸಹಾಯಧನದ ಸೌಲಭ್ಯ ನೀಡಲಿದ್ದಾರೆ. ಸಾಮಾನ್ಯ ವರ್ಗದ ಅರ್ಹ ರೈತರಿಗೆ ಸಾಲದ ಶೇ.25 ರಷ್ಟು ಹಾಗೂ ಪರಿಶಿಷ್ಟ ಜಾತಿ/ಪಂಗಡದ ಅರ್ಹ ರೈತರಿಗೆ ಸಾಲದ ಶೇ 33.33 ಸಹಾಯಧನ ಸಿಗಲಿದೆ ಎಂದು ಎಂ.ಬಿ. ಚನ್ನವೀರಪ್ಪ ಹೇಳಿದರು.
ಅಪಘಾತ ವಿಮಾ ಪರಿಹಾರ ಮೊತ್ತ ಹೆಚ್ಚಳ
ಕೆ.ಸಿ.ಸಿ ಬೆಳೆ ಸಾಲ ಪಡೆದ ಬ್ಯಾಂಕಿನ ರೈತರಿಗೆ ಕೆ.ಸಿ.ಸಿ ವೈಯುಕ್ತಿಕ ಅಪಘಾತ ವಿಮಾ ಪರಿಹಾರ ಮೊತ್ತವನ್ನು ರೂ.50,000/- ಗಳಿಂದ ರೂ.1,00,000ಕ್ಕೆ ಹೆಚ್ಚಿಸಲಾಗಿದೆ. ಬ್ಯಾಂಕಿನಿಂದ ಆರೋಗ್ಯ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸಿ, ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ರೂ.5.00 ಲಕ್ಷಗಳವರೆಗಿನ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವಾ ಸೌಲಭ್ಯ ಒದಗಿಸಲಾಗುವುದು. ಮೊಬೈಲ್ ಅಪ್ಲಿಕೇಷನ್ (MOBILE APP) ಮತ್ತು ಬಿ.ಬಿ.ಪಿ.ಎಸ್ ( ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್) ಸೌಲಭ್ಯ ಒದಗಿಸಲಾಗುವುದು. ಬ್ಯಾಂಕಿನಿಂದ ಬ್ಯುಸಿನೆಸ್ ಕರೆಸ್ಪಾಂಡೆಂಟ್ (BUSINESS CORRESPONDENT) ಗಳನ್ನು ನೇಮಕ ಮಾಡಿಕೊಂಡು, ರೈತರಿಗೆ ಹಾಗೂ ಸ್ವ-ಸಹಾಯ ಸಂಘದ ಸದಸ್ಯರ ಮನೆ ಬಾಗಿಲಿಗೆ ಸಾಲ ಸೌಲಭ್ಯ, ಬ್ಯಾಂಕಿಂಗ್ ಸವಲತ್ತುಗಳನ್ನು ನೀಡುವ ಯೋಜನೆ ಹಮ್ಮಿ ಕೊಳ್ಳಲಾಗಿದೆ ಎಂದು ವಿವರಿಸಿದರು ಎಂ.ಬಿ. ಚನ್ನವೀರಪ್ಪ.
೧೩೫೦ ಕೋಟಿ ರೂ. ಠೇವಣಿ ಸಂಗ್ರಹ ಗುರಿ
ಮುಂದಿನ ಸಾಲಿನಲ್ಲಿ ರೂ.1350.00 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಮಾರ್ಚ್-2023 ರ ಅಂತ್ಯಕ್ಕೆ ರೂ.30 ಕೋಟಿ ನಿವ್ವಳ ಲಾಭ ಗಳಿಸುವ ಯೋಜನೆ ಹೊಂದಲಾಗಿದೆ. ಕೇಂದ್ರ ಸರ್ಕಾರದ ಪ್ರಯೋಜಕತ್ವದಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮೂರು ಹಂತದಲ್ಲಿ ಏಕರೂಪ ತಂತ್ರಾಶದ ಯೋಜನೆಯಡಿಯಲ್ಲಿ ಗಣಕೀಕರಣ ಗೊಳಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರು, ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು.