ವಿಜಯಪುರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸದಾ ಕಿಡಿಕಾರುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು, ಮಾಜಿ ಸಿಎಂ ಬಗ್ಗೆ ನನಗೆ ಏನೂ ಪ್ರಶ್ನೆ ಕೇಳಬೇಡಿ. ಅವರ ಜತೆಗಿನ ರಾಜಕೀಯ ಸಂಘರ್ಷಕ್ಕೆ ವಿರಾಮ ನೀಡುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಜತೆ ರಾಜಿ ಮಾಡಿಕೊಂಡಿಲ್ಲ. ಆದರೆ, ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಅವರೊಂದಿಗಿನ ರಾಜಕೀಯ ಸಂಘರ್ಷಕ್ಕೆ ಪೂರ್ಣ ವಿರಾಮ ಇಡುತ್ತೇನೆ. ಬಿಎಸ್‌ವೈ ಅವರು ಪಾಪ ಹಿರಿಯರಿದ್ದಾರೆ ಅವರ ಬಗ್ಗೆ ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದೆ. ನಾನು ಮಾತನಾಡಲ್ಲ ಎಂದು ಹೇಳಿದ್ದೇನೆ. ಹೀಗಾಗಿ ಬಿಎಸ್‌ವೈ ಬಗ್ಗೆ ಮಾಧ್ಯಮದವರು ಇನ್ಮುಂದೆ ನನಗೆ ಪ್ರಶ್ನೆ ಕೇಳಬೇಡಿ. ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಮೇಲಿನವರ ಆಶೀರ್ವಾದ ನಿಮ್ಮ ಮೇಲಿದೆಯಂತೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಶೀರ್ವಾದ ಹೌದು, ಅವರು ಹೇಳಿದ್ದಾರೆ. ಚಿಲ್ರೆ ಪಲ್ರೆ ಜನರಿಗೆ ಏನೂ ಉತ್ತರ ಕೊಡಬೇಡ. ನಿನ್ನದೇ ಆದಂತಹ ಒಂದು ಗೌರವ ಬೇರೆ ಇದೆ. ನಿನ್ನ ಕೆಲಸಗಳೆಲ್ಲ ನಮ್ಮ ಗಮನದಲ್ಲಿದೆ, ಒಳ್ಳೆಯ ಕೆಲಸ ಆಗುತ್ತಿದೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ನಿಂದಿಸಬೇಡಿ ಎಂದು ಸೂಚಿಸಿದ್ದಾರೆ. ಹೈಕಮಾಂಡ್ ಹೇಳಿದ ಮೇಲೆ ಸಾಫ್ಟ್ ಆಗಲೇಬೇಕಲ್ಲವೇ? ಎಲ್ಲಾದಕ್ಕೂ ಏನು ಗುರ್ ಎನ್ನಲು ಬರುತ್ತದೆಯೇ ಎಂದು ಹೇಳಿದರು.
ಇದನ್ನೂ ಓದಿ | Karnataka Election: ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ ಬಿಜೆಪಿ ಸೇರ್ಪಡೆ; ಅಪ್ಪನ ʻಕೈʼಬಿಟ್ಟು ಕಮಲ ಹಿಡಿದ ಮಗ
ಯಡಿಯೂರಪ್ಪ ಹಾಗೂ ನಿಮ್ಮ ಮಧ್ಯೆ ರಾಜಿ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಪ್ರಮೈಸ್ ಆಗಲು ನಂದೇನೂ ಆಸ್ತಿ ಅವರು ಕಸಿದುಕೊಂಡಿಲ್ಲ. ಅವರ ಆಸ್ತಿ ನಾನು ಕಸಿದುಕೊಂಡಿಲ್ಲ. ಏನೋ ರಾಜಕೀಯ ಸಂಘರ್ಷ ಇರುತ್ತವೆ. ಇನ್ಮೇಲೆ ಅದೆಲ್ಲದಕ್ಕೂ ವಿರಾಮ ಎಂದು ಹೇಳಿದರು.
ನಗರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂದಾಗ ಗೈರಾದ ವಿಚಾರಕ್ಕೆ ಉತ್ತರಿಸಿ, ನಾನು ಅವರ ಅನುಮತಿ ತಗೊಂಡಿದ್ದೆ, ಅದಕ್ಕೆ ಬಂದಿಲ್ಲ. ಅವರ ಜತೆ ಮಾತನಾಡಿದ್ದರಿಂದ ನನಗೆ ಅನುಮತಿ ಕೊಟ್ಟಿದ್ದರು ಎಂದು ಹೇಳಿದರು.