ಬೆಂಗಳೂರು: ರಾಜ್ಯದಲ್ಲಿ ಕೆಲವು ವರ್ಷಗಳಿಂದ ಭಾರಿ ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯಗಳಲ್ಲಿ ಪಠ್ಯ ಪುಸ್ತಕ (Text Book) ಪರಿಷ್ಕರಣೆಯೂ ಒಂದು. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಗಿನ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರ ಆಗಿನ ಕೆಲವು ನಿರ್ಧಾರಗಳಿಗೆ ಭಾರಿ ವಿರೋಧ ವ್ಯಕ್ತವಾಗಿತ್ತಲ್ಲದೆ, ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿಯೂ ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಮೊದಲಿಗೆ ಬರಗೂರು ರಾಮಚಂದ್ರಪ್ಪ ಅವರನ್ನೇ ಸಂಪರ್ಕಿಸಿದೆ ಎಂದು ಹೇಳಲಾಗಿದ್ದು, ಅವರು ಪರಿಷ್ಕರಣೆ ಸಮಿತಿಯ ನೇತೃತ್ವ ವಹಿಸಲು ನಿರಾಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಲು ಒಪ್ಪಿಗೆ ನೀಡಿಲ್ಲ. ನನಗೆ ತಿಳಿದಂತೆ ಹೊಸ ಸಮಿತಿ ರಚನೆ ಆಗಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ವಿವಾದಗಳಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: Congress Guarantee: ಬಾಡಿಗೆಯವರಿಗೂ ಸಿಗುತ್ತೆ ಫ್ರೀ ಕರೆಂಟ್ ಎಂದ ಸರ್ಕಾರ: ಏನೇನು ದಾಖಲೆ ಬೇಕು? ಇಲ್ಲಿದೆ ವಿವರ
ಹೊಸ ಪಠ್ಯಕ್ರಮ ರಚನೆಗೆ ಸಮಿತಿ
ಈ ಹಿಂದಿನ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯಪುಸ್ತಕಕ್ಕೆ (Text Book) ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರ ವಹಿಸಿಕೊಂಡ ತಿಂಗಳೊಳಗೇ ಪಠ್ಯ ಬದಲಾವಣೆ ಬಗ್ಗೆ ಮಾತನಾಡಿದ್ದಲ್ಲದೆ, ಆ ನಿಟ್ಟಿನಲ್ಲಿ ಕ್ರಮಕ್ಕೂ ಮುಂದಾಗಿದೆ. ಈಗ ಹೊಸ ಪಠ್ಯಕ್ರಮ ರಚಿಸಲು ಸಮಿತಿ ರಚಿಸಲು ಸೂಚನೆ ನೀಡಿರುವ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಸರ್ಕಾರವು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇರಿಸಿದ್ದ ಕೆಲ ಅಧ್ಯಾಯಗಳಿಗೆ ಕೊಕ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಬೋಧನೆ ಮತ್ತು ಮೌಲ್ಯ ಮಾಪನದಿಂದ ಪಠ್ಯವನ್ನು ಕೈಬಿಡಲು ನಿರ್ಧಾರ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಂದ ಶಿಕ್ಷಣ ಇಲಾಖೆಗೆ ಸೂಚನೆ ಹೋಗಿದೆ ಎಂದು ತಿಳಿದು ಬಂದಿದೆ.
ನಿರಂಜನಾರಾಧ್ಯ ನೇತೃತ್ವದ ಸಮಿತಿ?
ಸಾಹಿತಿ ನಿರಂಜನಾರಾಧ್ಯ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇರಿಸಿದ್ದ ಹೊಸ ಅಧ್ಯಾಯಗಳನ್ನು ತೆಗೆಯುವಂತೆ ಈ ಹಿಂದೆ ಕೆಲವು ಸಾಹಿತಿಗಳು ಮನವಿ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇದರ ಭಾಗವಾಗಿ ಈಗ ಸಿಎಂ ಸೂಚನೆಯನ್ನು ನೀಡಿದ್ದು, ಈ ನಿಟ್ಟಿನಲ್ಲಿ ಸಮಿತಿಯನ್ನು ರಚನೆ ಮಾಡಲಾಗುತ್ತಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಕೆಲ ಅಧ್ಯಾಯಗಳನ್ನು ಅಧ್ಯಯನ ಮತ್ತು ಮೌಲ್ಯ ಮಾಪನದಿಂದ ಕೈಬಿಡುವುದು. ಮುಂದಿನ ವರ್ಷದಿಂದ ಪಠ್ಯಕ್ರಮ ರಚಿಸಲು ಸಮಿತಿ ರಚಿಸಲು ಮಂಗಳವಾರ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ನಿರಾಂಜನಾರಾಧ್ಯ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡುವ ಸಾಧ್ಯತೆ ಇದ್ದು, ಇವರು ಪಠ್ಯ ಹೇಗಿರಬೇಕು? ಯಾವ ಅಧ್ಯಾಯಗಳನ್ನು ತೆಗೆಯಬೇಕು? ಯಾವುದನ್ನು ಸೇರಿಸಬೇಕು? ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
ಋಣ ತೀರಿಸಲು ಪಠ್ಯದಲ್ಲಿ ಗುಲಾಮಿ ಚಿಂತನೆ ತುರುಕುತ್ತಿರುವ ಸಿದ್ದರಾಮಯ್ಯ: ಸುನಿಲ್ ಕುಮಾರ್ ಕೆಂಡ
ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್, ಚಕ್ರವರ್ತಿ ಸೂಲಿಬೆಲೆ ವಿರಚಿತ “ತಾಯಿ ಭಾರತಿ” ಹಾಗೂ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯವನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆ ಮಾಜಿ ಸಚಿವ ಸುನಿಲ್ ಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ
ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾದರೂ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಾಡಿರುವ ಟ್ವೀಟ್‌ನ ಸಂಪೂರ್ಣ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.