Site icon Vistara News

Bannerghatta National Park : ಬೆಂಗಳೂರಿನ ರಾಷ್ಟ್ರೀಯ ಉದ್ಯಾನವನ ಅವಿಸ್ಮರಣೀಯ

Bannerghatta National Park

ಬೆಂಗಳೂರಿಗರಿಗೆ ಹೊರಗಡೆಯ ಊರಿಗೆ ಪ್ರವಾಸ ಹೋಗಬೇಕೆಂದರೆ ಕನಿಷ್ಠ ಎರಡರಿಂದ ಮೂರು ದಿನಗಳಾದರೂ ಬೇಕಾಗುತ್ತದೆ. ಆದರೆ ಒಂದೇ ದಿನದಲ್ಲಿ ಪ್ರವಾಸದ ಉಲ್ಲಾಸವನ್ನು ಪಡೆದುಕೊಳ್ಳಬೇಕು ಎನ್ನುವ ಮನಸ್ಸು ಹಲವರಿಗೆ ಇರುತ್ತದೆ. ಅದಕ್ಕೆಂದೇ ಬೆಂಗಳೂರಿನಲ್ಲಿ ಹಲವಾರು ತಾಣಗಳು ಇವೆ ಕೂಡ. ಅವುಗಳಲ್ಲಿ ಪ್ರಮುಖವಾದುದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(Bannerghatta National Park). ಈ ಉದ್ಯಾನವನದ ಕುರಿತಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರು ನಗರ ಮಧ್ಯದಿಂದ ಸುಮಾರು 22 ಕಿ.ಮೀ ದೂರದಲ್ಲಿ ಈ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವಿದೆ. ಇದು ವಿವಿಧ ರೀತಿಯ ಸಸ್ಯಗಳು, ಮರಗಳು, ಪ್ರಾಣಿ ಪಕ್ಷಿಗಳಿರುವ ಸ್ಥಳ. ಸುಮಾರು 104.27 ಚದರ ಕಿ.ಮೀ.ಗಳಷ್ಟು ವಿಸ್ತೀರ್ಣದಲ್ಲಿ ಈ ಉದ್ಯಾನವಿದೆ. ಇದನ್ನು 1971ರಲ್ಲಿ ಸ್ಥಾಪಿಸಲಾಯಿತು. ಇದು ದೇಶದ ಮೊದಲ ಚಿಟ್ಟೆ ಉದ್ಯಾನವನವೂ ಹೌದು.


ಬೆಂಗಳೂರು ಅರಣ್ಯ ವಿಭಾಗದ ಆನೇಕಲ್ ಶ್ರೇಣಿಯ ಹತ್ತು ಮೀಸಲು ಅರಣ್ಯಗಳು, ಅಕ್ವೇರಿಯಂ, ಮೃಗಾಲಯ, ಮಕ್ಕಳ ಉದ್ಯಾನವನ, ಮೊಸಳೆ ಫಾರ್ಮ್, ಸ್ನೇಕ್ ಪಾರ್ಕ್ ಇಲ್ಲಿನ ಆಕರ್ಷಣೆಗಳಾಗಿವೆ. ಇಲ್ಲಿ ಜಂಗಲ್‌ ಸಫಾರಿಯನ್ನೂ ಮಾಡಬಹುದಾಗಿದೆ.

ಜಂಗಲ್‌ ಸಫಾರಿ


ನೀವು ಈ ಉದ್ಯಾನವನದಲ್ಲಿ ಮಿಸ್‌ ಮಾಡಲೇಬಾರದ ಕೆಲಸವೆಂದರೆ ಜಂಗಲ್‌ ಸಫಾರಿಗೆ ಹೋಗುವುದು. ಸಫಾರಿ ಹೋಗುವ ಮೂಲಕ ನೀವು ಸಿಂಹ, ಹುಲಿಗಳನ್ನು ಪ್ರತ್ಯಕ್ಷವಾಗಿ ಕಾಣಬಹುದು. ಗ್ರ್ಯಾಂಡ್‌ ಸಫಾರಿಯು 8 ಕಿ.ಮೀ.ನದ್ದಾಗಿದ್ದರೆ, ಟೈಗರ್‌ ಮತ್ತು ಲಯನ್‌ ಸಫಾರಿ 11 ಕಿ.ಮೀ.ನದ್ದಾಗಿರುತ್ತದೆ. ವಾರಾಂತ್ಯದ ದಿನಗಳಲ್ಲಿ ಸಫಾರಿ ಟಿಕೆಟ್‌ಗಳು ಆದಷ್ಟು ಬೇಗ ಖಾಲಿಯಾಗುತ್ತವೆಯಾದ್ದರಿಂದ ಆದಷ್ಟು ಬೇಗ ಉದ್ಯಾನವನಕ್ಕೆ ಭೇಟಿ ಕೊಟ್ಟು ಟಿಕೆಟ್‌ ತೆಗೆದುಕೊಳ್ಳುವುದು ಒಳ್ಳೆಯದು.

ಹತ್ತಿರದಲ್ಲಿವೆ ರೆಸ್ಟೋರೆಂಟ್‌ಗಳು

ಈ ಉದ್ಯಾನವನಕ್ಕೆ ಹತ್ತಿರವಾಗಿ ಹಲವಾರು ರೆಸ್ಟೋರೆಂಟ್‌ಗಳಿವೆ. ಅವುಗಳಲ್ಲಿ ಕೆಲವೆಂದರೆ ಗರ್ಮಾ ಗರಂ, ನಾಗಾರ್ಜುನ, ಚುಂಗ್‌ ವಾ, ಸಿಂಪ್ಲಿ ಇಂಡಿಯನ್‌, ಸೀಸನ್ಸ್‌, ಚಾವಡಿ. ಇದಲ್ಲದೆಯೇ ಉದ್ಯಾನವನದ ಒಳಗಡೆಯೇ ಹಲವಾರು ಹೋಟೆಲ್‌ಗಳಿವೆ.

ಹತ್ತಿರದಲ್ಲಿನ ತಾಣಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಸುತ್ತಲೂ ಬೆಟ್ಟಗಳಿಂದ ಆವರಿಸಿದೆಯಾದ್ದರಿಂದ ನೀವು ಇಲ್ಲಿ ಅನೇಕ ತಾಣಗಳಿಗೆ ಭೇಟಿ ನೀಡಬಹುದು. ಟ್ರೆಕ್ಕಿಂಗ್‌ ಮಾಡುವುದಕ್ಕೂ ಕೂಡ ಅನೇಕ ಸ್ಥಳಗಳಿವೆ. ಅವುಗಳಲ್ಲಿ ಕೆಲವು 3.5 ಕಿ.ಮೀ ದೂರದಲ್ಲಿರುವ ಉದ್ದಿಗೆಬಂಡೆ, 3 ಕಿ.ಮೀ ದೂರದಲ್ಲಿರುವ ಹಜ್ಜಮನ ಕಲ್ಲು ಮತ್ತು 1.5 ಕಿಮೀ ದೂರದಲ್ಲಿರುವ ಮಿರ್ಜಾ ಬೆಟ್ಟವಾಗಿವೆ.

ಕೆಲವು ಸಲಹೆಗಳು

ಉದ್ಯಾನವನಕ್ಕೆ ತಲುಪಿದ ಮೇಲೆ ಕ್ಯಾಮೆರಾ ತೆಗೆದು ಸುಮ್ಮನೆ ಫೋಟೋ ಕ್ಲಿಕ್ಕಿಸಬೇಡಿ. ಇಲ್ಲಿ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದಕ್ಕೆ ಮತ್ತು ವಿಡಿಯೊ ಮಾಡುವುದಕ್ಕೆ ಶುಲ್ಕವಿದೆ. ಫೋಟೋಗಳಿಗೆ 25 ರೂ. ಹಾಗೂ ವಿಡಿಯೊಗೆ 200 ರೂ. ಶುಲ್ಕವಿರುತ್ತದೆ. ಮೊದಲೇ ಅದರ ಟಿಕೆಟ್‌ ಪಡೆದು ನಂತರ ಫೋಟೋ, ವಿಡಿಯೊ ತೆಗೆದುಕೊಳ್ಳಿ.
ಹಾಗೆಯೇ ಇದು ಸಂಪೂರ್ಣವಾಗಿ ಪ್ಲಾಸ್ಟಿಕ್‌ ಮುಕ್ತ ಪ್ರದೇಶವಾಗಿದೆ. ಹಾಗಾಗಿ ಪ್ಲಾಸ್ಟಿಕ್‌ ಅನ್ನು ಕೊಂಡೊಯ್ಯಬೇಡಿ.

ಹೋಗುವುದು ಹೇಗೆ?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಬೆಂಗಳೂರಿನಿಂದ ಸಾರ್ವಜನಿಕ ಸಾರಿಗೆ ಮೂಲಕ ಹೋಗಬಹುದು. ಮೆಜೆಸ್ಟಿಕ್‌ನಿಂದ ಪ್ರತಿ 20 ನಿಮಿಷಗಳಿಗೊಮ್ಮೆ ಇರುವ 365, 366 ಅಥವಾ G-4 ಬಸ್ಸನ್ನು ಬಳಸಿ ಬನ್ನೇರುಘಟ್ಟಕ್ಕೆ ಹೋಗಬಹುದು.

ಬನ್ನೇರುಘಟ್ಟ ಮೃಗಾಲಯದ ಸಮಯ

ಬಟರ್‌ಫ್ಲೈ ಪಾರ್ಕ್ ಮತ್ತು ಬೋಟಿಂಗ್: ಬೆಳಗ್ಗೆ 9:30 – ಸಂಜೆ 5:00
ಗ್ರ್ಯಾಂಡ್ ಸಫಾರಿ: ಬೆಳಗ್ಗೆ 10:00 – ಸಂಜೆ 4:30

(ಮಂಗಳವಾರದಂದು ಈ ಉದ್ಯಾನವನ ಮುಚ್ಚಿರುತ್ತದೆ)


ಪೂರ್ತಿ ಉದ್ಯಾನವನ ಸುತ್ತಾಡಲು ಬೇಕಾಗುವ ಸಮಯ: 5-6 ಗಂಟೆಗಳು

ಪ್ರವೇಶ ಶುಲ್ಕ

ವಯಸ್ಕರು: 80 ರೂ.
ಮಕ್ಕಳು (6 – 12 ವರ್ಷಗಳು): 40 ರೂ.
ಹಿರಿಯ ನಾಗರಿಕರು: 50 ರೂ.


ವಿದೇಶಿಯರು
ವಯಸ್ಕರು: 400 ರೂ.
ಮಕ್ಕಳು: 300 ರೂ.

Exit mobile version